ಸುಳ್ಳು ಜಾತಿ ಪ್ರಮಾಣ ಪತ್ರ: ದೂರು ದಾಖಲು

7

ಸುಳ್ಳು ಜಾತಿ ಪ್ರಮಾಣ ಪತ್ರ: ದೂರು ದಾಖಲು

Published:
Updated:

ಕಾರವಾರ: ಸುಳ್ಳು ಮಾಹಿತಿ ನೀಡಿ ಪರಿಶಿಷ್ಟ ಜಾತಿಯವರೆಂದು ಪ್ರಮಾಣಪತ್ರ ಪಡೆದುಕೊಂಡ ಎಂಟು ಮಂದಿಯ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಶನಿವಾರ ದೂರು ದಾಖಲಾಗಿದೆ.

ಈ ಕುರಿತು ತನಿಖೆ ಕೈಗೊಂಡಿದ್ದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮಂಗಳೂರು ಎಸ್‌ಪಿ ಕಚೇರಿಯ ಸೂಚನೆಯ ಮೇರೆಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಹಿಂದುಳಿದ ಪ್ರವರ್ಗ –2ರ ಬಾಂದಿ ಜಾತಿಗೆ ಸೇರಿದ್ದ ಕಾರವಾರ ಹಬ್ಬುವಾಡದ ಶ್ಯಾಮಲಾ ಬಾಂದೇಕರ್ ಅವರು 1978ರ ಆಗಸ್ಟ್ 7ರಂದು ಸುಳ್ಳು ಮಾಹಿತಿ ನೀಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮುಖ್ಯ ಸೇವಿಕಾ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದರು. 

ಕುಂದಾಪುರದ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಸಹಾಯಕ ನಿರ್ದೇಶಕರಾಗಿರುವ ಸುಬ್ಬಿ ಎಸ್ ಸಿದ್ದನ್ ಅವರ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಂದುಳಿದ ವರ್ಗದ ಪ್ರವರ್ಗ -2 (ಎ)ಗೆ ಸೇರಿದ, ಬಾಂದಿ ಜಾತಿಯವರಾದ ಅವರು, ಮೊಗೇರ ಜಾತಿಯವರೆಂದು ಹೊನ್ನಾವರ ತಹಶೀಲ್ದಾರ್‌ರಿಂದ ಪ್ರಮಾಣ ಪತ್ರ ಪಡೆದುಕೊಂಡಿದ್ದರು.

ಭಟ್ಕಳ ಪೊಲೀಸ್ ಠಾಣೆಯಲ್ಲಿ ಆರು ಮಂದಿ ವಿರುದ್ಧ ದೂರು ದಾಖಲಾಗಿದೆ. ಅವರಲ್ಲಿ ಹಿಂದುಳಿದ ವರ್ಗದ ಪ್ರವರ್ಗ- 1ರ ಮೊಗೇರ ಜಾತಿಗೆ ಸೇರಿದ, ಸಣಬಾವಿಯ ಶಿವಾನಂದ ಎಂಬುವವರು ಪರಿಶಿಷ್ಟ ಜಾತಿಯ ಮೊಗೇರ ಎಂದು ಪ್ರಮಾಣ ಪತ್ರ ಪಡೆದಿದ್ದರು.

ಇದೇ ತಾಲ್ಲೂಕಿನ ಮುಂಗ್ರಿಮನೆಯ ಮುರಳಿ ಎಂಬುವವರು ಸುಳ್ಳು ಮಾಹಿತಿ ನೀಡಿ ತಹಶೀಲ್ದಾರರಿಂದ ಪ್ರಮಾಣಪತ್ರ ಪಡದುಕೊಂಡಿದ್ದರು. ಜಾಲಿಯ ಪರಮೇಶ್ವರ ಎಂಬುವವರು ಹಿಂದುಳಿದ ವರ್ಗದ ಪ್ರವರ್ಗ–1 ಸರ ಮೊಗೇರ ಜಾತಿಗೆ ಸೇರಿದವರಾಗಿದ್ದರೂ ಪರಿಶಿಷ್ಟ ಜಾತಿಯ ಮೊಗೇರ ಜಾತಿಯವರೆಂದು ತಪ್ಪು ಮಾಹಿತಿ ನೀಡಿದ್ದರು. ಅವರಿಬ್ಬರೂ ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ ಆಗಿ ಆಯ್ಕೆಯಾಗಿದ್ದರು.

ಕರಿಕಲ್ ಗ್ರಾಮದ ರೋಹಿತ್ ಕೂಡ ಹಿಂದುಳಿದ ವರ್ಗದ ಪ್ರವರ್ಗ– 1ರ ಮೊಗೇರ ಜಾತಿಗೆ ಸೇರಿದವರು. ಆದರೆ, ಪರಿಶಿಷ್ಟ ಜಾತಿಯ ಮೊಗೇರ ಎಂದು ಪ್ರಮಾಣ ಪತ್ರ ಪಡೆದು ಮಂಗಳೂರಿನ ಸರ್ಕಾರಿ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸೀಟನ್ನು ಮೀಸಲಾತಿ ಅಡಿಯಲ್ಲಿ ಪಡೆದುಕೊಂಡಿದ್ದರು.

ಹಿಂದುಳಿದ ವರ್ಗದ ಪ್ರವರ್ಗ– 1ರ ಮೊಗೇರ ಜಾತಿಗೆ ಸೇರಿದ ಸೋಡಿಗದ್ದೆಯ ಚಂದ್ರಶೇಖರ, ಪರಿಶಿಷ್ಟ ಜಾತಿಯ ಮೊಗೇರ ಜಾತಿಯವರೆಂದು ಸುಳ್ಳು ಹೇಳಿದ್ದರು. ಅವರು ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗೆ ಆಯ್ಕೆಯಾಗಿದ್ದರು.

ಇದೇ ಸಮುದಾಯಕ್ಕೆ ಸೇರಿದವರಾದ  ಬಾಪಿಹಿತ್ಲುವಿನ ತಿಮ್ಮಪ್ಪ ಎಂಬುವವರು ಪರಿಶಿಷ್ಟ ಜಾತಿಯ ಮೊಗೇರ ಎಂದು ಸುಳ್ಳು ಮಾಹಿತಿ ನೀಡಿ ಶಿಕ್ಷಕರಾಗಿ ಆಯ್ಕೆಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !