ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ ಪಡೆದರೂ ಉದ್ಯೋಗಕ್ಕೆ ಅರ್ಹರಲ್ಲ!

ಕಡಲಜೀವ ವಿಜ್ಞಾನದಲ್ಲಿ ಎಂ.ಎಸ್‌ಸಿ ಅಧ್ಯಯನ ಮಾಡಿದವರನ್ನು ಪರಿಗಣಿಸದ ಕೆಪಿಎಸ್‌ಸಿ
Last Updated 12 ಜೂನ್ 2019, 3:54 IST
ಅಕ್ಷರ ಗಾತ್ರ

ಕಾರವಾರ:ಈ ಕೋರ್ಸ್ ಅಧ್ಯಯನಕ್ಕೆ ವಿಶ್ವವಿದ್ಯಾಲಯ ಅವಕಾಶ ನೀಡುತ್ತದೆ. ಆದರೆ, ಅದನ್ನು ಓದಿದವರಿಗೆ ತನ್ನ ಇಲಾಖೆಗಳಲ್ಲಿ ಉದ್ಯೋಗಕ್ಕೆ ಅರ್ಹತೆಯಿಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತದೆ. ಕಡಲಜೀವ ವಿಜ್ಞಾನದಲ್ಲಿ ಎಂ.ಎಸ್‌ಸಿ ಮಾಡಿದವರು ಇಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ನಡೆಸುವ ಪರೀಕ್ಷೆಗಳಲ್ಲಿ ಈ ವಿದ್ಯಾರ್ಥಿಗಳನ್ನು ಪರಿಗಣಿಸುತ್ತಿಲ್ಲ. ಪಿಯು ಉಪನ್ಯಾಸಕರ ಹುದ್ದೆಗಳ ಅಭ್ಯರ್ಥಿಗಳಿಗೆ ಪ್ರಾಣಿ ವಿಜ್ಞಾನ ವಿಷಯ ಅಧ್ಯಯನ ಮಾಡಿದವರು ಅಥವಾ ತತ್ಸಮಾನ ವಿದ್ಯಾರ್ಹತೆ ಉಳ್ಳವರು ಅರ್ಹರು ಎಂದು ನಿಯಮ ಹೇಳುತ್ತದೆ. ಆದರೆ, ಕಡಲಜೀವ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ತತ್ಸಮಾನ ಎಂದು ಅವಕಾಶ ನೀಡುತ್ತಿಲ್ಲ ಎಂಬುದು ಅಭ್ಯರ್ಥಿಗಳ ಅಳಲಾಗಿದೆ.

ಇದೇರೀತಿ, ಮೀನುಗಾರಿಕಾ ಇಲಾಖೆಯ ಹಲವು ಹುದ್ದೆಗಳ ಪರೀಕ್ಷೆಗಳಿಂದಲೂ ದೂರ ಉಳಿಯಬೇಕಾಗಿದೆ. ಈ ಇಲಾಖೆಯ ಹುದ್ದೆಗಳಿಗೆ ಕೇವಲ ಮೀನುಗಾರಿಕಾ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದವರನ್ನು ಅರ್ಹರೆಂದು ಪರಿಗಣಿಸಲಾಗಿದೆ. ಇದರಿಂದರಾಜ್ಯದ ಏಕೈಕ ಕಡಲ ಜೀವವಿಜ್ಞಾನಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಖಾಸಗಿ ವಲಯದ ಸಂಸ್ಥೆಗಳಲ್ಲಿ ಕಡಿಮೆ ವೇತನಕ್ಕೆ ಬೇರೆ ರಾಜ್ಯಗಳಲ್ಲಿ ದುಡಿಯಬೇಕಾಗಿದೆ.

ಕಡಲ ಜೀವವಿಜ್ಞಾನದಲ್ಲಿ ಪ್ರತ್ಯೇಕವಾಗಿಸ್ನಾತಕೋತ್ತರ ಪದವಿ ಬೋಧನೆಯು 1976ರಲ್ಲಿ ಆರಂಭವಾಯಿತು. ಅದಕ್ಕೂ ಮೊದಲು ಈ ವಿಷಯವು ಪ್ರಾಣಿವಿಜ್ಞಾನಅಧ್ಯಯನದ ಭಾಗವಾಗಿತ್ತು. ಆಗ ಸರ್ಕಾರವು ತನ್ನ ವಿವಿಧ ಹುದ್ದೆಗಳಿಗೆ‍ಪರಿಗಣಿಸುತ್ತಿತ್ತು. ಆದರೆ, ಈಗ ಯಾಕೆ ಅರ್ಹತೆಯಿಲ್ಲ ಎಂದು ಭಾವಿಸಲಾಗುತ್ತಿದೆ ಎಂದು ತಿಳಿಯುತ್ತಿಲ್ಲ. ಕೋರ್ಸ್ ಅಧ್ಯಯನಕ್ಕೆ ಅವಕಾಶ ನೀಡಿ ಉದ್ಯೋಗದಲ್ಲಿ ಮಾತ್ರ ಪರಿಗಣಿಸದಿರುವುದು ಸರಿಯಲ್ಲ ಎನ್ನುವುದು ಅಭ್ಯರ್ಥಿಯೊಬ್ಬರ ಅಸಮಾಧಾನವಾಗಿದೆ.

ಕೇಂದ್ರ ಸರ್ಕಾರದಿಂದ ಪರಿಗಣನೆ:ಸಮುದ್ರ ಅಧ್ಯಯನದ ರಾಷ್ಟ್ರೀಯ ಅಧ್ಯಯನ ಸಂಸ್ಥೆ (ಎನ್‌ಐಒ) ಬೋಧಿಸುವ ಇಂಥದ್ದೇ ಕೋರ್ಸ್‌ ಅಧ್ಯಯನ ಮಾಡಿದವರನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತದೆ.ಅಲ್ಲದೇ ಮಹಾರಾಷ್ಟ್ರ, ಗೋವಾ, ಕೇರಳ, ಆಂಧ್ರಪ್ರದೇಶ, ಗುಜರಾತ್‌ ರಾಜ್ಯಗಳಲ್ಲಿ ಕಡಲಜೀವ ವಿಜ್ಞಾನ ಅಧ್ಯಯನ ಮಾಡಿದವರಿಗೆ ಬೇಡಿಕೆಯಿದೆ. ಆದರೆ, ನಮ್ಮ ರಾಜ್ಯದಲ್ಲಿ ಮಾತ್ರವಿಲ್ಲ. ಇದು ವಿದ್ಯಾರ್ಥಿಗಳಿಗೆ ವಂಚನೆ ಮಾಡಿದಂತೆ ಎನ್ನುವುದು ಅವರ ಅಭಿಪ್ರಾಯವಾಗಿದೆ.

ಕಡಲಜೀವ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯು ಎರಡು ವರ್ಷದ್ದಾಗಿದ್ದು, ದೇಶದಲ್ಲೇ ವಿಶಿಷ್ಟ ವಿದ್ಯಾರ್ಹತೆಯಾಗಿದೆ. ಗೋವಾದ ಸಮುದ್ರ ವಿಜ್ಞಾನ ಸಂಸ್ಥೆಯಲ್ಲಿ, ಕೇರಳದ ಕೊಚ್ಚಿಯಲ್ಲಿಹಾಗೂ ತಮಿಳುನಾಡಿನ ಎರಡು ಕಡೆಗಳಲ್ಲಿ ಮಾತ್ರ ಈ ಕೋರ್ಸ್‌ ಲಭ್ಯ ಇದೆ.

ಐ.ಯು.ಬಿ ನಿರ್ಣಯವೇನು?:ಕಡಲಜೀವ ವಿಜ್ಞಾನದ ಸ್ನಾತಕೋತ್ತರ ಪದವಿಯನ್ನು ಪ್ರಾಣಿ ವಿಜ್ಞಾನ ವಿಷಯಕ್ಕೆ ಸಮನಾದದ್ದು ಎಂದು ಪರಿಗಣಿಸಲು ಧಾರವಾಡ ವಿಶ್ವವಿದ್ಯಾಲಯ ಹಿಂದಿನ ಉಪ ಕುಲಪತಿ ಪ್ರೊ.ಎಸ್.ಕೆ.ಸೈದಾಪುರ್ ಶ್ರಮಿಸಿದ್ದರು. ಅದಕ್ಕೆ ಅಗತ್ಯವಾದ ಪಠ್ಯಕ್ರಮವನ್ನೂ ಸಿದ್ಧಪಡಿಸಲಾಗಿತ್ತು ಎಂದು ಕಾರವಾರದ ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥಡಾ.ಜೆ.ಎಲ್.ರಾಥೋಡ್ ನೆನಪಿಸಿಕೊಳ್ಳುತ್ತಾರೆ.

‘ಪ್ರಾಣಿ ವಿಜ್ಞಾನಕ್ಕೆ ತತ್ಸಮಾನ ಎಂದು ಪರಿಗಣಿಸುವಂತೆ ಸಾಕಷ್ಟು ಮನವಿ ಮಾಡಲಾಗಿದೆ. ಈಗ ಈ ವಿಚಾರವು ಅಂತರ ವಿಶ್ವವಿದ್ಯಾಲಯ ಮಂಡಳಿಯಲ್ಲಿದೆ (ಐ.ಯು.ಬಿ). ಅಲ್ಲಿನ ನಿರ್ಣಯಕ್ಕೆ ಕಾಯುತ್ತಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT