ಬುಧವಾರ, ಜೂನ್ 29, 2022
24 °C
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎನ್.ಪಿ.ಸಿ.ಐ.ಎಲ್, ಸರ್ಕಾರದಿಂದ ವಿವಿಧ ಕಾಮಗಾರಿ

ಅರೆಬರೆ ಅಭಿವೃದ್ಧಿಯಾದ ಮಾವಿನಮನೆ

ನಾಗರಾಜ ಮದ್ಗುಣಿ Updated:

ಅಕ್ಷರ ಗಾತ್ರ : | |

Prajavani

ಯಲ್ಲಾಪುರ: ತಾಲ್ಲೂಕು ಕೇಂದ್ರದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಮಾವಿನಮನೆ (ಮಲವಳ್ಳಿ) ಗ್ರಾಮ ಪಂಚಾಯಿತಿಯು ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹಸಿರು ಗುಡ್ಡಗಾಡುಗಳ ನಡುವೆಯಿದೆ.

ಕಣ್ಣಿನ ದೂರದ ಅಳತೆಯವರೆಗೂ ಸೌಂದರ್ಯವನ್ನು ತೋರಿಸುವ ಸೂರ್ಯ ಕಲ್ಯಾಣಿ, ಹೆಗ್ಗಾರ ಮನೆ ಗುಡ್ಡ, ಸಾವಿರಾರು ಬಾವಲಿಗಳ ಆವಾಸ ಸ್ಥಾನ ಬಾವಲಕ್ಕಿ ಗುಹೆ, ದೇವಕಾರು ಜಲಪಾತದ ಶಿರಸ್ಸು, ಕಾನೂರು ಫಾಲ್ಸ್ ಇವೆಲ್ಲವೂ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಮಾವಿನಮನೆ, ಬೇಣದಗುಳೆ, ಕಾನೂರು, ಮರಳ್ಳಿ, ಬಾರೆ ಐದು ಗ್ರಾಮಗಳು ಸೇರಿ ಮಾವಿನಮನೆ ಗ್ರಾಮ ಪಂಚಾಯಿತಿ ರೂಪುಗೊಂಡಿದೆ. ಅಡಿಕೆ ಮತ್ತು ತೆಂಗು, ಭತ್ತ ಇಲ್ಲಿನ ಪ್ರಮುಖ ಬೆಳೆ. 2011ರ ಜನಗಣತಿ ಪ್ರಕಾರ 721 ಮನೆಗಳಲ್ಲಿ 3,228 ಜನಸಂಖ್ಯೆಯಿತ್ತು. 

ಗ್ರಾಮ ಪಂಚಾಯಿತಿಯ 8 ಸದಸ್ಯರಲ್ಲಿ 7 ಮಂದಿ ಬಿ.ಜೆ.ಪಿ. ಬೆಂಬಲಿತರು. ಮೀಸಲಾತಿ ಕಾರಣದಿಂದ ಅಧ್ಯಕ್ಷೆ ಸ್ಥಾನದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಮಂಗಲಾ ಕುಣಬಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಅಲ್ಲೊಂದು ಇಲ್ಲೊಂದು ಮನೆಗಳಿರುವ ಕಾರಣ ಅಭಿವೃದ್ಧಿಗೆ ಅನುದಾನ ಕಡಿಮೆಯಾಗುತ್ತಿದೆ. ಈಚಿನ ವರ್ಷಗಳಲ್ಲಿ ಹಲವು ರಸ್ತೆಗಳಿಗೆ ಕಾಂಕ್ರೀಟ್ ಮಾಡಲಾಗಿದೆ.

ಗ್ರಾಮದಲ್ಲಿರುವ ಬಿ.ಎಸ್.ಎನ್.ಎಲ್. ಟವರ್ ವಿದ್ಯುತ್ ಇದ್ದರೆ ಮಾತ್ರ ಸಿಗ್ನಲ್ ನೀಡುತ್ತದೆ. ಮಳೆಗಾಲ ವಿದ್ಯುತ್ ಒಮ್ಮೆ ಹೋದರೆ ಎರಡು ಮೂರು ದಿನ ಕಣ್ಮರೆಯಾಗುತ್ತದೆ. ಗುಳ್ಳಾಪುರ ಗ್ರಿಡ್ ಮೂಲಕ ಪದ್ಮಾಪುರ– ಹೆಗ್ಗಾರ ಮೂಲಕ ನಿರಂತರ ವಿದ್ಯುತ್ ಪೂರೈಕೆಗೆ ₹ 2.5 ಕೋಟಿ ಮಂಜೂರಾಗಿದೆ. ಕಾಮಗಾರಿ ಅರ್ಧಂಬರ್ಧ ಆಗಿದೆ. 

ಪದ್ಮಾಪುರ– ಹೆಗ್ಗಾರ ಮೂಲಕ ಅಂಕೋಲಾ ತಾಲ್ಲೂಕಿನ ವಜ್ರಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ 10 ಕಿಲೋಮೀಟರ್ ರಸ್ತೆಯನ್ನು ಸರ್ವ ಋತು ಬಳಕೆಗೆ ಅಭಿವೃದ್ಧಿ ಪಡಿಸಬೇಕು ಎಂಬುದು ದಶಕಗಳ ಬೇಡಿಕೆಯಾಗಿದೆ. ಇದರಿಂದಾಗಿ ಅಂಕೋಲಾಕ್ಕೆ 100 ಕಿಲೋಮೀಟರ್ ಸುತ್ತಿ ಬಳಸಿ ಹೋಗುವ ಬದಲು ಕೇವಲ 50 ಕಿಲೋಮೀಟರ್‌ನಲ್ಲಿ ತಲುಪಬಹುದು.

ಮಾವಿನಮನೆ ಪ್ರಾಥಮಿಕ ಪತ್ತಿನ ಸಹಕಾರ ಸಂಘವು ಜನರಿಗೆ ವಿವಿಧ ರೀತಿಯಲ್ಲಿ ಸಹಕಾರಿಯಾಗಿದೆ. ಗ್ರಾಮದ ಆರಾಧ್ಯ ದೇವ ರಾಮಲಿಂಗೇಶ್ವರ ದೇವಸ್ಥಾನವಿದೆ. ಗ್ರಾಮ ಪಂಚಾಯಿತಿ ಕೇಂದ್ರದಿಂದ 11 ಕಿಲೋಮೀಟರ್ ದೂರದಲ್ಲಿರುವ ಕುಗ್ರಾಮ ಮರಳ್ಳಿ.

ಇದು ಯಲ್ಲಾಪುರ, ಅಂಕೋಲಾ ಮತ್ತು ಕಾರವಾರ ತಾಲ್ಲೂಕುಗಳ ಗಡಿಗಳು ಸೇರುವ ಸ್ಥಳ. ಕುಣಬಿ, ಗೌಡ ಮುಂತಾದ ಸಮುದಾಯದವರೇ ಹೆಚ್ಚಾಗಿ ವಾಸವಿದ್ದಾರೆ. ಇಲ್ಲಿ ಶಾಲೆಯಿದ್ದರೂ ಹೆಚ್ಚಿನ ವಿದ್ಯಾಭ್ಯಾಸ ಪಡೆದವರು ಕಡಿಮೆಯೇ. ಇಲ್ಲಿಗೆ ಬಸ್ ವ್ಯವಸ್ಥೆ, ಪಡಿತರ ಅಂಗಡಿ, ದೂರವಾಣಿ ಸೌಲಭ್ಯ ಮತ್ತು ಸರ್ವಋತು ರಸ್ತೆ ತುರ್ತಾಗಿ ಬೇಕಿದೆ ಎಂದು ಸ್ಥಳೀಯರು ಬೇಡಿಕೆಯಿಡುತ್ತಾರೆ.

ಸಿಬ್ಬಂದಿ ಕೊರತೆ:

26 ಕಿಲೋಮೀಟರ್ ದೂರದಲ್ಲಿರುವ ಕೈಗಾ ಅಣು ವಿದ್ಯುತ್ ಸ್ಥಾವರವು, ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಯಿಂದ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ.

ಆದರೆ, ಸರ್ಕಾರದ ವಿವಿಧ ಇಲಾಖೆಗಳಿಗೆ ಕಟ್ಟಡಗಳಾದರೂ ಕಾರ್ಯ ನಿರ್ವಹಿಸಲು ಸಿಬ್ಬಂದಿ ಕೊರತೆ ಇದೆ. ಗ್ರಾಮ ಪಂಚಾಯಿತಿಯಲ್ಲಿ ಪ್ರಭಾರ ಪಿ.ಡಿ.ಒ ಇದ್ದರೆ, ಕಾರ್ಯದರ್ಶಿ ಹುದ್ದೆ ಖಾಲಿಯಿದೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಸರ್ಕಾರಿ ಆಸ್ಪತ್ರೆಗೆ ಉತ್ತಮ ಕಟ್ಟಡವಿದ್ದರೂ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಫಾರ್ಮಸಿಸ್ಟ್, ಪ್ರಯೋಗಾಲಯ ತಂತ್ರಜ್ಞ ಹಾಗೂ ಇಬ್ಬರು ಆಶಾ ಕಾರ್ಯಕರ್ತೆಯರ ಹುದ್ದೆಗಳು ಖಾಲಿ ಇದೆ.

------

* ವಿದ್ಯುತ್ ಸಮಸ್ಯೆ ಪರಿಹಾರ, ಪದ್ಮಾಪುರ– ಹೆಗ್ಗಾರಕ್ಕೆ ಸರ್ವ ಋತು ರಸ್ತೆ, ಬಿ.ಸಿ.ಎಂ. ಹಾಸ್ಟೆಲ್, ಸರ್ಕಾರಿ ಕಚೇರಿ, ಆಸ್ಪತ್ರೆಗಳಲ್ಲಿ ಸಿಬ್ಬಂದಿ ನೇಮಕ ಪ್ರಮುಖ ಬೇಡಿಕೆಗಳಾಗಿವೆ.

- ಸುಬ್ಬಣ್ಣ ಕುಂಟೆಗಾಳಿ, ಮಾವಿನಮನೆ ಗ್ರಾ.ಪಂ ಉಪಾಧ್ಯಕ್ಷ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.