ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ತಿಂಗಳು ಪಾವತಿಸಿ ನಿಲುಗಡೆ: ಬೈಕ್‌ಗೆ ₹ 5, ಕಾರಿಗೆ ₹ 10

ಕಾರವಾರದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ನಿರ್ಧಾರ
Last Updated 19 ಮಾರ್ಚ್ 2022, 14:52 IST
ಅಕ್ಷರ ಗಾತ್ರ

ಕಾರವಾರ: ನೂತನವಾಗಿ ಅನುಮೋದನೆಗೊಂಡ ಪಾರ್ಕಿಂಗ್ ನಕ್ಷೆಯ ಪ್ರಕಾರ ನಗರದಲ್ಲಿ ಇನ್ನು ಮುಂದೆ ವಾಹನಗಳ ನಿಲುಗಡೆ ಮಾಡಲಾಗುತ್ತದೆ. ಈ ಸಂಬಂಧ ಜಿಲ್ಲಾ ರಸ್ತೆ ಸುರಕ್ಷತಾ ಪ್ರಾಧಿಕಾರದ ಆದೇಶವನ್ನು ನಗರಸಭೆ ಜಾರಿಗೊಳಿಸಲಿದೆ.

ಅನುಮೋದಿತ ನಕ್ಷೆಯ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆಗೆ, ಮೂರು ತಿಂಗಳು ಪ್ರಾಯೋಗಿಕವಾಗಿ ಶುಲ್ಕ ಆಕರಿಸಲಾಗುತ್ತದೆ. ದ್ವಿಚಕ್ರ ವಾಹನಕ್ಕೆ ಪ್ರತಿ ಗಂಟೆಗೆ ₹ 5 ಹಾಗೂ ನಾಲ್ಕು ಚಕ್ರಗಳ ವಾಹನಕ್ಕೆ ₹ 10 ಪಡೆಯಲಾಗುವುದು. ನಾಗರಿಕರ ಪ್ರತಿಕ್ರಿಯೆ ಆಧರಿಸಿ ಮುಂದುವರಿಸುವ ಅಥವಾ ರದ್ದು ಪಡಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ನಗರಸಭೆ ಆಯುಕ್ತ ಆರ್.ಪಿ.ನಾಯ್ಕ, ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ತಿಳಿಸಿದರು.

ಕೋಡಿಬಾಗ ರಸ್ತೆಯಲ್ಲಿ ಮಾಲಾದೇವಿ ಮೈದಾನದವರೆಗೆ, ಮಹಾತ್ಮ ಗಾಂಧಿ ರಸ್ತೆಯಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿಯವರೆಗೆ, ಹಬ್ಬುವಾಡ ರಸ್ತೆಯಲ್ಲಿ ಮುರಳೀಧರ ರಸ್ತೆ ಕ್ರಾಸ್‌ ತನಕ, ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಬಿಲ್ಟ್ ವೃತ್ತದವರೆಗೆ ಹಾಗೂ ಕೆ.ಇ.ಬಿ ರಸ್ತೆಯಲ್ಲಿ ‌ಹೆಸ್ಕಾಂ ಕಚೇರಿಯವರೆಗೆ ಪಾವತಿಸಿ ವಾಹನ ನಿಲುಗಡೆ ಮಾಡುವ ಪದ್ಧತಿ ಜಾರಿಗೆ ಬರಲಿದೆ.

ಏಕಮುಖ ಸಂಚಾರ: ಸುಭಾಸ್ ವೃತ್ತದಿಂದ ಗೀತಾಂಜಲಿ ಚಿತ್ರಮಂದಿರದವರೆಗೆ ಏಕಮುಖ ಸಂಚಾರ ಇರಲಿದೆ. ಹಾಗಾಗಿ ಈ ರಸ್ತೆಯಲ್ಲಿ ನಾಲ್ಕು ಚಕ್ರಗಳ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಇಲ್ಲಿನ ಬದಲು ರಾಧಾಕೃಷ್ಣ ದೇವಸ್ಥಾನ ರಸ್ತೆಯಲ್ಲಿ ನಿಲುಗಡೆ ಮಾಡಬಹುದು.

ಸವಿತಾ ಹೋಟೆಲ್ ರಸ್ತೆಯ ಎರಡೂ ಬದಿಗಳಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್‌ ಮಾಡಬಹುದು. ವೃತ್ತದ ಹಿಂದಿನ ರಸ್ತೆಯಲ್ಲಿ ಪರ್ಯಾಯ ದಿನಗಳಂದು ನಿಲ್ಲಿಸಬಹುದು. ಪಿಕಳೆ ರಸ್ತೆಯಲ್ಲಿ ಆಸ್ಪತ್ರೆಯಿಂದ ಡೌನ್ ಚರ್ಚ್ ರಸ್ತೆಯ ಕ್ರಾಸ್‌ ತನಕ ಪಾರ್ಕಿಂಗ್‌ಗೆ ಅವಕಾಶವಿಲ್ಲ. ಹಾಗಾಗಿ ಇಲ್ಲಿ ಕೂಡ ಪಾರ್ಕಿಂಗ್ ವ್ಯವಸ್ಥೆಗೆ ಬದಲಾವಣೆ ಮಾಡಲಾಗುತ್ತದೆ.

ಗಣಪತಿ ದೇವಸ್ಥಾನದ ಸುತ್ತಮುತ್ತ ಬೀದಿಬದಿಯಲ್ಲಿರುವ ಹೂ- ಹಣ್ಣು ವ್ಯಾಪಾರಿಗಳನ್ನು ನಗರಸಭೆ ಈಜುಕೊಳದ ಹಿಂದಿನ ಖಾಲಿ ಜಾಗಕ್ಕೆ ಸ್ಥಳಾಂತರ ಮಾಡಲಾಗುತ್ತದೆ.

ದ್ವಿಚಕ್ರ ವಾಹನ ಪಾರ್ಕಿಂಗ್ (ದಿನ ಬಿಟ್ಟು ದಿನ): ಕುಟಿನ್ಹೋ ರಸ್ತೆ, ರಾಧಾಕೃಷ್ಣ ದೇವಸ್ಥಾನ ರಸ್ತೆ (ಬಸ್ ನಿಲ್ದಾಣ ರಸ್ತೆಯಿಂದ ಕೋಡಿಬಾಗ ಮುಖ್ಯ ರಸ್ತೆಯವರೆಗೆ), ಸವಿತಾ ಹೋಟೆಲ್ ಹಿಂಭಾಗದ ರಸ್ತೆ, ಹೈಚರ್ಚ್ ಮುಖ್ಯರಸ್ತೆ. ಇದೇರೀತಿ, ಹಲವು ರಸ್ತೆಗಳ ಸಂಚಾರ ಮತ್ತು ವಾಹನಗಳ ನಿಲುಗಡೆಯಲ್ಲಿ ಬದಲಾವಣೆ ಮಾಡಲಾಗಿದೆ.

‘ಮಹಾತ್ಮ ಗಾಂಧಿ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ಹಾಗಾಗಿ ಜಿಲ್ಲಾ ಆಸ್ಪತ್ರೆ ಬಳಿ ರಸ್ತೆ ವಿಸ್ತರಣೆ ಮಾಡುವುದು ಸೂಕ್ತ’ ಎಂದು ಸದಸ್ಯ ಮಕ್ಬೂಲ್ ಶೇಖ್ ಸಭೆಯ ಗಮನ ಸೆಳೆದರು. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಕಳುಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ವಾಹನ ನಿಲುಗಡೆ ನಿಷೇಧ:

ಸುಭಾಸ್ ವೃತ್ತದಿಂದ ಜನತಾ ಬಜಾರ್‌ ತನಕ ಮತ್ತು ಗ್ರೀನ್‌ಸ್ಟ್ರೀಟ್‌ವರೆಗೆ, ಹೈಚರ್ಚ್ ರಸ್ತೆ (ದೋಭಿಘಾಟ್‌ನಿಂದ ಕಾರವಾರ– ಇಳಕಲ್ ರಸ್ತೆಯವರೆಗೆ), ಕಾರವಾರ– ಇಳಕಲ್ ರಸ್ತೆ (ಕೋಡಿಬಾಗ ರಸ್ತೆಯಿಂದ ಗೀತಾಂಜಲಿ ರಸ್ತೆ), ಹೂವಿನ ಚೌಕ ರಸ್ತೆ, ಉಪ್ಪಿನ ದೇವಸ್ಥಾನದಿಂದ ಮುರಳೀಧರ ಮಠ ಕ್ರಾಸ್, ಪಿಕಳೆ ರಸ್ತೆ (ರಾಷ್ಟ್ರೀಯ ಹೆದ್ದಾರಿಯಿಂದ ಎಂ.ಜಿ ರಸ್ತೆ), ಸಿವಿಲ್ ಕೋರ್ಟ್ ರಸ್ತೆ (ಗ್ರೀನ್‌ಸ್ಟ್ರೀಟ್‌ನಿಂದ ಕೋಡಿಬಾಗ ರಸ್ತೆ), ಎಂ.ಜಿ.ರಸ್ತೆ (ಲೈಬ್ರರಿ ರಸ್ತೆಯಿಂದ ಕಾರವಾರ– ಇಳಕಲ್ ರಸ್ತೆ) ಹಾಗೂ ಕೋಡಿಬಾಗ ರಸ್ತೆ (ಸವಿತಾ ಹೋಟೆಲ್‌ನಿಂದ ದೋಭಿಘಾಟ್‌ ರಸ್ತೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT