ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿಗಿಲ್ಲ ಇಂದಿರಾ ಕ್ಯಾಂಟೀನ್ ಭಾಗ್ಯ!

ದಾಸ್ತಾನು ಕೊಠಡಿಯಲ್ಲಿ ಧೂಳು ತಿನ್ನುತ್ತಿರುವ ಪರಿಕರಗಳು
Last Updated 1 ಮೇ 2022, 20:30 IST
ಅಕ್ಷರ ಗಾತ್ರ

ಶಿರಸಿ: ಬಡವರಿಗೆ ಕಡಿಮೆ ದರದಲ್ಲಿ ಊಟ, ಉಪಹಾರ ಒದಗಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಯೋಜನೆ ಆರು ವರ್ಷ ಕಳೆದರೂ ಶಿರಸಿಯಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ.

ಕ್ಯಾಂಟೀನ್ ಸ್ಥಾಪನೆಗೆ ನಗರಸಭೆ ಸೂಕ್ತ ಜಾಗ ಅಂತಿಮಗೊಳಿಸಲು ಹಿಂದೇಟು ಹಾಕುತ್ತಿರುವ ಪರಿಣಾಮ ಜನಪರ ಯೋಜನೆ ಕಾರ್ಯಗತಗೊಂಡಿಲ್ಲ. ಕಳೆದ ಕೆಲ ವರ್ಷಗಳಿಂದಲೂ ಕ್ಯಾಂಟೀನ್ ಸ್ಥಾಪನೆಗೆ ಜಾಗ ಹುಡುಕಾಟದಲ್ಲೇ ಕಾಲ ಕಳೆಯಲಾಗುತ್ತಿದೆ. ಎರಡು ವರ್ಷದ ಹಿಂದೆಯೇ ಪೂರೈಕೆಯಾಗಿದ್ದ ಕ್ಯಾಂಟೀನ್ ಪಾತ್ರೆ, ಅಡುಗೆ ತಯಾರಿಕೆ ಸಾಮಗ್ರಿಗಳು ನಗರಸಭೆಯ ದಾಸ್ತಾನು ಕೊಠಡಿಯಲ್ಲಿ ಧೂಳು ತಿನ್ನುತ್ತಿವೆ.

ಹಳೆ ಬಸ್ ನಿಲ್ದಾಣದ ಸಮೀಪದ ಜಾಗವೊಂದರಲ್ಲಿ ಮೂರು ವರ್ಷದ ಹಿಂದೆ ಕ್ಯಾಂಟೀನ್ ಸ್ಥಾಪನೆಗೆ ಸಿದ್ಧತೆ ನಡೆದಿತ್ತು. ಕಾಮಗಾರಿ ಅಡಿಪಾಯ ಹಂತದಲ್ಲಿದ್ದಾಗ ಜಾಗದ ಮಾಲೀಕತ್ವದ ವಿಚಾರವಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದರಿಂದ ಸ್ಥಗಿತಗೊಂಡಿತ್ತು.

ಕೆಲವು ತಿಂಗಳ ಹಿಂದೆ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ರಾಯಪ್ಪ ಹುಲೇಕಲ್ ಶಾಲೆ ಸಮೀಪ ಕ್ಯಾಂಟೀನ್ ಸ್ಥಾಪನೆಗೆ ಜಾಗ ಒದಗಿಸುವ ಬಗ್ಗೆ ಚರ್ಚೆಯೂ ನಡೆದಿತ್ತು. ಆದರೆ, ಜಾಗ ಇನ್ನೂ ಒದಗಿಸಲು ಈವರೆಗೂ ಅಂತಿಮ ನಿರ್ಣಯವಾಗಿಲ್ಲ ಎಂಬುದು ನಗರಸಭೆ ನೀಡುತ್ತಿರುವ ಮಾಹಿತಿ.

‘ಮೊದಲು ಗುರುತಿಸಿದ್ದ ಜಾಗ ವಿವಾದಕ್ಕೆ ಈಡಾದ್ದರಿಂದ ಬೇರೆ ಜಾಗ ಹುಡುಕಿ ಕ್ಯಾಂಟೀನ್ ಸ್ಥಾಪಿಸಲು ಹಲವು ಬಾರಿ ಸಭೆಯಲ್ಲೂ ಚರ್ಚಿಸಿದ್ದೇವೆ. ಜನಪರವಾಗಿರುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನಿರಾಸಕ್ತಿ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಯೋಜನೆ ಆಗಿರುವ ಕಾರಣ ಅನುಷ್ಠಾನಕ್ಕೆ ತರಲು ವಿಳಂಬ ಮಾಡುತ್ತಿರುವ ಸಂಶಯವೂ ಇದೆ’ ಎಂದು ನಗರಸಭೆಯ ಕಾಂಗ್ರೆಸ್ ಸದಸ್ಯರೊಬ್ಬರು ದೂರಿದರು.

‘ಹಲವು ನಗರಗಳಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯಾರಂಭಿಸಿದೆ. ಶಿರಸಿಯಂತಹ ಪ್ರಮುಖ ಸ್ಥಳದಲ್ಲಿ ಈ ಸೌಲಭ್ಯ ಆದಷ್ಟು ಬೇಗ ಆರಂಭಿಸಬೇಕು. ಇದರಿಂದ ಬಡವರಿಗೆ, ಕಾರ್ಮಿಕರಿಗೆ ಕಡಿಮೆ ವೆಚ್ಚದಲ್ಲಿ ಊಟ, ಉಪಹಾರ ಲಭಿಸಲು ಅನುಕೂಲವಾಗುತ್ತದೆ’ ಎಂದು ಕಾರ್ಮಿಕ ಮುಖಂಡ ದಿನೇಶ ನಾಯ್ಕ ಒತ್ತಾಯಿಸಿದರು.

ನಾಲ್ಕು ಕಡೆ ಕ್ಯಾಂಟೀನ್ ಇಲ್ಲ:

‘ಜಿಲ್ಲೆಯಲ್ಲಿ 11 ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆಯ ಗುರಿ ಹೊಂದಲಾಗಿದೆ. ಈ ಪೈಕಿ ಏಳು ಕಡೆಗಳಲ್ಲಿ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿದೆ. ಶಿರಸಿ, ಸಿದ್ದಾಪುರ, ಕುಮಟಾ ಮತ್ತು ಹೊನ್ನಾವರದಲ್ಲಿ ಇನ್ನೂ ಜಾಗ ಅಂತಿಮಗೊಂಡಿಲ್ಲ. ಹೀಗಾಗಿ ಕಾಮಗಾರಿ ನನೆಗುದಿಗೆ ಬಿದ್ದಿದೆ’ ಎಂದು ಜಿಲ್ಲಾ ನಗರಾಭಿವೃದ್ಧಿಕೋಶದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

-------------

ಜನರಿಗೆ ಅನುಕೂಲವಾಗುವಂತೆ ಸೂಕ್ತ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಬೇಕಿದ್ದು ಅದಕ್ಕಾಗಿ ಜಾಗ ಹುಡುಕಾಡುತ್ತಿದ್ದೇವೆ.

- ಕೇಶವ ಚೌಗುಲೆ, ಪೌರಾಯುಕ್ತ ಶಿರಸಿ ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT