ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೋಲಾ | ಮೀನು ಮಾರುಕಟ್ಟೆ: ಅವ್ಯವಸ್ಥೆಯ ಆಗರ

ಅವರ್ಸಾ ಗ್ರಾ.ಪಂ: ಅಭಿವೃದ್ಧಿ ಕುಂಠಿತ, ಮೂಲಸೌಕರ್ಯ ಸಮಸ್ಯೆ
Published 19 ಜುಲೈ 2023, 5:14 IST
Last Updated 19 ಜುಲೈ 2023, 5:14 IST
ಅಕ್ಷರ ಗಾತ್ರ

ಮೋಹನ ದುರ್ಗೇಕರ್

ಅಂಕೋಲಾ: ‘ಮೀನು ಮಾರುಕಟ್ಟೆ ಅವ್ಯವಸ್ಥೆಯ ಆಗರವಾಗಿದೆ. ಮಾರುಕಟ್ಟೆಯ ಸುತ್ತಲೆಲ್ಲ ರಾಶಿಗಟ್ಟಲೆ ಕಸ ಬಿದ್ದಿದೆ. ಮೀನು ಖರೀದಿಗೆ ಬರುವವರು ರೋಗ ಅಂಟಿಸಿಕೊಂಡು ಹೋಗಬೇಕಾಗುತ್ತದೆಯೊ ಎಂಬ ಆತಂಕ ಸಹಜವಾಗಿ ಇಲ್ಲಿನ ಸ್ಥಿತಿ ನೋಡಿದರೆ ಉಂಟಾಗುತ್ತದೆ’.

ಹೀಗೆ ಸಮಸ್ಯೆ ಹೇಳಿಕೊಂಡವರು ಅವರ್ಸಾ ಗ್ರಾಮದ ನೀಲಕಂಠ ನಾಯ್ಕ. ಅವರು ಮಾರುಕಟ್ಟೆಯ ಎದುರಿನಲ್ಲೇ ನಿಂತು ಮಾತನಾಡುತ್ತಿದ್ದರೆ ಸ್ವಚ್ಛತೆ ಮರೆತ ಪ್ರದೇಶದಲ್ಲೂ ಜನರು ಮೀನು ಖರೀದಿಗೆ ಮುಗಿ ಬೀಳುತ್ತಿದ್ದ ದೃಶ್ಯಗಳು ಕಾಣಸಿಗುತ್ತಿದ್ದವು. ಅಂಕೋಲಾ ತಾಲ್ಲೂಕಿನ ಪ್ರಮುಖ ಗ್ರಾಮದಲ್ಲಿ ಒಂದೆನಿಸಿದ ಅವರ್ಸಾ ಗ್ರಾಮ ಸಾಧಕರಿಂದ ತುಂಬಿದೆ. ಆದರೆ ಗ್ರಾಮಕ್ಕೆ ಕೊಳಚೆ ಹೊದ್ದ ಮಾರುಕಟ್ಟೆಯೇ ಶಾಪದಂತಾಗಿದೆ ಎಂಬುದು ಇಲ್ಲಿನ ಜನರ ದೂರು.

‘ಮೀನು ಮಾರುಕಟ್ಟೆ ಎದುರು ಪ್ಲಾಸ್ಟಿಕ್ ತ್ಯಾಜ್ಯಗಳು ತುಂಬಿಕೊಂಡಿವೆ. ಮಾರುಕಟ್ಟೆ ಒಳಗಿನ ಶೌಚಾಲಯದ ಟ್ಯಾಂಕ್ ತುಂಬಿ ಶೌಚಾಲಯದ ಹೊಲಸು ನೀರು ಮಾರುಕಟ್ಟೆ ಆವರಣದಲ್ಲಿ ಹರಿದು ಬರುತ್ತಿದೆ. ಅವರ್ಸಾ, ಹಟ್ಟಿಕೇರಿ, ಹಾರವಾಡ ಭಾಗದ ನೂರಾರು ಜನರು ಬಂದು ವ್ಯಾಪಾರ ನಡೆಸುವ ತಾಣದಲ್ಲಿ ಶುಚಿತ್ವ ಕಾಯ್ದುಕೊಳ್ಳುವ ಕೆಲಸ ಆಗುತ್ತಿಲ್ಲ’ ಎಂದು ಸ್ಥಳೀಯ ಹಲವು ಯುವಕರು ದೂರಿದರು.

‘ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಮಾರುಕಟ್ಟೆ ಇರುವ ಕಾರಣ ವಾಹನ ನಿಲುಗಡೆಗೆ ಜಾಗದ ಕೊರತೆ ಇದೆ. ಹೆದ್ದಾರಿಯಲ್ಲೇ ವಾಹನ ನಿಲುಗಡೆ ಮಾಡಿ ಕೆಲವರು ಅಪಘಾತಕ್ಕೆ ತುತ್ತಾದ ಘಟನೆಯೂ ನಡೆದಿದೆ’ ಎನ್ನುತ್ತಾರೆ ರಾಘವೇಂದ್ರ ನಾಯ್ಕ, ಇತರರು.

ಅವರ್ಸಾ ಗ್ರಾಮಪಂಚಾಯತಿಯ ವ್ಯಾಪ್ತಿಯಲ್ಲಿ 1605 ಮನೆಗಳಿವೆ. 4311 ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿರುವ ಗ್ರಾಮ ಪಂಚಾಯ್ತಿ ಗ್ರಂಥಾಲಯವನ್ನು ಗ್ರಂಥಮಿತ್ರವಾಗಿ ಪರಿವರ್ತನೆ ಮಾಡಿದ್ದು ವಿಶೇಷ. 7 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ಶನಿವಾರ ಗ್ರಂಥಮಿತ್ರ ಅಡಿಯಲ್ಲಿ ಕಲಿಕೆ ಕುರಿತು ತರಬೇತಿ ನೀಡಲಾಗುತ್ತಿದೆ.

‘ಗ್ರಾಮೀಣ ಭಾಗದಲ್ಲಿ ರಸ್ತೆಯ ವ್ಯವಸ್ಥೆ ಸರಿಯಾಗಿಲ್ಲ. ಚರಂಡಿ ಹೂಳೆತ್ತುವ ಕೆಲಸ ಸರಿಯಾಗಿ ನಡೆದಿಲ್ಲ. ಬೇಸಿಗೆಗಾಲದಲ್ಲಿ ಕುಡಿಯುವ ನೀರಿನ ಕೊರತೆಯ ಸಮಸ್ಯೆ ಇದೆ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ರಾಜೇಶ ನಾಯ್ಕ ಹೇಳುತ್ತಾರೆ.

ಅವರ್ಸಾ ಗ್ರಾಮದ ಮೀನುಮಾರುಕಟ್ಟೆ ಸುತ್ತ ಕಸದ ರಾಶಿ ಬಿದ್ದಿರುವುದು
ಅವರ್ಸಾ ಗ್ರಾಮದ ಮೀನುಮಾರುಕಟ್ಟೆ ಸುತ್ತ ಕಸದ ರಾಶಿ ಬಿದ್ದಿರುವುದು

ಸಾಮಾನ್ಯ ಸಭೆಯಲ್ಲಿ ಟೆಂಡರ್ ಪ್ರಕ್ರಿಯೆ ಕುರಿತು ಚರ್ಚೆ ನಡೆಯಲಿದೆ. ಕಸ ಎಸೆಯದಂತೆ ನೋಟಿಸ್ ನೀಡಲಾಗಿದೆ. ತುಂಬಿರುವ ಶೌಚಾಲಯದ ಟ್ಯಾಂಕ್ ಸ್ವಚ್ಛಗೊಳಿಸಲು ಪುರಸಭೆಗೆ ತಿಳಿಸಲಾಗಿದೆ. ಸೀತಾ ಮೇತ್ರಿ ಅವರ್ಸಾ ಗ್ರಾಮ ಪಂಚಾಯ್ತಿ ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT