ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಭ್ರಮದ ಚೌತಿ: ಕಳೆಗಟ್ಟಿದ ಭಕ್ತಿ

ಮನೆಗಳಲ್ಲಿ ವಿಶೇಷ ಪೂಜೆ: ಉತ್ಸವ ಸಮಿತಿಗಳಿಂದ ವಿಗ್ರಹ ಪ್ರತಿಷ್ಠಾಪನೆ
Last Updated 1 ಸೆಪ್ಟೆಂಬರ್ 2022, 16:06 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಾದ್ಯಂತ ಚೌತಿ ಹಬ್ಬದ ಸಂಭ್ರಮವು ಈ ಬಾರಿ ಕಳೆಗಟ್ಟಿದೆ. ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಂದ ವಿವಿಧೆಡೆ ಗಣಪತಿಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಆರಾಧನೆ ಆರಂಭಿಸಿದ್ದಾರೆ. ಮನೆ ಮನೆಗಳಲ್ಲಿ ಬುಧವಾರ ಹಬ್ಬವನ್ನು ಸಂಭ್ರಮದಿಂದ, ಸಾಂಪ್ರದಾಯಿಕವಾಗಿ ಆಚರಿಸಲಾಯಿತು.

ಗಣಪತಿಗೆ ಮೋದಕ, ಪಂಚಕಜ್ಜಾಯ, ಗರಿಕೆ ಮುಂತಾದವುಗಳನ್ನು ಅರ್ಪಿಸಿದ ಭಕ್ತರು ವಿಶೇಷ ಪೂಜೆ ನೆರವೇರಿಸಿದರು. ಎರಡು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ ಸೋಂಕಿನಿಂದಾಗಿ ಹಬ್ಬವು ಕಳೆಗುಂದಿತ್ತು. ಈ ಬಾರಿ ಸರ್ಕಾರವು ಸಾರ್ವಜನಿಕ ಉತ್ಸವಗಳಿಗೆ ನಿರ್ಬಂಧ ವಿಧಿಸಿಲ್ಲ. ಹಾಗಾಗಿ ಜಿಲ್ಲೆಯಾದ್ಯಂತ ಒಟ್ಟು 1,338 ಕಡೆಗಳಲ್ಲಿ ಅನುಮತಿ ಪಡೆದು ಸಾರ್ವಜನಿಕ ಗಣೇಶೋತ್ಸವ ಆಯೋಜಿಸಲಾಗುತ್ತಿದೆ.

ಕಾರವಾರದಲ್ಲಿ ವಿನಾಯಕನ ವಿಗ್ರಹಗಳನ್ನು ಭಕ್ತರು ಮೆರವಣಿಗೆಯಲ್ಲಿ ತೆಗೆದುಕೊಂಡು ಬಂದು ಮಂಟಪಗಳಲ್ಲಿ ಪ್ರತಿಷ್ಠಾಪನೆ ಮಾಡಿದರು. ತಯಾರಿಸಿದ ಜಾಗದಿಂದ ಮಂಟಪದವರೆಗೂ ಪಟಾಕಿಯ ಸದ್ದು, ‘ಗಣಪತಿ ಬಪ್ಪ ಮೋರಯ’ದಂಥ ಘೋಷಣೆಗಳು ಮುಗಿಲು ಮುಟ್ಟಿದ್ದವು.

ಮಂಟಪಗಳನ್ನು ಬಣ್ಣ ಬಣ್ಣದ ಹೂಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿದೆ. ಆಯಾ ಉತ್ಸವ ಸಮಿತಿಗಳ ತೀರ್ಮಾನದಂತೆ ಸೆ.12ರ ತನಕ ನಿತ್ಯವೂ ಪೂಜೆ ನೆರವೇರಿಸಲಾಗುತ್ತದೆ. ಬಳಿಕ ಅದ್ಧೂರಿ ಮೆರವಣಿಗೆಯಲ್ಲಿ ಸಾಗಿ ವಿಸರ್ಜನೆ ಮಾಡಲಾಗುತ್ತದೆ.

ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ವಿಗ್ರಹಗಳನ್ನು ಕೆಲವರು ಪೂಜಿಸಿ, ಬುಧವಾರವೇ ವಿಸರ್ಜನೆ ಮಾಡಿದ್ದಾರೆ. ಕರಾವಳಿಯ ಬಹುತೇಕ ಕಡೆಗಳಲ್ಲಿ ಮೂರು ದಿನ ಆರಾಧಿಸಿ ನಂತರ ವಿಸರ್ಜನೆ ಮಾಡಲಾಗುತ್ತದೆ. ಹಾಗಾಗಿ ಸಾರ್ವಜನಿಕ ಗಣೇಶೋತ್ಸವಗಳಿಗೆ ಸೆ.3ರಿಂದ ಜನರ ಭೇಟಿ ಹೆಚ್ಚುವ ನಿರೀಕ್ಷೆಯಿದೆ.

ಗಣಪತಿ ವಿಗ್ರಹಗಳ ವಿಸರ್ಜನೆಯ ತನಕವೂ ಪ್ರತಿ ದಿನ ಸಂಜೆ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಿಸಲಿವೆ. ಗುಮಟೆ ಪಾಂಗ್, ಡೋಲುಗಳಂಥ ಸಾಂಪ್ರದಾಯಿಕ ವಾದ್ಯಗಳ ನಾದವೂ ಭಕ್ತಿ ಪರವಶಗೊಳಿಸಲಿವೆ.

ಮಳೆಯ ರಗಳೆ:

ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆಯಿಂದ ಗುಡುಗು, ಸಿಡಿಲು, ಗಾಳಿಯೊಂದಿಗೆ ಜೋರಾಗಿ ಮಳೆಯಾಗಿದೆ. ಚೌತಿ ಹಬ್ಬದ ಸಂಭ್ರಮಕ್ಕೆ ಮಳೆಯು ತುಸು ಅಡಚಣೆ ಮಾಡಿತು. ಕೆಲವೆಡೆ ಪೆಂಡಾಲ್‌ಗಳು ಸಂಪೂರ್ಣ ತೋಯ್ದು ಸಂಜೆ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೊಡಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT