ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಸಿಟಿಎಸ್ ವ್ಯಾಪ್ತಿಯಲ್ಲಿ ‘ಅರಣ್ಯ ಭೂಮಿ’ಯ ಸಮಸ್ಯೆ

Published 27 ಜನವರಿ 2024, 3:40 IST
Last Updated 27 ಜನವರಿ 2024, 3:40 IST
ಅಕ್ಷರ ಗಾತ್ರ

ಶಿರಸಿ: ನಗರಸಭೆ ವ್ಯಾಪ್ತಿಯ ರಾಜೀವನಗರದಲ್ಲಿ ವಾಸವಿರುವ ಪೌರ ಕಾರ್ಮಿಕರಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಮನೆ ಮಂಜೂರು ಮಾಡಲಾಗಿದ್ದರೂ ಅದರ ಸ್ವತ್ತಿನ ಹಕ್ಕುಪತ್ರ ನೀಡಲು 'ಅರಣ್ಯ ಭೂಮಿ'ಯ ಸಮಸ್ಯೆ ತಲೆದೋರಿದೆ.

ನಗರದ ಹೃದಯ ಭಾಗದಲ್ಲಿರುವ ನಗರಸಭೆ ವಾರ್ಡ್ ನಂಬರ್ 27ರ ರಾಜೀವನಗರದ ಸ.ನಂ.1232ರಲ್ಲಿ 35ಕ್ಕೂ ಹೆಚ್ಚು ಪೌರ ಕಾರ್ಮಿಕರ ಕುಟುಂಬ ದಶಕಗಳಿಂದ ವಾಸವಿದೆ. ಇದರ ಜತೆ 35 ಇತರ ಕುಟುಂಬಗಳು ಇಲ್ಲಿ ಮನೆ ನಿರ್ಮಿಸಿಕೊಂಡಿವೆ. ಈ ಜಾಗ 1937ರಲ್ಲಿಯೇ ಸಿಟಿ ಸರ್ವೆ ನಂಬರ್ (ಸಿಟಿಎಸ್) ವ್ಯಾಪ್ತಿಗೆ ಒಳಪಟ್ಟಿದೆ. ಆದರೆ ಈವರೆಗೆ ಇಲ್ಲಿನ ಯಾವುದೇ ನಿವಾಸಿಗಳಿಗೆ ಭೂಮಿಯ ಮಾಲೀಕತ್ವ ಲಭಿಸಿಲ್ಲ. ಇಡೀ ಪ್ರದೇಶ ಅರಣ್ಯ ಇಲಾಖೆ ದಾಖಲೆಯ ಪ್ರಕಾರ ಇಂದಿಗೂ ಅರಣ್ಯ ಭೂಮಿಯಾಗಿರುವುದು ಇದಕ್ಕೆ ಕಾರಣವಾಗಿದೆ. 

‘ಅರಣ್ಯ ಇಲಾಖೆ ವತಿಯಿಂದ ದಶಕಗಳ ಹಿಂದೆ ಸರ್ವೆ ನಡೆಸುವಾಗ ರಾಜೀವನಗರ ಪ್ರದೇಶವನ್ನೂ ಒಳಗೊಂಡು ಸರ್ವೆ ನಡೆಸಿ, ಇಲಾಖೆಯ ದಾಖಲೆಗಳಲ್ಲಿ ದಾಖಲಿಸಲಾಗಿತ್ತು. ಸಿಟಿಎಸ್ ಆದ ನಂತರ ಸಿಟಿ ಸರ್ವೆ ದಾಖಲೆಯಲ್ಲಿ ರಾಜೀವನಗರ ಸೇರ್ಪಡೆಯಾಗಿತ್ತು. ಆದರೆ ಅರಣ್ಯ ಇಲಾಖೆಯ ದಾಖಲೆಗಳಲ್ಲಿ ‘ಅರಣ್ಯ ಭೂಮಿ’ ತೆಗೆಯುವ ಕಾರ್ಯ ಆಗಿರಲಿಲ್ಲ. ಈ ಕೆಲಸ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಾಗೆಯೇ ಉಳಿದುಕೊಂಡಿದೆ. ಇಲಾಖೆಯ ಅಧಿಕಾರಿಗಳಿಂದ ಆಗಿರುವ ಈ ತಾಂತ್ರಿಕ ದೋಷದ ಕಾರಣಕ್ಕೆ ಸಮಸ್ಯೆ ಇಂದಿಗೂ ಜೀವಂತವಾಗಿದೆ’ ಎಂಬುದು ಸ್ಥಳೀಯ ನಿವಾಸಿಗಳ ದೂರಾಗಿದೆ. 

‘ಅರಣ್ಯ ಇಲಾಖೆಯ ಮಾಲೀಕತ್ವ ಇರುವ ಕಾರಣ ನಾವು ವಾಸಿಸುತ್ತಿರುವ ಜಾಗ ನಮ್ಮ ಹೆಸರಿಗೆ ಆಗುತ್ತಿಲ್ಲ. ಸಾಲ ಸೌಲಭ್ಯ ಪಡೆಯಲು ತೊಂದರೆ ಆಗುತ್ತಿದೆ. ನಗರಸಭೆಯಿಂದ ಪೌರ ಕಾರ್ಮಿಕರ ವಸತಿ ಯೋಜನೆಯ ಅಡಿ ಮನೆ ಮಂಜೂರು ಮಾಡಿಸಿಕೊಳ್ಳಲು ಆಗುತ್ತಿಲ್ಲ. ಹಲವು ದಶಕಗಳಿಂದ ವಾಸಿಸುತ್ತಿದ್ದರೂ ಸ್ವತ್ತಿನ ಹಕ್ಕುಪತ್ರ ಪಡೆಯಲು ಆಗುತ್ತಿಲ್ಲ’ ಎಂದು ಇಲ್ಲಿಯ ನಿವಾಸಿ ಪ್ರೇಮಾ ವಡ್ಡರ್ ಹೇಳಿದರು.

‘ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪೌರ ಕಾರ್ಮಿಕರಿಗೆ ಮನೆ ಮಂಜೂರಾಗಿದೆ. ಪ್ರಸ್ತುತ ಮನೆ ನಿರ್ಮಿಸಿಕೊಂಡವರಿಗೆ ಅದರ ಮಾಲೀಕತ್ವದ ಸಮಸ್ಯೆ ಆಗಿದೆ. ಹಲವು ವರ್ಷಗಳ ನಂತರ ಸ್ವಂತ ಸೂರಿನ ಕನಸು ನನಸಾಗುತ್ತದೆ ಎಂದು ಭಾವಿಸಿದವರಿಗೆ ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿಕೊಂಡಂತಾಗಿದೆ’ ಎಂದು ಹತಾಶೆ ವ್ಯಕ್ತಪಡಿಸಿದರು. 

‘ಸಮಸ್ಯೆ ಕುರಿತು ನಗರಸಭೆ ಸದಸ್ಯರು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಗಮನ ಸೆಳೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ಸಮಸ್ಯೆ ಇತ್ಯರ್ಥದ ಬಗ್ಗೆ ಶೀಘ್ರದಲ್ಲೇ ಅರಣ್ಯ ಅಧಿಕಾರಿಗಳು, ನಗರಸಭೆ ಅಧಿಕಾರಿಗಳ ಸಭೆ ನಡೆಸಲಾಗುವುದು. ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ, ಅರಣ್ಯ ಭೂಮಿಯನ್ನು ಅರಣ್ಯೇತರ ಭೂಮಿಯಾಗಿ ಪರಿವರ್ತಿಸಲು ಸರ್ಕಾರಕ್ಕೆ ವರದಿ ನೀಡುವುದಾಗಿ ತಿಳಿಸಿದ್ದಾರೆ’ ಎಂದು ನಗರಸಭೆಯ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡರು. 

Quote - ಸಿಟಿಎಸ್ ಹಾಗೂ ಅರಣ್ಯ ಭೂಮಿ ಗೊಂದಲದ ಸಂಬಂಧ ಹಳೆಯ ದಾಖಲೆಗಳ ಕ್ರೋಡೀಕರಿಸಿ ಜಿಲ್ಲಾಧಿಕಾರಿ ಕಚೇರಿಗೆ ವರದಿ ನೀಡಲಾಗುವುದು. - ಕಾಂತರಾಜ್- ಪೌರಾಯುಕ್ತ ಶಿರಸಿ ನಗರಸಭೆ

Quote - ಇಲ್ಲಿನ ನಿವಾಸಿಗಳು ನಗರಸಭೆ ವ್ಯಾಪ್ತಿಯಲ್ಲಿ ಇದ್ದು ಸಿಟಿಎಸ್ ಅಡಿ ಬರುತ್ತಾರೆ. ಹೀಗಾಗಿ ತಕ್ಷಣ ಅರಣ್ಯ ಭೂಮಿ ಮಾಲಿಕತ್ವ ತೆಗೆದು ಅಲ್ಲಿನವರಿಗೆ ಸ್ವತ್ತಿನ ಹಕ್ಕುಪತ್ರ ನೀಡುವಂತಾಗಬೇಕು. - ಪ್ರದೀಪ ಶೆಟ್ಟಿ- ನಗರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT