ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಬಿಎಸ್‌ಪಿಗೆ ಕಾಂಗ್ರೆಸ್‌ ಬೆಂಬಲ

ರಾಜ್ಯಸಭೆ ಚುನಾವಣೆ: ಗರಿಗೆದರಿದ ರಾಜಕೀಯ ಚಟುವಟಿಕೆ
Last Updated 10 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಲಖನೌ: ಈ ತಿಂಗಳ 23ರಂದು ನಡೆಯುವ ರಾಜ್ಯಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಅಭ್ಯರ್ಥಿ ಭೀಮರಾವ್‌ ಅಂಬೇಡ್ಕರ್‌ ಅವರನ್ನು ಬೆಂಬಲಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

ಶನಿವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

‘ಕೋಮುವಾದಿ ಪಕ್ಷವನ್ನು ಸೋಲಿಸುವ ನಿಟ್ಟಿನಲ್ಲಿ ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸಬೇಕಾಗಿದೆ. ಹೀಗಾಗಿ, ಬಿಎಸ್‌ಪಿ ಅಭ್ಯರ್ಥಿ ಬೆಂಬಲಿಸಲು ನಿರ್ಧರಿಸಲಾಗಿದೆ. ಈ ನಿಲುವಿಗೆ ವರಿಷ್ಠರು ಬೆಂಬಲ ನೀಡಿದ್ದಾರೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಅಜಯ್‌ ಸಿಂಗ್‌ ಲಲ್ಲು ತಿಳಿಸಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ಪರಸ್ಪರ ಬೆಂಬಲ ನೀಡಬೇಕು ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಕಾಂಗ್ರೆಸ್ ಮುಂದೆ ಪ್ರಸ್ತಾವವನ್ನಿಟ್ಟಿದ್ದರು.

ಉತ್ತರಪ್ರದೇಶದಲ್ಲಿ ಬಿಎಸ್‌ಪಿ ಅಭ್ಯರ್ಥಿಯನ್ನು ಕಾಂಗ್ರೆಸ್‌ನ ಎಲ್ಲ ಏಳು ಶಾಸಕರು ಬೆಂಬಲಿಸಿದರೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಅವರು ತಿಳಿಸಿದ್ದರು.

ಉತ್ತರ ಪ್ರದೇಶ ವಿಧಾನಸಭೆಯಲ್ಲಿ 19 ಶಾಸಕರನ್ನು ಬಿಎಸ್‌ಪಿಗೆ ಹೊಂದಿದೆ. ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಇನ್ನೂ 18 ಶಾಸಕರ ಬೆಂಬಲವನ್ನು ಬಿಎಸ್‌ಪಿ ಪಡೆಯಬೇಕಾಗಿದೆ.

ಸಮಾಜವಾದಿ ಪಕ್ಷ ಒಟ್ಟು 47 ಶಾಸಕರನ್ನು ಹೊಂದಿದ್ದು ಆ ಪಕ್ಷದಿಂದ ಜಯಾ ಬಚ್ಚನ್‌ ಸ್ಪರ್ಧಿಸಲಿದ್ದಾರೆ. ಇವರ ಗೆಲುವಿಗೆ 37 ಮತಗಳ ಅಗತ್ಯವಿದೆ. ಹೆಚ್ಚುವರಿಯಾಗಿ 10 ಮತಗಳು ಉಳಿಯಲಿವೆ. ಈ ಹತ್ತು ಮತಗಳು ಮತ್ತು ಕಾಂಗ್ರೆಸ್‌ನ ಏಳು ಹಾಗೂ ಆರ್‌ಎಲ್‌ಡಿಯ ಒಬ್ಬ ಶಾಸಕರ ಬೆಂಬಲ ಪಡೆದು ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಲೆಕ್ಕಾಚಾರವನ್ನು ಬಿಎಸ್‌ಪಿ ರೂಪಿಸಿದೆ.

ವೀರೇಂದ್ರಕುಮಾರ್‌ ಸ್ಪರ್ಧೆ
ತಿರುವನಂತಪುರ:
ರಾಜ್ಯಸಭೆ ಚುನಾವಣೆಯಲ್ಲಿ ಶರದ್‌ ಯಾದವ್ ಬಣದ ಜೆಡಿಯು ಅಭ್ಯರ್ಥಿಯನ್ನಾಗಿ ಕೇರಳ ರಾಜ್ಯ ಘಟಕದ ಅಧ್ಯಕ್ಷ ಎಂ.ಪಿ. ವೀರೇಂದ್ರ ಕುಮಾರ್‌ ಅವರನ್ನು ಆಯ್ಕೆ ಮಾಡಲಾಗಿದೆ.‌

ಕೇರಳ ವಿಧಾನಸಭೆಯಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಪಕ್ಷದ ಹೆಸರು ಮತ್ತು ಚಿಹ್ನೆಗೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದಲ್ಲಿ ವಿವಾದ ಇರುವುದರಿಂದ ಪಕ್ಷೇತರ ಅಭ್ಯರ್ಥಿಯಾಗಿ ವೀರೇಂದ್ರ ಕುಮಾರ್‌ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಶೇಖ್‌ ಪಿ. ಹ್ಯಾರಿಸ್‌ ತಿಳಿಸಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಜತೆ ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್‌ ಕುಮಾರ್‌ ಅವರು ಕೈಜೋಡಿಸಿದ್ದನ್ನು ವಿರೋಧಿಸಿ ವೀರೇಂದ್ರ ಕುಮಾರ್‌ ಅವರು ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಆಡಳಿತಾರೂಢ ಸಿಪಿಎಂ ನೇತೃತ್ವದ ಎಲ್‌ಡಿಎಫ್‌, ಶರದ್‌ ಯಾದವ್‌ ಬಣದ ಜೆಡಿಯುಗೆ ಬೆಂಬಲ ನೀಡುವುದಾಗಿ ಶುಕ್ರವಾರ ಪ್ರಕಟಿಸಿದೆ.

ಪಶ್ಚಿಮ ಬಂಗಾಳದಿಂದ ಸಿಂಘ್ವಿ ಕಣಕ್ಕೆ
ಕೋಲ್ಕತ್ತ:
ಪಶ್ಚಿಮ ಬಂಗಾಳ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಅಭಿಷೇಕ್‌ ಮನು ಸಿಂಘ್ವಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ತೃಣಮೂಲ ಕಾಂಗ್ರೆಸ್‌ ಸಿಂಘ್ವಿ ಅವರಿಗೆ ಬೆಂಬಲ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT