ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಶೌಚಾಲಯದಲ್ಲಿ ವಿಡಿಯೊ: ವಿದ್ಯಾರ್ಥಿನಿಯರ ಕೃತ್ಯ ಸಾಬೀತು

Published 21 ಮಾರ್ಚ್ 2024, 4:31 IST
Last Updated 21 ಮಾರ್ಚ್ 2024, 4:31 IST
ಅಕ್ಷರ ಗಾತ್ರ

ಉಡುಪಿ: ಇಲ್ಲಿನ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್‌ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್‌ ಮೂಲಕ ವಿಡಿಯೊ ಚಿತ್ರೀಕರಣ ಮಾಡಿರುವ ಪ್ರಕರಣದ ಸಂಬಂಧ ಸಿಐಡಿ ಅಧಿಕಾರಿಗಳು ಉಡುಪಿಯ ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್‌ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು ಶಬನಾಜ್‌, ಅಲ್ಫಿಯಾ ಹಾಗೂ ಅಲಿಮತ್‌ ಉಲ್ ಶಫಾ ಎಂಬ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಸಹಪಾಠಿಯ ವಿಡಿಯೊ ಚಿತ್ರೀಕರಣ ಮಾಡಿರುವುದು ದೃಢಪಟ್ಟಿದೆ ಎಂದು ಉಲ್ಲೇಖಿಸಲಾಗಿದೆ.

ಆರೋಪಿ ವಿದ್ಯಾರ್ಥಿನಿಯರು ಗೆಳತಿಯ ವಿಡಿಯೊ ಮಾಡಲು ಹೋಗಿ ಬೇರೆ ಯುವತಿಯ ಖಾಸಗಿ ವಿಡಿಯೊ ಮಾಡಿರುವುದು, ಬಳಿಕ ಸಾಕ್ಷ್ಯ ನಾಶಮಾಡಲು ಮೊಬೈಲ್‌ನಲ್ಲಿದ್ದ ವಿಡಿಯೊ ಡಿಲೀಟ್‌ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ ಎಂದು ಸಿಐಡಿ ಅಧಿಕಾರಿಗಳು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ಆರೋಪಪಟ್ಟಿಯಲ್ಲಿ ಏನಿದೆ?

ಆರೋಪಿತ ವಿದ್ಯಾರ್ಥಿನಿಯರು ತಮಾಷೆ ಹಾಗೂ ಪ್ರ್ಯಾಂಕ್‌ ವಿಡಿಯೊ ಮಾಡುವ ಹವ್ಯಾಸ ರೂಢಿಸಿಕೊಂಡಿದ್ದು, ಅದರಂತೆ 2023ರ ಜುಲೈ 18ರಂದು ಕಾಲೇಜಿನ ಶೌಚಾಲಯದಲ್ಲಿ ಗೆಳತಿಯ ವಿಡಿಯೊ ಮಾಡಿದ್ದರು. ಆದರೆ, ಆ ವಿಡಿಯೊದಲ್ಲಿ ಗೆಳತಿಯ ಬದಲಾಗಿ ಬೇರೆ ಯುವತಿ ಇರುವುದು ಅರಿವಿಗೆ ಬಂದಿದೆ.

ಕೂಡಲೇ ವಿಡಿಯೊವನ್ನು ಡಿಲೀಟ್ ಮಾಡಿ ಸಂತ್ರಸ್ತೆಗೆ ವಿಡಿಯೊ ಮಾಡಿರುವ ವಿಚಾರ ತಿಳಿಸಿ ಕ್ಷಮೆಯಾಚಿಸಿದ್ದಾರೆ. ಬಳಿಕ ವಿಷಯ ಕಾಲೇಜಿನ ಆಡಳಿತ ಮಂಡಳಿಗೆ ಗೊತ್ತಾಗಿ, ವಿದ್ಯಾರ್ಥಿನಿಯರನ್ನು ವಿಚಾರಣೆಗೊಳಪಡಿಸಿದಾಗ ವಿಡಿಯೊ ಮಾಡಿರುವುದಾಗಿ ಒಪ್ಪಿಕೊಂಡು ಕ್ಷಮಾಪಣೆ ಪತ್ರ ಬರೆದುಕೊಟ್ಟಿದ್ದರು.

ವಿದ್ಯಾರ್ಥಿನಿಯರ ಕೈಬರಹ ಹಾಗೂ ಕ್ಷಮಾಪಣಾ ಪತ್ರದ ಬರಹ ತಾಳೆಯಾಗುತ್ತಿದೆ ಎಂದು ಎಫ್‌ಎಸ್‌ಎಲ್‌ ವರದಿಯೂ ದೃಢೀಕರಿಸಿದೆ. ಜತೆಗೆ ಕಾಲೇಜಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ವಿದ್ಯಾರ್ಥಿನಿಯರ ಮೇಲಿರುವ ಆರೋಪಗಳಿಗೆ ಪೂರಕವಾಗಿದೆ ಎಂದು ಸಿಐಡಿ ಅಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT