ನೈಜ ದೂರು ‘ಸಿ ವಿಜಿಲ್‌’ನಿಂದ ದೂರ

ಶನಿವಾರ, ಏಪ್ರಿಲ್ 20, 2019
23 °C
ಜಿಲ್ಲಾ ದೂರು ನಿರ್ವಹಣಾ ಕೇಂದ್ರಕ್ಕೆ ಸುಳ್ಳು, ಸಂಬಂಧಪಡದ ಆರೋಪಗಳ ರವಾನೆ

ನೈಜ ದೂರು ‘ಸಿ ವಿಜಿಲ್‌’ನಿಂದ ದೂರ

Published:
Updated:
Prajavani

ಕಾರವಾರ: ಜಿಲ್ಲಾ ದೂರು ನಿರ್ವಹಣಾ ಕೇಂದ್ರಕ್ಕೆ ‘ಸಿ ವಿಜಿಲ್’ ಆ್ಯಪ್‌ ಮೂಲಕ ಬರುತ್ತಿರುವ ಬಹುತೇಕ ದೂರುಗಳು ನಿಜಾಂಶದಿಂದ ಕೂಡಿಲ್ಲ. ಕೇಂದ್ರ ಆರಂಭವಾದ ದಿನದಿಂದ ಈವರೆಗೆ ಬಂದ ಒಟ್ಟು 131 ದೂರುಗಳಲ್ಲಿ ಕೇವಲ 31ನ್ನು ಸಹಾಯಕ ಚುನಾವಣಾಧಿಕಾರಿಗಳು ನೈಜ ಪ್ರಕರಣಗಳೆಂದು ಪರಿಗಣಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರಂಭಿಸಲಾಗಿರುವ ಈ ಕೇಂದ್ರಕ್ಕೆ ಬರುವ ಎಲ್ಲ ದೂರುಗಳನ್ನೂ ಸಿಬ್ಬಂದಿ ಪರಿಶೀಲಿಸುತ್ತಾರೆ. ಅವುಗಳಲ್ಲಿ 59 ಪ್ರಕರಣಗಳನ್ನು ದೂರು ನಿರ್ವಹಣಾ ಕೇಂದ್ರದ ಪರಿಮಿತಿಯಲ್ಲೇ ಕೈಬಿಡಲಾಗಿದೆ. ಅವು ಚುನಾವಣಾ ನೀತಿ ಸಂಹಿತೆಗೆ ಸಂಬಂಧಪಡದ, ಸುಳ್ಳು ಹಾಗೂ ಒಂದೇ ದೂರನ್ನು ಎರಡು ಮೂರು ಬಾರಿ ನೀಡಿದ್ದಾಗಿದ್ದವು. 39 ದೂರುಗಳನ್ನು ಸಹಾಯಕ ಚುನಾವಣಾ ಅಧಿಕಾರಿಗಳ ಹಂತದಲ್ಲಿ ವಿಲೇವಾರಿ ಮಾಡಲಾಗಿದೆ. ಎರಡು ದೂರುಗಳು ಪರಿಶೀಲನೆಯ ಹಂತದಲ್ಲಿವೆ ಎನ್ನುತ್ತಾರೆ ಜಿಲ್ಲಾ ದೂರು ನಿರ್ವಹಣಾ ಕೇಂದ್ರದ ಉಸ್ತುವಾರಿ ಪ್ರವೀಣ ಪಾಟೀಲ.

ಸಿ ವಿಜಿಲ್ ಆ್ಯಪ್‌ ಮೂಲಕ ಬರುವ ಬಹುತೇಕ ದೂರುಗಳು ಮದ್ಯ ಮಾರಾಟಕ್ಕೆ ಸಂಬಂಧಿಸಿದ್ದಾಗಿವೆ. ದಿನಾಂಕ ಘೋಷಣೆಯಾದ ಬಳಿಕ ರಾಜಕಾರಣಿಗಳ ಭಾವಚಿತ್ರಗಳಿರುವ ಪೋಸ್ಟರ್‌, ಬ್ಯಾನರ್‌ಗಳ ತೆರವು ಮಾಡಿಲ್ಲ ಎಂಬ ದೂರುಗಳಿದ್ದವು. ಉಳಿದಂತೆ, ಧಾರ್ಮಿಕ ಭಾಷಣ, ಜನೌಷಧಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ತೆಗೆಯದ ಬಗ್ಗೆ, ಉಡುಗೊರೆ ಹಂಚಿದ ಬಗ್ಗೆಯೂ ದೂರುಗಳಿದ್ದವು. ಅವುಗಳೆಲ್ಲವನ್ನೂ ಪರಿಶೀಲನೆ ಮಾಡಿ ಇತ್ಯರ್ಥಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹೇಗೆ ಕಾರ್ಯ ನಿರ್ವಹಣೆ?: ಆ್ಯಂಡ್ರಾಯ್ಡ್ ಮೊಬೈಲ್‌ಗಳ ಗೂಗಲ್ ಪ್ಲೇ ಸ್ಟೋರ್‌ನಿಂದ ‘ಸಿ ವಿಜಿಲ್’ (cVIGIL) ಆ್ಯಪ್‌ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಸ್ಥಳದಿಂದಲೇ ಫೋಟೊ, ವಿಡಿಯೊವನ್ನು ಆ್ಯಪ್‌ಗೆ ಅಪ್‌ಲೋಡ್ ಮಾಡಬೇಕು.

ಈ ಮಾಹಿತಿ ಕೂಡಲೇ ಜಿಲ್ಲಾ ದೂರು ನಿರ್ವಹಣಾ ಕೇಂದ್ರಕ್ಕೆ ತಲುಪುತ್ತದೆ. ಅದನ್ನು ಆಧರಿಸಿ ಅಧಿಕಾರಿಗಳು ಸಮೀಪದ ಸಹಾಯಕ ಚುನಾವಣಾ ಅಧಿಕಾರಿಗಳಿಗೆ ಪರಿಶೀಲನೆ ನಡೆಸಲು ಸೂಚಿಸುತ್ತಾರೆ. ಬಳಿಕ ದೂರಿನಲ್ಲಿ ಸತ್ಯಾಂಶವಿದೆಯೇ ಇಲ್ಲವೇ ಎಂದು ನಿರ್ಧರಿಸಿ ಕ್ರಮ ತೆಗೆದುಕೊಳ್ಳುತ್ತಾರೆ. ದೂರು ನೀಡಿದವರ ಮಾಹಿತಿಯನ್ನು ಗೋಪ್ಯವಾಗಿಡಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ದೂರು ನೀಡಲು ಹಿಂಜರಿಯಬಾರದು ಎನ್ನುತ್ತಾರೆ ಅಧಿಕಾರಿಗಳು.

‘ಮತದಾನ ಬಹಿಷ್ಕಾರದ ಎಚ್ಚರಿಕೆಯೂ ಇತ್ತು’
‘ಸಿ–ವಿಜಿಲ್ ಆ್ಯಪ್‌ಗೆ ಬಂದ ದೂರುಗಳ ಪೈಕಿ ಎರಡು, ಮತದಾನ ಬಹಿಷ್ಕಾರದ ಬಗ್ಗೆ ಇದ್ದವು. ಶಿರಸಿ ಮತ್ತು ಭಟ್ಕಳದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂಬುದು ದೂರುದಾರರ ಬೇಡಿಕೆಯಾಗಿತ್ತು. ಈ ಬಗ್ಗೆ ಆಯಾ ಪ್ರದೇಶಗಳ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಿ ದೂರಿಗೆ ಸ್ಪಂದಿಸಲಾಗಿದೆ’ ಎಂದು ಪ್ರವೀಣ ಪಾಟೀಲ ಹೇಳಿದರು.

**

ಜಿಲ್ಲಾ ದೂರು ನಿರ್ವಹಣಾ ಕೇಂದ್ರಕ್ಕೆ ಬಂದ ಎಲ್ಲ ದೂರುಗಳನ್ನೂ ನಿಗದಿತ 100 ನಿಮಿಷಗಳ ಒಳಗಾಗಿ ಇತ್ಯರ್ಥ ಮಾಡಲಾಗಿದೆ. ಸರಾಸರಿ 52.19 ನಿಮಿಷದ ತೆಗೆದುಕೊಳ್ಳಲಾಗಿದೆ. 
-ಪ್ರವೀಣ ಪಾಟೀಲ, ಜಿಲ್ಲಾ ದೂರು ನಿರ್ವಹಣಾ ಕೇಂದ್ರದ ಉಸ್ತುವಾರಿ

***
ನೈಜ ದೂರು; ಎಲ್ಲಿ, ಎಷ್ಟು? (ಎ.ಸಿ ವಲಯವಾರು)

ಭಟ್ಕಳ; 4

ಹಳಿಯಾಳ; 4

ಕಾರವಾರ; 2

ಕುಮಟಾ; 0

ಶಿರಸಿ; 14

ಯಲ್ಲಾಪುರ; 7

ಒಟ್ಟು; 31

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !