ಶುಕ್ರವಾರ, ನವೆಂಬರ್ 15, 2019
22 °C

ಸ್ವರ್ಣವಲ್ಲಿಯಲ್ಲಿ ವೇದ ಸಮ್ಮೇಳನ ಇಂದಿನಿಂದ

Published:
Updated:

ಶಿರಸಿ: ದಕ್ಷಿಣ ಭಾರತದ ಐದು ರಾಜ್ಯಗಳ ವಿದ್ವಾಂಸರನ್ನು ಒಳಗೊಂಡ ಕ್ಷೇತ್ರೀಯ ವೇದ ಸಮ್ಮೇಳನವು ತಾಲ್ಲೂಕಿನ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಇಂದಿನಿಂದ (ನ.02) ಮೂರು ದಿನಗಳ ಕಾಲ ನಡೆಯಲಿದೆ. 150ಕ್ಕೂ ಹೆಚ್ಚು ವೇದ ವಿದ್ವಾಂಸರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ರಾಜರಾಜೇಶ್ವರಿ ವಿದ್ಯಾಸಂಸ್ಥೆ, ಉಜ್ಜಯಿನಿಯ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದವಿದ್ಯಾ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿರುವ ಸಮ್ಮೇಳನದಲ್ಲಿ ಎಂಟು ವೇದಿಕೆಗಳಲ್ಲಿ ವೇದ ಪಾರಾಯಣಗಳು ನಡೆಯುತ್ತವೆ. ವರ್ಣಕ್ರಮ ಪಾಠಗಳ ಪ್ರಸ್ತುತಿ, ವೇದ ಭಾಷ್ಯ ಗೋಷ್ಠಿ, ಪ್ರಶ್ನೋತ್ತರಗಳು ನಡೆಯಲಿವೆ.

ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ವಾದಿರಾಜ ಮಠದ ವಿಶ್ವವಲ್ಲಭತೀರ್ಥ ಸ್ವಾಮೀಜಿ ನ.02ರ ಬೆಳಿಗ್ಗೆ 10.30ಕ್ಕೆ ಸಮ್ಮೇಳನ ಉದ್ಘಾಟಿಸುವರು. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ. ರಮೇಶ ಪೋಕ್ರಿಯಾಲ್, ನಿವೃತ್ತ ನ್ಯಾಯಮೂರ್ತಿ ಎನ್‌.ಕುಮಾರ್, ಉದ್ಯಮಿ ಡಾ.ವಿಜಯ ಸಂಕೇಶ್ವರ, ಸಂಸದ ಅನಂತಕುಮಾರ್ ಹೆಗಡೆ, ಉಜ್ಜಯಿನಿ ಪ್ರತಿಷ್ಠಾನ ಕಾರ್ಯದರ್ಶಿ ಪ್ರೊ. ವಿರೂಪಾಕ್ಷ ಜಡ್ಡೀಪಾಲ ಭಾಗವಹಿಸುವರು. ಚನ್ನೇಹಳ್ಳಿ ವೇದವಿಜ್ಞಾನ ಗುರುಕುಲ ಮುಖ್ಯಸ್ಥ ಡಾ.ರಾಮಚಂದ್ರ ಭಟ್ಟ ಕೋಟೆಮನೆ ದಿಕ್ಸೂಚಿ ಭಾಷಣ ಮಾಡುವರು. ಇದೇ ಸಂದರ್ಭದಲ್ಲಿ ವಿದ್ವಾನ್ ಶಂಕರ ಭಟ್ಟ ಜೋಶಿ ಹಾವೇರಿ ಹಾಗೂ ಆಚಾರ್ಯ ಶ್ರೀಧರ ಅಡಿ ಗೋಕರ್ಣ ಅವರನ್ನು ಗೌರವಿಸಲಾಗುತ್ತದೆ.

ಪ್ರತಿಕ್ರಿಯಿಸಿ (+)