ಕಾರವಾರ: ಬಂದರು, ಕೈ ಅಣುವಿದ್ಯುತ್ ಸ್ಥಾವರ ಸೇರಿದಂತೆ ಬೃಹತ್ ಯೋಜನೆಗಳಿರುವ ಜಿಲ್ಲೆಯ ಕರಾವಳಿ ಭಾಗದಲ್ಲಿ ಭದ್ರತೆ ಪರಿಶೀಲನೆಗೆ ಪೊಲೀಸ್ ಇಲಾಖೆ ಕೈಗೊಂಡಿರುವ ಎರಡು ದಿನಗಳ ಸಾಗರ ಕವಚ ಅಣಕು ಕಾರ್ಯಾಚರಣೆಯಲ್ಲಿ ಮೊದಲ ದಿನ ಮೂರು ಬಾಂಬ್ ಪತ್ತೆ ಮಾಡಲಾಗಿದೆ.
ತಾಲ್ಲೂಕಿನ ಮುದಗಾ ಬಂದರು ಸಮೀಪ, ಅಂಕೋಲಾ ತಾಲ್ಲೂಕಿನ ಬೇಲೆಕೇರಿ ಬಂದರು, ಕುಮಟಾ ತಾಲ್ಲೂಕಿನ ತದಡಿ ಬಂದರಿನಲ್ಲಿ ಬಾಂಬ್ ಸಾಗಿಸುತ್ತಿದ್ದವರನ್ನು ಪತ್ತೆ ಮಾಡಿದ ಪೊಲೀಸರು ಒಟ್ಟೂ 23 ಮಂದಿಯನ್ನು ವಶಕ್ಕೆ ಪಡೆದರು.
ಅಣಕು ಕಾರ್ಯಾಚರಣೆ ನಿಮಿತ್ತ ಪೊಲೀಸ್ ಸಿಬ್ಬಂದಿ ಅಥವಾ ಇಲಾಖೆ ನೇಮಿಸಿದ ವ್ಯಕ್ತಿಗಳು ಉಗ್ರರ ಸೋಗಿನಲ್ಲಿ ಸ್ಫೋಟಕದ ಮಾದರಿಯ ಸಾಮಗ್ರಿ ಸಾಗಿಸುವುದು ಮತ್ತು ಅದನ್ನು ಪೊಲೀಸ್ ಸಿಬ್ಬಂದಿ ಪತ್ತೆ ಹಚ್ಚುವುದು ಕಾರ್ಯಾಚರಣೆಯ ಉದ್ದೇಶವಾಗಿದೆ.
ವಾಣಿಜ್ಯ ಬಂದರು, ಮೀನುಗಾರಿಕಾ ಬಂದರು, ರೈಲ್ವೆ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ನೌಕಾನೆಲೆ, ಕಾಳಿ ಸೇತುವೆ, ಮಲ್ಲಾಪುರ, ಕದ್ರಾ, ಸೇರಿದಂತೆ ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಮುಖ್ಯ ರಸ್ತೆಗಳಲ್ಲಿ ಸಂಚರಿಸುವ ವಾಹನಗಳನ್ನು ತಪಾಸಣೆ ನಡೆಸಿ ಬಿಡಲಾಗುತ್ತಿದೆ. ಕಾಳಿ ಸೇತುವೆ, ಬೈತಖೋಲ, ಅರಗಾ, ಮುದಗಾ ಸೇರಿ ವಿವಿಧ ಕಡೆಗಳಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಲಾಗಿದೆ.
‘ವರ್ಷಕ್ಕೆ ಸರಾಸರಿ ಎರಡು ಬಾರಿ ಭದ್ರತೆ ವ್ಯವಸ್ಥೆ ಪರಿಶೀಲಿಸಲು ಇಲಾಖೆ ಅಣಕು ಕಾರ್ಯಾಚರಣೆ ನಡೆಸುತ್ತದೆ. ಚುನಾವಣೆಯೂ ಸಮೀಪಿಸಿರುವ ಹಿನ್ನೆಲೆಯಲ್ಲಿ ಈಗ ಮತ್ತಷ್ಟು ಕೂಲಂಕುಷ ಪರಿಶೀಲನೆಯೊಂದಿಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಮುದ್ರದಲ್ಲಿಯೂ ಗಸ್ತು ಹೆಚ್ಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಕರಾವಳಿ ಕಾವಲು ಪಡೆಯ ಸಿಪಿಐ ನಿಶ್ಚಲಕುಮಾರ್ ತಿಳಿಸಿದರು.
ಕಾರ್ಯಾಚರಣೆಯಲ್ಲಿ ಪೊಲಿಸ್ ಇಲಾಖೆ, ತಟರಕ್ಷಕ ದಳ, ಕರಾವಳಿ ಕಾವಲು ಪಡೆ, ಗುಪ್ತಚರ ದಳಗಳ ಜತೆಗೆ ನೌಕಾದಳದವರೂ ಪಾಲ್ಗೊಂಡಿದ್ದಾರೆ. ಮಾರ್ಚ್ 28ರ ಸಂಜೆ 5 ಗಂಟೆವರೆಗೂ ಕಾರ್ಯಾಚರಣೆ ಮುಂದುವರೆಯಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.