ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟದ ಕೃಷಿಯಲ್ಲಿ ಯಶಸ್ಸು ಕಂಡ ಮಹಿಳೆ

ಸಿದ್ದಾಪುರ: ತೋಟದಲ್ಲಿ ಕೆಲಸ ಮಾಡಲು ಹಿಂಜರಿಯದ ಬಿ.ಕಾಂ ಪದವೀಧರೆ
Last Updated 8 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಸಿದ್ದಾಪುರ:ಅನಿರೀಕ್ಷಿತ ಸಂದರ್ಭದಲ್ಲಿ ಕೃಷಿ ಕ್ಷೇತ್ರದ ಜವಾಬ್ದಾರಿ ವಹಿಸಿಕೊಂಡ ತಾಲ್ಲೂಕಿನ ಶಿರಳಗಿಯ ಮಧುಮತಿ ರಾಜಶೇಖರ ಶೀಗೇಹಳ್ಳಿ ಕಠಿಣ ಹಾದಿಯಲ್ಲಿ ನಡೆದು, ಯಶಸ್ಸು ಕಂಡಿದ್ದಾರೆ.

ಬಿ.ಕಾಂ ಪದವೀಧರರಾಗಿದ್ದರೂ ಕೃಷಿಯನ್ನೇ ನೆಚ್ಚಿಕೊಂಡ ಈ ಮಹಿಳೆ, ಅದರಿಂದಲೇ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ‘ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಗಾದೆ ಮಾತನ್ನು ಅಕ್ಷರಶಃ ಕಾರ್ಯರೂಪಕ್ಕೆ ತಂದಿರುವ ಅವರು, ತಮ್ಮ ತೋಟದಲ್ಲಿ ದುಡಿಯಲು ಎಂದೂ ಹಿಂಜರಿದಿಲ್ಲ. ಅವರ ನಿರಂತರ ದುಡಿಮೆಯ ಫಲವಾಗಿ ಅವರ ತೋಟದಲ್ಲಿ ಅಡಿಕೆ ಇಳುವರಿ ಹೆಚ್ಚಳವಾಗಿದೆ. ಇಬ್ಬರು ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಾಗಿದೆ.

ಯಲ್ಲಾಪುರ ತಾಲ್ಲೂಕಿನ ಹಿತ್ಲಳ್ಳಿ ತವರು ಮನೆಯಾಗಿರುವ ಮಧುಮತಿ, ಪಟ್ಟಣದ ಪ್ರತಿಷ್ಠಿತ ಶೀಗೇಹಳ್ಳಿ ಕುಟುಂಬದ ರಾಜಶೇಖರ ಅವರನ್ನು ಮದುವೆಯಾಗಿ ಇಲ್ಲಿಗೆ ಬಂದರು. 2007ರಲ್ಲಿ ಪತಿ ಮೃತಪಟ್ಟಾಗ, ಏಕಾಏಕಿ ಕೃಷಿಯ ಜವಾಬ್ದಾರಿ ಅವರ ಹೆಗಲೇರಿತು. ವಯೋವೃದ್ಧ ಅತ್ತೆ ಹಾಗೂ ಇಬ್ಬರು ಗಂಡು ಮಕ್ಕಳನ್ನು ನೋಡಿಕೊಳ್ಳುವ ಕೆಲಸವೂ ಇವರ ಪಾಲಿಗೆ ಬಂದೊದಗಿತು. ಅಲ್ಲಿಯವರೆಗೂ ಸಿದ್ದಾಪುರ ಪಟ್ಟಣದಲ್ಲಿ ವಾಸಿಸುತ್ತಿದ್ದ ಅವರು, ತಮ್ಮ ಕುಟುಂಬದ ಅಡಿಕೆ ತೋಟವಿದ್ದ ಶಿರಳಗಿ ಎಂಬ ಹಳ್ಳಿಗೆ ಸ್ಥಳಾಂತರಗೊಂಡರು. ಅದೇ ಹಳ್ಳಿಯಲ್ಲಿ ಮನೆಯೊಂದನ್ನು ಕಟ್ಟಿದರು. ಕೃಷಿ ಅಷ್ಟಾಗಿ ಗೊತ್ತಿರದೇ ಇದ್ದರೂ ಎದೆಗುಂದದೇ ತೋಟದ ಕೆಲಸದಲ್ಲಿ ತೊಡಗಿಕೊಂಡರು. ಅಗತ್ಯವಿದ್ದಾಗ ಕೂಲಿಕಾರರನ್ನು ಕರೆಸಿಕೊಂಡು, ತೋಟ ಹಾಳಾಗದಂತೆ ನೋಡಿಕೊಂಡರು.

ತಮ್ಮಎರಡುಎಕರೆ ತೋಟದಲ್ಲಿ ಅಡಿಕೆಯೊಂದಿಗೆ ಕಾಳುಮೆಣಸು, ಲವಂಗ, ಜಾಯಿಕಾಯಿ, ಕೊಕ್ಕೋ, ಕಾಫಿ, ಬಾಳೆ ಬೆಳೆಯುವ ಅವರು, ತಾವೇ ಅಡಿಕೆ ಕೊಯ್ಯಿಸಿ, ಸುಲಿಸಿ, ಸಿದ್ಧಪಡಿಸಿ ಮಾರಾಟ ಮಾಡುತ್ತಾರೆ. ಈಗ ಹೊಸದಾಗಿ ಜೇನು ಕೃಷಿಯನ್ನೂ ಮಾಡುತ್ತಿದ್ದಾರೆ. ಅಡಿಕೆ ಕೊಯ್ಲಿನ ತಾಪತ್ರಯ ಹೆಚ್ಚಾಗಿರುವ ಇಂದಿನ ಪರಿಸ್ಥಿತಿಯಲ್ಲಿಯೂ ‘ಫಸಲು ಗುತ್ತಿಗೆ’ಯತ್ತ (ಮರದಲ್ಲಿರುವ ಅಡಿಕೆಯನ್ನೇ ಮಾರಾಟ ಮಾಡುವುದು) ಅವರು ಮನಸ್ಸು ಮಾಡಿಲ್ಲ.

ಅವರಿಗೆ ಕಾರಿನ ಚಾಲನೆ ಗೊತ್ತಿರುವ ಕಾರಣಹಲವು ಕೆಲಸಗಳು ಸುಲಭವಾಗಿವೆಯಂತೆ. ‘ಕಾರ್ ಡ್ರೈವಿಂಗ್ ಕಲಿತಿದ್ದರಿಂದ ಪೇಟೆ, ಪಟ್ಟಣಕ್ಕೆ ಬರಲು ಅಥವಾ ತೋಟದ ಕೆಲಸಕ್ಕೆ ಆಳುಗಳನ್ನು ಕರೆದುಕೊಂಡು ಹೋಗಲು ಬೇರೆಯವರನ್ನು ಅವಲಂಬಿಸುವ ಪ್ರಮೇಯ ಬರಲಿಲ್ಲ. ಸ್ವತಂತ್ರವಾಗಿಯೇ ಕೃಷಿ ವ್ಯವಹಾರ ನಡೆಸಲು ಸುಲಭವಾಯಿತು’ ಎಂದು ಮಧುಮತಿ ನೆನಪು ಮಾಡಿಕೊಳ್ಳುತ್ತಾರೆ.

ಸನ್ಮಾನ, ಗೌರವ:2017ರಲ್ಲಿ ಕೃಷಿ ಇಲಾಖೆ ಮಧುಮತಿ ಅವರನ್ನು ‘ಉತ್ತಮ ಕೃಷಿ ಮಹಿಳೆ’ ಎಂದು ಸನ್ಮಾನಿಸಿದೆ. ಅಖಿಲ ಹವ್ಯಕ ಸಮ್ಮೇಳನದಲ್ಲಿ ‘ಹವ್ಯಕ ಕೃಷಿ ರತ್ನ’ ಪ್ರಶಸ್ತಿ ಪ್ರದಾನವಾಗಿದೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಭುವನಗಿರಿಯಲ್ಲಿ ಮಾತೃವಂದನಾ ಸಮಿತಿ ಮತ್ತು ಇತ್ತೀಚೆಗೆ ಪಟ್ಟಣದಲ್ಲಿ ಲಯನ್ಸ್ ಕ್ಲಬ್ ಅವರನ್ನು ಗೌರವಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT