ಗುರುವಾರ , ಜುಲೈ 29, 2021
23 °C
ಚಿತ್ರ ತೆಗೆಯುವರಿಗೆ ಬೆಲೆ ಏರಿಕೆಯ ಬಿಸಿ, ಸರಳ ಮದುವೆಯಿಂದ ಕಡಿಮೆಯಾದ ಲಾಭ

ಉತ್ತರ ಕನ್ನಡ: ಬಣ್ಣದ ಬದುಕೀಗ ಕಪ್ಪು–ಬಿಳುಪು

ಶಾಂತೇಶ ಬೆನಕನಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: 'ಒಂದೆಡೆ ಲಾಕ್‍ಡೌನ್‍ನಿಂದ ಬುಕ್ಕಿಂಗ್ ಆಗಿದ್ದ ಮದುವೆ ಕಾರ್ಯಕ್ರಮಗಳು ಕೈತಪ್ಪಿವೆ. ಮತ್ತೊಂದೆಡೆ ಸರಳ ಮದುವೆ ಆಗುತ್ತಿರುವುದರಿಂದ, ಮೊದಲಿನಷ್ಟು ಆದಾಯ ಬರುತ್ತಿಲ್ಲ. ಇದರಿಂದ ನಷ್ಟ ಅನುಭವಿಸುತ್ತಿರುವ ಫೋಟೊಗ್ರಾಫರ್‌ಗಳಿಗೆ, ಗಾಯದ ಮೇಲೆ ಬರೆ ಎಳೆದಂತೆ ಕಚ್ಚಾ ಸಾಮಗ್ರಿಗಳ ದರದಲ್ಲಿಯೂ ಏರಿಕೆಯಾಗಿದೆ’ ಇದು ತಾಲ್ಲೂಕಿನ ಛಾಯಾಗ್ರಾಹಕರ ಅಳಲು.

ವರ್ಷದ ದುಡಿಮೆಯ ಬಹುಪಾಲು ಕೆಲಸ, ಮಾರ್ಚ್‍ನಿಂದ ಮೂರು ತಿಂಗಳು ಇರುತ್ತಿತ್ತು. ಈ ಸಮಯದಲ್ಲಿ ಇದ್ದ ಮದುವೆ ಕಾರ್ಯಕ್ರಮಗಳು ಕೆಲವು ಮುಂದೂಡಿದ್ದರೆ, ಮತ್ತೆ ಕೆಲವು ಸರಳವಾಗಿ ನಡೆದಿವೆ. ಲಾಕ್‍ಡೌನ್ ತೆರವುಗೊಂಡರೂ ಸ್ಟುಡಿಯೊ ಸನಿಹ ಗ್ರಾಹಕರು ಸುಳಿಯುತ್ತಿಲ್ಲ ಎಂದು ಅವರು ಆತಂಕದಿಂದ ಹೇಳುತ್ತಾರೆ.

'ತಾಲ್ಲೂಕಿನಲ್ಲಿ 35-40ರಷ್ಟು ಜನರು ಇದೇ ಕೆಲಸವನ್ನು ಅವಲಂಬಿಸಿದ್ದಾರೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಉತ್ತಮ ದರ್ಜೆಯ ಕ್ಯಾಮೆರಾಗಳನ್ನು ಹೊಂದಿದ್ದಾರೆ. ಲಾಕ್‍ಡೌನ್‍ನಿಂದ ಸ್ಟುಡಿಯೊ ನಡೆಸುವುದು ಕಷ್ಟವಾಗಿದೆ. ಲಾಕ್‍ಡೌನ್‍ಗಿಂತ ಮುಂಚೆ ಮದುವೆ ಕಾರ್ಯಕ್ರಮಗಳಿಗೆ ಮುಂಗಡವಾಗಿ ತೆಗೆದುಕೊಂಡಿದ್ದ ಹಣವನ್ನು, ಕೆಲವರು ಮರಳಿ ನೀಡಿರುವುದನ್ನು ಕಾಣಬಹುದಾಗಿದೆ' ಎನ್ನುತ್ತಾರೆ ಮುಂಡಗೋಡ ಫೋಟೊಗ್ರಾಫರ್ಸ್ ಸಂಘದ ಅಧ್ಯಕ್ಷ ರಾಜೇಂದ್ರ ಕಾಟವೆ.

'ವಿಡಿಯೊ ಕವರೇಜ್ ಹಾಗೂ ಫೋಟೊ ಪ್ರಿಂಟ್‍ಗಳನ್ನು ಹಳೆಯ ದರದಲ್ಲಿಯೆ ಮಾಡಲಾಗುತ್ತಿದೆ. ಆದರೂ ಮೊದಲಿನಂತೆ ಗ್ರಾಹಕರಿಲ್ಲ. ಇದೆಲ್ಲದರ ನಡುವೆಯೂ ಪ್ರಿಂಟ್ ಸಾಮಗ್ರಿಗಳಲ್ಲಿ ಶೇ 15-20ರಷ್ಟು ಏರಿಕೆಯಾಗಿದೆ. ಹೀಗೇಕೆ ಎಂದು ಪ್ರಶ್ನಿಸಿದರೆ, ಸರಬರಾಜು ಇಲ್ಲ ಎಂಬ ಸಬೂಬು ಹೇಳುತ್ತಾರೆ. ಸ್ಟುಡಿಯೊದವರು ದರ ಏರಿಸುವುದು ಅನಿವಾರ್ಯವಾಗಿದೆ' ಎಂದರು.

'ಲಾಕ್‍ಡೌನ್‍ಗಿಂತ ಮುಂಚೆ ಒಟ್ಟು 30ಕ್ಕಿಂತ ಹೆಚ್ಚು ಮದುವೆಗಳ ಬುಕ್ಕಿಂಗ್ ಆಗಿತ್ತು. ಅದರಲ್ಲಿ 15ಕ್ಕಿಂತ ಹೆಚ್ಚು ಮದುವೆಗಳು ಮುಂದೂಡಿದವು. ಅವರು ನೀಡಿದ್ದ ಮುಂಗಡ ಹಣವನ್ನು ಮರಳಿಸಬೇಕಾಯಿತು. ಈಗ ಅಲ್ಲೊಂದು, ಇಲ್ಲೊಂದು ಕಾರ್ಯಕ್ರಮದ ಆರ್ಡರ್ ಸಿಗುತ್ತಿದೆ. ಮೊದಲಿನಂತೆ ಸರಿದಾರಿಗೆ ಬರಲು ಮುಂದಿನ ವರ್ಷದವರೆಗೆ ಕಾಯಬೇಕಾಗಬಹುದು' ಎಂದು ಛಾಯಾಗ್ರಾಹಕ ನಿತಿನ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು