ಸೋಮವಾರ, ಸೆಪ್ಟೆಂಬರ್ 27, 2021
25 °C
ಬೆಳಂಬಾರದ ದೇವಸ್ಥಾನದಲ್ಲಿ ಕಲಾವೃದ್ಧಿ ಹೋಮ ಸಂಪನ್ನ

ನಾಲ್ಕು ದಶಕ ಇತಿಹಾಸದ ಮಹಾಸತಿ ದೇಗುಲ

ಪ್ರವೀಣ್ ಗೌಡ ಬೆಳಂಬಾರ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಅಂಕೋಲಾ ತಾಲ್ಲೂಕಿನ ಬೆಳಂಬಾರ ಗ್ರಾಮದ ವಾಡಿಬೊಗ್ರಿ ಶಾಲೆಯ ಸಮೀಪವಿರುವ ಮಹಾಸತಿ ಹಾಗೂ ಸನ್ಯಾಸಿ ದೇವರ ದೇವಾಲಯಕ್ಕೆ 40ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಆರಾಧ್ಯ ದೇವರಿಗೆ ವರ್ಷಪೂರ್ತಿ ಶ್ರದ್ಧಾನಿಷ್ಠೆಯಿಂದ ನಡೆದುಕೊಳ್ಳುವ ಸಾವಿರಾರು ಭಕ್ತರಿದ್ದಾರೆ.

ಹಿಂದೂ ಸಂಪ್ರದಾಯದ ವಿಶೇಷ ದಿನಗಳಂದು ದೇವಸ್ಥಾನದಲ್ಲಿ ಪೂಜೆ, ಹೋಮ, ಹವನಗಳನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಲಾಗುತ್ತದೆ. ದೇವಸ್ಥಾನದ ಸುತ್ತಮುತ್ತ ಜಾತ್ರೆಯ ವಾತಾವರಣ ಉಂಟಾಗಿ ಸಂಭ್ರಮ ಮೇಳೈಸುತ್ತದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹೇಳಿಕೊಂಡ ಹರಕೆಗಳನ್ನು ಸಲ್ಲಿಸಿ ಭಕ್ತಿ ಮೆರೆಯುತ್ತಾರೆ.

ದೇವಸ್ಥಾನದಲ್ಲಿ ಕಲಾವೃದ್ಧಿ ಹೋಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವು ಈಚೆಗೆ ವಿಜೃಂಭಣೆಯಿಂದ ನೆರವೇರಿತು.‌ ಕಲಾವೃದ್ಧಿಯ ಅಂಗವಾಗಿ ದೇಗುಲದಲ್ಲಿ ಗಣೇಶ ಪೂಜೆ, ಪುಣ್ಯಾಹ ನಾಂದಿ, ದೇವ ಪ್ರಾರ್ಥನೆ, ಕೌತುಕ ಬಂಧನ, ವಾಸ್ತು, ರಾಕ್ಷೋಘ್ನ ಹೋಮ, ಬಲಿ, ಕರ್ಮಾಂಗ ಪುಣ್ಯಾಹ, ಭೂತ ಶುದ್ಧಿ, ನವಗ್ರಹ ಹೋಮ, ಪೂರ್ಣಾಹುತಿ ಹಮ್ಮಿಕೊಳ್ಳಲಾಯಿತು. ಇದರೊಂದಿಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಿಷ್ಠೆಯಿಂದ ನೆರವೇರಿಸಲಾಯಿತು.

ಭಕ್ತರು ಈ ಕೈಂಕರ್ಯದಲ್ಲಿ ಪಾಲ್ಗೊಂಡು, ದೇವರಿಗೆ ಹಣ್ಣು– ಕಾಯಿ ಸಮರ್ಪಿಸಿದರು. ತೀರ್ಥ ಪ್ರಸಾದ ಸ್ವೀಕರಿಸಿದರು. ಭಕ್ತಿಪೂರ್ಣವಾಗಿ ನಡೆದ ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಅರ್ಚಕರು, ಕಲಾವೃದ್ಧಿ ಹೋಮ ಕಾರ್ಯಕ್ಕೆ ವಿಶೇಷ ಆಮಂತ್ರಿತರು, 10 ಮಂದಿ ಪ್ರಮುಖರು, ದೇವಸ್ಥಾನದ ಸಮಿತಿಯವರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.

ಕಾರ್ಯಕ್ರಮದ ಅಂಗವಾಗಿ ಅಂದು ರಾತ್ರಿ ‘ಹಾಲಕ್ಕಿ ಒಕ್ಕಲಿಗರ ಯಕ್ಷ ರಂಗವೇದಿಕೆ’ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ನಳ ದಮಯಂತಿ’ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು. ಕಲಾವಿದರು ಕಲಾಪ್ರೇಮಿಗಳಿಂದ ಮೆಚ್ಚುಗೆ ಗಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು