ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಿನಿಗೆ ತಡೆಗೋಡೆ: ಗ್ರಾಮಸ್ಥರಿಗೆ ಆತಂಕ

ಪಡುಬಿದ್ರಿ: ಅವೈಜ್ಞಾನಿಕ ಸೇತುವೆ ನಿರ್ಮಾಣದಿಂದಲೇ ಸಮಸ್ಯೆಗೀಡಾಗಿದ್ದ ಜನತೆ, ಕೃಷಿ ಭೂಮಿ
Last Updated 6 ಜೂನ್ 2019, 20:32 IST
ಅಕ್ಷರ ಗಾತ್ರ

ಪಡುಬಿದ್ರಿ: ಇಲ್ಲಿನ ಎಂಡ್ ಪಾಯಿಂಟ್ ಬಳಿ ಕಾಮಿನಿ ನದಿ ದಂಡೆಗೆ ನಿರ್ಮಿಸಿದ ತಡೆಗೋಡೆಯಿಂದ ಮಳೆಗಾಲದಲ್ಲಿ ಮುಳುಗಡೆಯ ಆತಂಕ ಎದುರಾಗಿದೆ.

₹50 ಲಕ್ಷ ರೂ ವೆಚ್ಚದಲ್ಲಿ 300 ಮೀಟರ್ ಉದ್ದದ ತಡೆಗೋಡೆಯನ್ನುಕೆಐಆರ್‌ಡಿಎಲ್ ಹಾಗೂ ಸಣ್ಣ ನೀರಾವರಿ ಇಲಾಖೆ ಮೂಲಕ ನಿರ್ಮಿಸಲಾಗಿದೆ. ನದಿ ದಂಡೆಯ ಅರ್ಧ ಚಂದ್ರಾಕೃತಿ ವ್ಯಾಪ್ತಿಗೆ ಮಾತ್ರ ತಡೆಗೋಡೆಗೆ ಯೋಜನೆ ಸಿದ್ಧಪಡಿಸಲಾಗಿದೆ. ಇದರಿಂದ ಪಡುಹಿತ್ಲು,ಅಂಕುದ್ರು,ನಡಿಪಟ್ಣ,ಕಲ್ಲಟ್ಟೆ,ಕಾಡಿಪಟ್ಣ ಹಾಗೂ ಕಲ್ಸಂಕ ಭಾಗದ ಗ್ರಾಮಸ್ಥರು ನೆರೆ ಭೀತಿಗೆ ಒಳಗಾಗಿದ್ದಾರೆ.

‘ಸ್ಥಳೀಯ ಜನಜೀವನಕ್ಕೆ ಧಕ್ಕೆಯಾಗದಂತೆ ಯೋಜನೆ ಅನುಷ್ಠಾನವಾಗಬೇಕು’ ಎಂಬ ಬೇಡಿಕೆ ಇಡಲಾಗಿತ್ತು. ಆದರೆ, ಇದೀಗ ನದಿಯನ್ನು ಒತ್ತುವರಿ ಮಾಡಿ, ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತಡೆಗೋಡೆಯಿಂದಾಗಿ ಈ ಭಾಗದ ಸಾವಿರಾರು ಎಕರೆ ಕೃಷಿಭೂಮಿ ಹಾಗೂ ಮನೆಗಳು ಮುಳುಗಡೆಯ ಆತಂಕ ಎದುರಿಸುತ್ತಿವೆ. ಇಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ್ದ ಸೇತುವೆಯ ಪರಿಣಾಮ ಕಳೆದ ವರ್ಷ ನೆರೆ ಉಂಟಾಗಿದ್ದು, ಗ್ರಾಮಸ್ಥರು ತೊಂದರೆ ಅನುಭವಿಸಿದ್ದರು. ಬೆಳೆ ಹಾನಿಯಾಗಿತ್ತು. ಅಂದೂ ಅಧಿಕಾರಿಗಳು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ಈಗಲೂ ಜನಾಭಿಪ್ರಾಯ ಪಡೆದಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆ ನಿರ್ದೇಶನದಂತೆ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದು, ಮುಟ್ಟಳಿವೆ ಪ್ರದೇಶದಲ್ಲಿ ತುಂಬಿರುವ ಹೂಳನ್ನು ತೆರವು ಮಾಡಿದಲ್ಲಿ ನೀರು ಸರಾಗವಾಗಿ ಹರಿದು ಹೋಗಲಿದೆ ಎಂದು ಸಣ್ಣ ನೀರಾವರಿ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT