ಯೋಗ, ಪ್ರಾಣಾಯಾಮದೊಂದಿಗೆ ಶಿಕ್ಷಣ

7
ಊಟಕ್ಕೆ ಮೊದಲು ಅನ್ನಪೂರ್ಣೇಶ್ವರಿಯ ಸ್ಮರಣೆ, ಸಾಹಿತ್ಯ ಚಟುವಟಿಕೆಗೆ ಪ್ರೇರಣೆ

ಯೋಗ, ಪ್ರಾಣಾಯಾಮದೊಂದಿಗೆ ಶಿಕ್ಷಣ

Published:
Updated:
Prajavani

ಶಿರಸಿ: ಈ ಶಾಲೆಯಲ್ಲಿ ಮಕ್ಕಳು ಮಧ್ಯಾಹ್ನ ಬಿಸಿಯೂಟ ಮಾಡುವ ಮೊದಲು ಅನ್ನಪೂರ್ಣೇಶ್ವರಿಯನ್ನು ಸ್ಮರಿಸುತ್ತಾರೆ. ಸಾಲಾಗಿ ಕುಳಿತುಕೊಳ್ಳುವ ಮಕ್ಕಳು, ಅನ್ನಪೂರ್ಣೆ ಮಂತ್ರ ಪಠಿಸಿ, ಊಟ ಮಾಡುತ್ತಾರೆ. ಶಿಕ್ಷಕರೊಂದಿಗೆ ಮಕ್ಕಳು ಸೇರಿ ಶಿಸ್ತುಬದ್ಧವಾಗಿ ಊಟ ಬಡಿಸುವುದನ್ನು ನೋಡುವುದೇ ಚಂದ. 

ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಗೌರವಾಧ್ಯಕ್ಷರಾಗಿರುವ ತಾಲ್ಲೂಕಿನ ಹುಲೇಕಲ್ ಶ್ರೀದೇವಿ ಶಿಕ್ಷಣ ಸಂಸ್ಥೆ ಐದೂವರೆ ದಶಕಗಳಿಂದ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಪ್ರೌಢಶಾಲೆ ವಿಭಾಗದಲ್ಲಿ 164 ಮಕ್ಕಳು, ಪದವಿಪೂರ್ವ ಕಾಲೇಜು ವಿಭಾಗದಲ್ಲಿ 170 ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. 

ಶೈಕ್ಷಣಿಕ ಸಾಧನೆ ಮಾಡುತ್ತಿರುವ ಶಿಕ್ಷಣ ಸಂಸ್ಥೆ, ಸಾಂಸ್ಕೃತಿಕ, ಸಾಹಿತ್ಯಿಕವಾಗಿ ಮುಂದಿದೆ. ಪಿಯು ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗಗಳು ಇವೆ. ಇವೆರಡೂ ವಿದ್ಯಾರ್ಥಿಗಳು ಪ್ರತಿದಿನ ಶಾಲೆಗೆ ಬಂದು ಮೊದಲು ಮಾಡುವ ಕೆಲಸ ಯೋಗ ಮತ್ತು ಪ್ರಾಣಾಯಾಮ. ತರಗತಿಗಳು ಆರಂಭವಾಗುವ ಪೂರ್ವದಲ್ಲಿ ಅರ್ಧ ಗಂಟೆ ‘ಬಸ್ತ್ರಿಕಾ, ಮುಖದೌತಿ, ಕಪಾಲಬಾತಿ, ಅನುಲೋಮ, ವಿಲೋಮ ಭ್ರಾಮರಿ, ಶಶಾಂಕಾಸನ ಮಾಡುತ್ತಾರೆ. ಆರಂಭ ಮತ್ತು ಅಂತ್ಯದಲ್ಲಿ ಓಂಕಾರ, ಶಾಂತಿಮಂತ್ರ ಪಠಿಸುತ್ತಾರೆ.

‘ಸ್ವರ್ಣವಲ್ಲಿ ಶ್ರೀಗಳ ಆಶಯದಂತೆ ಎರಡು ವರ್ಷಗಳಿಂದ ಮಕ್ಕಳಿಗೆ ಈ ತರಬೇತಿ ನೀಡಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆ ಬೆಳೆದಿದೆ. ಅಭ್ಯಾಸದಲ್ಲಿ ಏಕಾಗ್ರತೆ, ಶಾಲೆಯ ಬಗ್ಗೆ ಪ್ರೀತಿ ಹೆಚ್ಚಿರುವುದು ಸ್ಪಷ್ಟವಾಗಿ ಅರಿವಿಗೆ ಬಂದಿದೆ. ಪರೀಕ್ಷೆ ಫಲಿತಾಂಶದಲ್ಲೂ ಇದು ವ್ಯಕ್ತಗೊಂಡಿದೆ’ ಎನ್ನುತ್ತಾರೆ ಮಕ್ಕಳಿಗೆ ಯೋಗ ಕಲಿಸುವ ಉಪನ್ಯಾಸಕ ಮೋಹನ ಭರಣಿ.

‘ಕಾಲೇಜಿನ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ ನೀಡಲಾಗುತ್ತದೆ. ಉಳಿದವರಿಗೆ ಅತ್ಯಂತ ಕಡಿಮೆ ದರದಲ್ಲಿ ಊರ ಪೂರೈಸಲಾಗುತ್ತದೆ. ಕಾಲೇಜಿನಲ್ಲಿ 2012ರಲ್ಲಿ ಆರಂಭವಾಗಿರುವ ಅಂಕುರ ಸಾಹಿತ್ಯ ವೇದಿಕೆ ಅನೇಕ ಸಾಹಿತ್ಯಿಕ ಕಾರ್ಯಕ್ರಮ ನಡೆಸುತ್ತದೆ. ಪ್ರತಿ ವರ್ಷ ನಡೆಸುವ ‘ಕಾವ್ಯಾಂಕುರ’ ಕವನ ರಚನಾ ಕಾರ್ಯಾಗಾರ, ಅಂತರ್ ಕಾಲೇಜು ಕವನ ಸ್ಪರ್ಧೆಗೆ ಉತ್ತಮ ಸ್ಪಂದನೆಯಿದೆ. ಮಕ್ಕಳು ಬರೆದ ಕವನಗಳನ್ನು ‘ಅಂಕುರ’ ಹೆಸರಿನಲ್ಲಿ ಸಂಕಲನವಾಗಿ ಪ್ರಕಟಿಸಲಾಗುತ್ತದೆ. 40ರಿಂದ 60 ವಿದ್ಯಾರ್ಥಿಗಳ ಕವನಗಳು ಪ್ರಕಟಗೊಳ್ಳುತ್ತವೆ’ ಎನ್ನುತ್ತಾರೆ ಪ್ರಾಚಾರ್ಯ ಡಿ.ಆರ್.ಹೆಗಡೆ.

ಭಾರತಿ ಸಂಸ್ಕೃತಿ ಪ್ರತಿಷ್ಠಾನ ನಡೆಸುವ ರಾಮಾಯಣ– ಮಹಾಭಾರತ ಪರೀಕ್ಷೆಯಲ್ಲಿ ಈ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಪದಕ ಪಡೆದಿದ್ದಾರೆ.

*
ಶಿಕ್ಷಣದ ಜೊತೆಗೆ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡಬೇಕೆನ್ನುವ ಸ್ವರ್ಣವಲ್ಲಿ ಶ್ರೀಗಳ ಆಶಯದಂತೆ ಶಾಲೆ ನಡೆಯುತ್ತಿದೆ.
-ಡಿ.ಆರ್.ಹೆಗಡೆ, ಶ್ರೀದೇವಿ ಪಿಯು ಕಾಲೇಜಿನ ಪ್ರಾಚಾರ್ಯ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !