ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಸ್ ಸಿಗಲು ನೆರವಾದ ರೈಲ್ವೆ ಪೊಲೀಸರು

ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮೆರಾ ದೃಶ್ಯ ಆಧರಿಸಿ ಕಾರ್ಯ ನಿರ್ವಹಣೆ
Last Updated 9 ಸೆಪ್ಟೆಂಬರ್ 2019, 20:25 IST
ಅಕ್ಷರ ಗಾತ್ರ

ಕಾರವಾರ: ನಗರದ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಕಳೆದುಕೊಂಡ ಪರ್ಸ್‌ ಅನ್ನು ಎತ್ತಿಕೊಂಡು ಹೋದ ವ್ಯಕ್ತಿಯನ್ನು ರೈಲ್ವೆ ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯನ್ನು ಆಧರಿಸಿ ಪತ್ತೆ ಹಚ್ಚಿದ್ದಾರೆ. ಅಲ್ಲದೇ ಪರ್ಸ್‌ನಲ್ಲಿದ್ದ ಅಷ್ಟೂ ಹಣ ಹಾಗೂ ಅಮೂಲ್ಯವಾದ ದಾಖಲೆಗಳನ್ನು ಹಸ್ತಾಂತರಿಸಿದ್ದಾರೆ.

ಏನಾಯಿತು?:ತಾಲ್ಲೂಕಿನ ತೊಡೂರು ನಿವಾಸಿ ಸಂಜಯ ತಳೇಕರ,ತಮ್ಮ ಸಂಬಂಧಿಯ ಎರಡು ತಿಂಗಳ ಮಗುವಿಗೆ ಚಿಕಿತ್ಸೆಗೆಂದು ಸೆ.7ರಂದು ಹಣ ತೆಗೆದುಕೊಂಡು ಮಣಿಪಾಲಕ್ಕೆ ಹೊರಟಿದ್ದರು. ಬೆಳಿಗ್ಗೆ 6ಕ್ಕೆ ಕಾರವಾರ ರೈಲು ನಿಲ್ದಾಣದಲ್ಲಿ ಉಡು‍ಪಿಗೆ ಟಿಕೆಟ್ ಪಡೆದುಕೊಂಡಬಳಿಕ ಅವರ ಪರ್ಸ್ ಪ್ಯಾಂಟ್ ಜೇಬಿನಿಂದ ಬಿದ್ದಿತ್ತು.ಅದರಲ್ಲಿ₹ 21,500 ನಗದು, ಮೂರು ಬ್ಯಾಂಕ್‌ಗಳ ಎಟಿಎಂ ಕಾರ್ಡ್‌ಗಳು, ಡಿ.ಎಲ್, ಆಧಾರ್ಗುರುತಿನ ಚೀಟಿ ಹಾಗೂ ಪಾನ್ ಕಾರ್ಡ್ಇದ್ದವು. ಸ್ವಲ್ಪ ಹೊತ್ತಿನ ಬಳಿಕ ಪರ್ಸ್ ಕಳೆದುಕೊಂಡಿದ್ದು ಅರಿವಾಗಿ ರೈಲ್ವೆ ಪೊಲೀಸರಿಗೆ ತಿಳಿಸಿದರು.

ಈ ಬಗ್ಗೆ ಕಾರ್ಯಪ್ರವೃತ್ತರಾದ ಕಾನ್‌ಸ್ಟೆಬಲ್ ರೂಪಾ, ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿದರು. ಅದರಲ್ಲಿ ಪ್ಲಾಟ್‌ಫಾರ್ಮ್‌ ಮೇಲೆ ಬಿದ್ದಿದ್ದ ಪರ್ಸ್‌ ಅನ್ನು ವ್ಯಕ್ತಿಯೊಬ್ಬರು ಎತ್ತಿಕೊಂಡು ಮಡಗಾಂ ರೈಲನ್ನೇರುವುದು ಕಾಣಿಸಿತು. ವ್ಯಕ್ತಿಯು ಆಟೊರಿಕ್ಷಾದಲ್ಲಿ ರೈಲು ನಿಲ್ದಾಣಕ್ಕೆ ಬಂದಿದ್ದನ್ನೂ ಪೊಲೀಸರು ಗಮನಿಸಿದರು.

ಈ ಸಂಬಂಧ ನಿಲ್ದಾಣದ ಸಮೀಪದಲ್ಲಿರುವ ಎಲ್ಲ ಆಟೊ ಚಾಲಕರಿಗೆ ವ್ಯಕ್ತಿಯ ಭಾವಚಿತ್ರವನ್ನು ಪೊಲೀಸರು ತೋರಿಸಿದರು. ಅವರಲ್ಲಿ ಒಬ್ಬರು ವ್ಯಕ್ತಿಯನ್ನು ಪಾಂಡುರಂಗ ಕೇಣಿ ಎಂದು ಗುರುತಿಸಿ, ಮೊಬೈಲ್ ಫೋನ್ ಸಂಖ್ಯೆಯನ್ನು ಸಂಗ್ರಹಿಸಿದರು. ಅವರನ್ನು ಸಂಪರ್ಕಿಸಿದಾಗ, ‘ಗಡಿಬಿಡಿಯಲ್ಲಿದ್ದ ಕಾರಣ ಪರ್ಸ್ ಅನ್ನು ಜೊತೆಗೆ ತೆಗೆದುಕೊಂಡು ಹೋಗಿದ್ದೆ. ಅದನ್ನು ರೈಲ್ವೆ ಪೊಲೀಸರ ಬಳಿ ಕೊಡುತ್ತೇನೆ’ ಎಂದರು. ಅವರು ಹೇಳಿದಂತೆ ಪರ್ಸ್ ಅನ್ನು ಮರಳಿಸಿದರು.

ತಮ್ಮ ಪರ್ಸ್‌ ಅನ್ನು ರೈಲ್ವೆ ಪೊಲೀಸರಿಂದಸೋಮವಾರ ಪಡೆದುಕೊಂಡ ಸಂಜಯ, ರೈಲ್ವೆ ಪೊಲೀಸರಿಗೆ ಧನ್ಯವಾದ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT