ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕನ್ನಡ ಜಿಲ್ಲೆ | ಸನ್ನದ್ಧ ಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆ

ನ್ಯುಮೋನಿಯಾ ಸೋಂಕು ತಡೆಗಟ್ಟುವ ಎಚ್ಚರಿಕೆ ಬೆನ್ನಲ್ಲೆ ವ್ಯವಸ್ಥೆ
Published 30 ನವೆಂಬರ್ 2023, 5:39 IST
Last Updated 30 ನವೆಂಬರ್ 2023, 5:39 IST
ಅಕ್ಷರ ಗಾತ್ರ

ಕಾರವಾರ: ಚೀನಾ ದೇಶದ ಮಕ್ಕಳಲ್ಲಿ ನ್ಯುಮೋನಿಯಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಬೆನ್ನಲ್ಲೆ ಆರೋಗ್ಯ ಇಲಾಖೆ ಜಿಲ್ಲೆಯಲ್ಲಿಯೂ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದೆ. ಕೋವಿಡ್ ಪ್ರಯೋಗಾಲಯ ಮತ್ತೆ ಬಾಗಿಲು ತೆರೆದಿದ್ದು, ಆಮ್ಲಜನಕ ಉತ್ಪಾದನಾ ಘಟಕಗಳ ಸುಸ್ಥಿತಿ ಬಗ್ಗೆ ಪರಿಶೀಲನೆ ನಡೆಸಲಾಗಿದೆ.

ಕ್ರಿಮ್ಸ್ ಅಧೀನದಲ್ಲಿರುವ ಜಿಲ್ಲಾಸ್ಪತ್ರೆ, 11 ತಾಲ್ಲೂಕು ಆಸ್ಪತ್ರೆ, ಮೂರು ನಗರ ಆರೋಗ್ಯ ಕೇಂದ್ರ, 11 ತಾಲ್ಲೂಕು ಆಸ್ಪತ್ರೆಗಳಲ್ಲಿ ಜ್ವರ, ಶೀತ, ನ್ಯಮೋನಿಯಾ ಚಿಕಿತ್ಸೆಗೆ ಅಗತ್ಯ ಔಷಧ ದಾಸ್ತಾನು ಮಾಡಿಕೊಂಡಿರುವುದಾಗಿ ಆರೋಗ್ಯ ಇಲಾಖೆ ಹೇಳುತ್ತಿದೆ. ಅಲ್ಲದೆ ಜಿಲ್ಲಾ ಉಗ್ರಾಣ ಘಟಕ, ಆಸ್ಪತ್ರೆಗಳು ಸೇರಿದಂತೆ ಲಕ್ಷಕ್ಕೂ ಹೆಚ್ಚು ಮಾಸ್ಕ್ ಗಳನ್ನು ದಾಸ್ತಾನು ಇಟ್ಟಿರುವುದಾಗಿಯೂ ಘೋಷಿಸಿದೆ.

ಕಾರವಾರದ ಕ್ರಿಮ್ಸ್ ಮತ್ತು ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಕೋವಿಡ್ ಪತ್ತೆ ಪ್ರಯೋಗಾಲಯಗಳು ನಿರಂತರವಾಗಿ ಕಾರ್ಯಾಚರಿಸುತ್ತಿದ್ದರೂ ಕಳೆದ ಕೆಲವು ದಿನಗಳಿಂದ ತಪಾಸಣೆಗೆ ಗಂಟಲು ದ್ರವಗಳು ಬರುವುದು ಕಡಿಮೆ ಆಗಿತ್ತು. ಆದರೆ, ಈಗ ಪುನಃ ಪ್ರಯೋಗಾಲಯ ಸನ್ನದ್ಧ ಸ್ಥಿತಿಗೆ ಸಜ್ಜುಗೊಂಡಿದೆ.

‘ಜಿಲ್ಲೆಯಲ್ಲಿ ಜ್ವರ, ಶೀತ ವ್ಯಾಪಕವಾಗಿ ಹರಡುವ ಸ್ಥಿತಿ ಸದ್ಯಕ್ಕಿಲ್ಲ. ಆದರೆ ಅಕ್ಟೋಬರ್ ತಿಂಗಳಿನಲ್ಲಿ ಪ್ರತಿ ವಾರಕ್ಕೆ ಸರಾಸರಿ 3920 ರಷ್ಟು ಪ್ರಕರಣಗಳು ವರದಿಯಾಗುತ್ತಿದ್ದವು. ಈಗ ಅರ್ಧಕ್ಕಿಂತಲೂ ಕಡಿಮೆಗೆ ಇಳಿಕೆಯಾಗಿದೆ. ಆದರೆ ಇಲಾಖೆಯ ಸೂಚನೆ ಪ್ರಕಾರ ನ್ಯುಮೋನಿಯಾ, ಜ್ವರ ಮತ್ತಿತರ ಉಸಿರಾಟದ ಸಮಸ್ಯೆಗೆ ಚಿಕಿತ್ಸೆ ನೀಡಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ.ವಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ತಲಾ 20 ಹಾಸಿಗೆ ಸಾಮರ್ಥ್ಯದ ಐ.ಸಿ.ಯು ಘಟಕಗಳಿವೆ. ಜಿಲ್ಲಾಸ್ಪತ್ರೆಯಲ್ಲಿ ನೂರು ಹಾಸಿಗೆಯ ಐ.ಸಿ.ಯು ಘಟಕವಿದೆ. ಮಾಸ್ಕ್, ಪಿಪಿಇ ಕಿಟ್, ಸ್ಯಾನಿಟೈಸರ್, ನ್ಯುಮೋನಿಯಾ ಚಿಕಿತ್ಸೆಗೆ ಅಗತ್ಯವಿರುವ ಒಸಿಲ್ಟಾಮಿವಿರ್ ಮಾತ್ರೆಗಳು ಸೇರಿದಂತೆ ಅಗತ್ಯ ಸೌಕರ್ಯಗಳನ್ನು ದಾಸ್ತಾನು ಇಟ್ಟುಕೊಂಡಿದ್ದೇವೆ’ ಎಂದು ವಿವರಿಸಿದರು.

ಕಾರವಾರದ ಕ್ರಿಮ್ಸ್ ಕಟ್ಟಡದಲ್ಲಿರುವ ಕೋವಿಡ್ ಪತ್ತೆ ಪ್ರಯೋಗಾಲಯ.
ಕಾರವಾರದ ಕ್ರಿಮ್ಸ್ ಕಟ್ಟಡದಲ್ಲಿರುವ ಕೋವಿಡ್ ಪತ್ತೆ ಪ್ರಯೋಗಾಲಯ.
ನ್ಯುಮೋನಿಯಾ ಕೋವಿಡ್ ಸೇರಿದಂತೆ ಉಸಿರಾಟದ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ಒದಗಿಸಲು ಅಗತ್ಯ ಔಷಧ ಸೌಲಭ್ಯಗಳಿವೆ. ಕೊರತೆಯಾದರೆ ಖರೀದಿಗೆ ಅನುದಾನವೂ ಲಭ್ಯವಿದೆ
ಡಾ.ನೀರಜ್ ಬಿ.ವಿ ಜಿಲ್ಲಾ ಆರೋಗ್ಯಾಧಿಕಾರಿ
ರೋಗಿಗಳ ದಟ್ಟಣೆಗೆ ಆಸ್ಪದ ನೀಡದೆ ಉತ್ತಮ ಚಿಕಿತ್ಸೆ ಒದಗಿಸಲು ಜಿಲ್ಲಾಸ್ಪತ್ರೆಯನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಐ.ಸಿ.ಯು ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಪರಿಶೀಲನೆ ಕಾರ್ಯ ನಡೆಸಲಾಗಿದೆ
ಡಾ.ಗಜಾನನ ನಾಯಕ ಕ್ರಿಮ್ಸ್ ನಿರ್ದೇಶಕ

ಆಮ್ಲಜನಕ ಉತ್ಪಾದನೆ ಘಟಕಗಳಿಗೆ ಮರುಚಾಲನೆ! ಕೋವಿಡ್ ಸಾಂಕ್ರಾಮಿಕ ವ್ಯಾಪಕವಾಗಿ ಹರಡಿದ್ದ ಅವಧಿಯಲ್ಲಿ ಕ್ರಿಮ್ಸ್ ಜಿಲ್ಲೆಯ ಬಹುತೇಕ ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ಆಮ್ಲಜನಕ ಉತ್ಪಾದನೆ ಘಟಕ ಸ್ಥಾಪಿಸಲಾಗಿತ್ತು. ಕೋವಿಡ್ ಪ್ರಮಾಣ ಕಡಿಮೆಯಾದ ಬೆನ್ನಲ್ಲೆ ಘಟಕಗಳ ಬಳಕೆ ಕಡಿಮೆಯಾಗಿತ್ತು. ಈಗ ಪುನಃ ಅವುಗಳಿಗೆ ಚಾಲನೆ ನೀಡುವ ಕೆಲಸ ಆರಂಭಿಸಲಾಗಿದೆ. ಆಸ್ಪತ್ರೆಗಳ ಆವರಣದಲ್ಲಿರುವ ಘಟಕಗಳನ್ನು ಕಳೆದ ಒಂದೆರಡು ದಿನಗಳಿಂದ ಪರಿಶೀಲಿಸುವ ಕೆಲಸವನ್ನು ಅಧಿಕಾರಿಗಳ ಮಾಡುತ್ತಿದ್ದಾರೆ. ‘ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ದ್ರವರೂಪದ ಆಕ್ಸಿಜನ್ ಬಳಸಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ತೀವೃ ಸಮಸ್ಯೆ ಇದ್ದರೆ ಮಾತ್ರ ಆಮ್ಲಜನಕ ಉತ್ಪಾದನೆ ಘಟಕಗಳ ಅಗತ್ಯವಿರುತ್ತದೆ. ಕೋವಿಡ್ ವೇಳೆ ಅವುಗಳು ಉಪಯುಕ್ತವಾಗಿದ್ದವು. ಈಗ ಇಲಾಖೆ ಸೂಚನೆಯಂತೆ ಅವುಗಳನ್ನು ಪರಿಶೀಲಿಸಲಾಗಿದ್ದು ಸುಸಜ್ಜಿತ ಸ್ಥಿತಿಯಲ್ಲಿರುವುದನ್ನು ಖಾತ್ರಿಪಡಿಸಿಕೊಂಡಿದ್ದೇವೆ’ ಎಂದು ಕ್ರಿಮ್ಸ್ ನಿರ್ದೇಶಕ ಡಾ.ಗಜಾನನ ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT