ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ರಿ | ಬತ್ತಿ ಹೋಗಿವೆ ನೀರಿನ ಮೂಲಗಳು; ಸೀತಾನದಿ ಸಂಪೂರ್ಣ ಬತ್ತಿ ಹೋಗುವ ಆತಂಕ

ನೀರಿನ ಸಮಸ್ಯೆ ಎ‌ದುರಾಗುವ ಆತಂಕ
ಸುಕುಮಾರ್‌ ಮುನಿಯಾಲ್‌
Published 14 ಏಪ್ರಿಲ್ 2024, 7:05 IST
Last Updated 14 ಏಪ್ರಿಲ್ 2024, 7:05 IST
ಅಕ್ಷರ ಗಾತ್ರ

ಹೆಬ್ರಿ: ಬಿಸಿಲಿನ ತಾಪ ಏರುತ್ತಿರುವ ನಡುವೆ ತಾಲ್ಲೂಕಿನ ಎಲ್ಲೆಡೆ ಬಾವಿ, ಕೆರೆ, ನದಿಗಳು ಬತ್ತತೊಡಗಿವೆ. ಇದರಿಂದ ನೀರಿನ ಸಮಸ್ಯೆ ಎದುರಾಗಿದ್ದು ಹಲವು ಕಡೆಗಳಲ್ಲಿ ಗ್ರಾಮ ಪಂಚಾಯಿತಿಗಳು ಎರಡು ದಿನಕ್ಕೊಮ್ಮೆ ನೀರು ಬಿಡುತ್ತಿವೆ.

ಹೆಬ್ರಿಯ ಜೀವನದಿ ಎನಿಸಿರುವ ಸೀತಾನದಿಯಲ್ಲಿ ಈ ಬಾರಿ ಸ್ವಲ್ಪ ನೀರಿನ ಹರಿವು ಇದೆ. ತಾಲ್ಲೂಕಿನ ಇತರ ನದಿಗಳು ಈಗಾಗಲೇ ಬತ್ತಿವೆ. ಸೀತಾನದಿ ಕೂಡ ಬತ್ತುವ ಭೀತಿ ಎದುರಾಗಿದೆ.

ಹೆಬ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 700ಕ್ಕೂ ಅಧಿಕ ಖಾಸಗಿ, 28 ಸರ್ಕಾರಿ ಬಾವಿಗಳಿವೆ. ಆದರೂ ಬಹುತೇಕ ಜನರು ಗ್ರಾಮ ಪಂಚಾಯತಿ ಸರಬರಾಜು ಮಾಡುವ ನೀರನ್ನೇ ಅವಲಂಬಿಸಿದ್ದಾರೆ. ಬೇಸಿಗೆಯಲ್ಲಿ ಹೆಬ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಗಾರುಗುಡ್ಡೆ, ಸಾಂತೋಳ್ಳಿ, ಹಾಡಿಮನೆ, ಗಿಲ್ಲಾಳಿ ಪ್ರದೇಶಗಳಲ್ಲಿ ಪ್ರತಿವರ್ಷ ನೀರಿನ ಸಮಸ್ಯೆ ಉಂಟಾಗುತ್ತಿದ್ದು ಟ್ಯಾಂಕರ್‌ ಮೂಲಕ ಪೂರೈಕೆ ಮಾಡಲಾಗುತ್ತಿದೆ.

ನೀರು ಪೋಲಾಗುವುದನ್ನು ತಪ್ಪಿಸಿ: ಸೀತಾನದಿಯ ನೀರು ಅನಗತ್ಯವಾಗಿ ಪೋಲಾಗುತ್ತಿದೆ. ಸರ್ಕಾರದ ಉಚಿತ ವಿದ್ಯುತ್‌ ಯೋಜನೆಯಿಂದಾಗಿ 24 ತಾಸು ಪಂಪ್‌ ಮೂಲಕ ತೋಟಗಳಿಗೆ ನೀರು ಹಾಯಿಸಲಾಗುತ್ತಿದೆ. ಇದರಿಂದ ಸೀತಾನದಿಯ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಮುಂದೆ ಎದುರಾಗಬಹುದಾದ ಗಂಭೀರ ಸಮಸ್ಯೆ ದೂರ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ರಮೇಶ್‌ ಮನವಿ ಮಾಡಿದ್ದಾರೆ. 

ನೀರಿನ ಮೂಲ ಗುರುತಿಸಿದ ತಾಲ್ಲೂಕು ಆಡಳಿತ: ತಾಲ್ಲೂಕಿನಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ತಾಲ್ಲೂಕು ಆಡಳಿತ ವತಿಯಿಂದ ಖಾಸಗಿ ಬೋರ್‌ವೆಲ್‌, ಬಾವಿ ಗುರುತಿಸಲಾಗಿದ್ದು ನೀರು ತೆಗೆಯಲು ಅವುಗಳ ಮಾಲೀಕರಿಂದ ಒಪ್ಪಿಗೆ ಪಡೆದುಕೊಳ್ಳಲಾಗಿದೆ. ಮುದ್ರಾಡಿ, ಅಂಡಾರು, ನಾಡ್ಪಾಲು, ಕುಚ್ಚೂರು, ಶೇಡಿಮನೆ, ಮಡಾಮಕ್ಕಿ, ಮಡಾಮಕ್ಕಿ, ವರಂಗ, ಕೆರೆಬೆಟ್ಟು, ಚಾರ, ಶಿವಪುರ ಪರಿಸರದ 21 ಕಡೆಗಳಲ್ಲಿ ನೀರಿನ ಮೂಲಗಳನ್ನು ಕಂಡುಕೊಳ್ಳಲಾಗಿದೆ.

‘ನೀರಿನ ಸಮಸ್ಯೆ ಆಗದಂತೆ ಸಿದ್ಧತೆ’

ತಾಲ್ಲೂಕಿನಾದ್ಯಂತ ಮುಂದೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಟ್ಯಾಂಕರ್‌ ಮೂಲಕ ನೀರು ಸರಬರಾಜಿಗೆ ಸಿದ್ಧತೆ ನಡೆಸಲಾಗಿದೆ. ಕುಡಿಯುವ ನೀರು ಸಮಸ್ಯೆ ಬಗ್ಗೆ ತುರ್ತು ಸಭೆ ನಡೆಸಿ ಮುನ್ನೆಚ್ಚರಿಕೆ ವಹಿಸಲು ಎಲ್ಲರಿಗೂ ಸೂಚನೆ ನೀಡಲಾಗಿದೆ. ಟ್ಯಾಂಕರ್‌ ನೀರು ಸರಬರಾಜಿಗೆ ಟೆಂಡರ್‌ ಕರೆಯಲಾಗಿದೆ. ಶಿವಪುರ, ಮುನಿಯಾಲು, ಬೆಳ್ವೆ, ಶೇಡಿಮನೆ, ಹೆಬ್ರಿ, ಪಡುಕುಡೂರು ಗ್ರಾಮದಲ್ಲಿ 6 ಟ್ಯಾಂಕರ್‌ಗಳಿಗೆ ನೀರು ಸರಬರಾಜು ವ್ಯವಸ್ಥೆ ಜವಾಬ್ದಾರಿ ನೀಡಲಾಗಿದೆ ಎಂದು ತಹಶೀಲ್ದಾರ್ ಎಸ್.‌ಎ. ಪ್ರಸಾದ್‌ ತಿಳಿಸಿದರು.

ಹಲವೆಡೆ ನೀರಿನ ಸಮಸ್ಯೆ
ಕುಚ್ಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತಾ ಕಾಲೊನಿ, ಕುಡಿಬೈಲು, ಮಾತ್ಕಲ್ಲು, ಹಾಲಿಕೊಡ್ಲು, ಕಾನ್ಬೆಟ್ಟುಜಡ್ಡು, ಸಳ್ಳೇಕಟ್ಟೆ, ದೇವಳಬೈಲು, ಚಿನ್ನಾರಕಟ್ಟೆ, ದೂಪದಕಟ್ಟೆ, ಬೇಳಂಜೆ 5 ಸೆಂಟ್ಸ್‌, ಕೆಪ್ಪೆಕೆರೆ, ಕಮ್ತ, ದಾಸನಗುಡ್ಡೆ, ಶಿವಪುರ ಗ್ರಾಮದ ಕಾಳಾಯಿ, ಕೆರೆಬೆಟ್ಟು, ಖಜಾನೆ, ಮೂರ್ಸಾಲು, ಯಡ್ದೆ, ಗಾಳಿಗುಡ್ಡೆ, ಚಾರ ಗ್ರಾಮ ಪಂಚಾಯಿತಿಯ ಮಂಡಾಡಿಜಡ್ಡು, ಹುತ್ತುರ್ಕೆ, ಗಾಂಧಿನಗರ, ತೆಂಕಬೆಟ್ಟು, ಜೋಮ್ಲುಮಕ್ಕಿ, ಗೋವೆಹಾಡಿ, ಗರಡಿಬೆಟ್ಟು, ಮೇಲ್‌ ಮಂಡಾಡಿ, ಕನ್ಯಾನ, ಕಾರಾಡಿ, ನೀರುತೊಟ್ಲು, ವಿದ್ಯಾನಗರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT