ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ ಕ್ಷೇತ್ರ ಸ್ಥಿತಿಗತಿ: ರೆಬೆಲ್ ಸ್ಟಾರ್‌ಗಳ ಕ್ಷೇತ್ರ

‘ಸ್ವಾಭಿಮಾನಿ ಬಣ‘ ರಚನೆಗೆ ಮುಂದಾದ ಅಸಮಾಧಾನಿತ ಅಭ್ಯರ್ಥಿಗಳು
Last Updated 19 ಏಪ್ರಿಲ್ 2023, 23:45 IST
ಅಕ್ಷರ ಗಾತ್ರ

ಕಾರವಾರ: ಪಕ್ಷದ ಟಿಕೆಟ್ ಸಿಗದೆ ಅಸಮಾಧಾನಗೊಂಡು ಅನ್ಯ ಪಕ್ಷಗಳತ್ತ ‘ಜಿಗಿತ’ ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ಸಾಮಾನ್ಯವಾಗಿದೆ. ಆದರೆ ಕುಮಟಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಮಾತ್ರ ‘ಜಿಗಿತ’ದ ಬದಲು ಬಂಡಾಯ ಸಾರಲು ಮುಂದಾಗಿದ್ದಾರೆ.

ಆರು ವಿಧಾನಸಭಾ ಕ್ಷೇತ್ರಗಳಿರುವ ಜಿಲ್ಲೆಯಲ್ಲಿ ಕುಮಟಾ ಕ್ಷೇತ್ರ ಕಾಂಗ್ರೆಸ್ ಪಾಲಿಗೆ ಟಿಕೆಟ್ ಹಂಚಿಕೆಗೆ ಕಗ್ಗಂಟಾಗಿತ್ತು. ಕೊನೆ ಕ್ಷಣದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ಅವರಿಗೆ ಸ್ಪರ್ಧಿಸಲು ಪಕ್ಷ ಅವಕಾಶ ಕಲ್ಪಿಸಿದೆ. ಇದು ಇನ್ನುಳಿದ ಟಿಕೆಟ್ ಆಕಾಂಕ್ಷಿಗಳಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡಿದೆ.

ಅಭ್ಯರ್ಥಿ ಆಕಾಂಕ್ಷಿಗಳಿಂದ ಕೆಲವು ತಿಂಗಳ ಹಿಂದೆ ಕೆಪಿಸಿಸಿ ಅರ್ಜಿ ಆಹ್ವಾನಿಸಿದ ವೇಳೆ 14 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಮೂವರು ಕೊನೆ ಕ್ಷಣದವರೆಗೂ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸಲು ಪ್ರಯತ್ನ ನಡೆಸಿದ್ದರು. ಮಾಜಿ ಶಾಸಕಿ ಶಾರದಾ ಶೆಟ್ಟಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಹಾಗೂ ಮಂಜುನಾಥ ನಾಯ್ಕ ಈ ಮೂವರಾಗಿದ್ದಾರೆ.

ನಿವೇದಿತ್‍‍ಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಉಳಿದ ಆಕಾಂಕ್ಷಿಗಳು ಸಹಮತ ಎಂಬಂತೆ ‘ಮೌನ’ಕ್ಕೆ ಜಾರಿದ್ದರೂ ಪಕ್ಷ ಅವಕಾಶ ಕಲ್ಪಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಶಾರದಾ ಶೆಟ್ಟಿ ಹಾಗೂ ಶಿವಾನಂದ ಹೆಗಡೆ ಕಡತೋಕಾ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಕಾಂಗ್ರೆಸ್ ಪಾಲಿಗೆ ಕ್ಷೇತ್ರದಲ್ಲಿ ರೆಬೆಲ್ (ಬಂಡಾಯ) ಸಾರುವ ಎಚ್ಚರಿಕೆ ನೀಡಿದ್ದರು. ಈಗಾಗಲೆ ಶಾರದಾ ಶೆಟ್ಟಿ ನಾಮಪತ್ರ ಸಲ್ಲಿಸಿದ್ದು, ಶಿವಾನಂದ ಕೂಡ ಗುರುವಾರ ನಾಮಪತ್ರ ಸಲ್ಲಿಕೆ ಮಾಡುವುದಾಗಿ ಘೋಷಿಸಿದ್ದಾರೆ.

‘ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ನಿರಂತರ ಕೆಲಸ ಮಾಡಿದ್ದ ಕಾರಣ ಇಬ್ಬರಿಗೂ ಕಾರ್ಯಕರ್ತರ ಒಡನಾಟ ಹೆಚ್ಚಿದೆ. ಜತೆಗೆ ಅವರದ್ದೇ ಆದ ಮತಬ್ಯಾಂಕ್ ಕೂಡ ಹೊಂದಿದ್ದಾರೆ. ಕ್ಷೇತ್ರದ ಹೊರಗಿನವರನ್ನು ಕರೆತಂದು ಸ್ಪರ್ಧಿಸಲು ಅವಕಾಶ ಕಲ್ಪಿಸುವ ಔಚಿತ್ಯ ಏನು ಎಂದು ಇಬ್ಬರೂ ಪಕ್ಷದ ನಾಯಕರ ಎದುರು ಪ್ರಶ್ನಿಸಿದ್ದಾರೆ. ಬಂಡಾಯವಾಗಿ ಸ್ಪರ್ಧಿಸಿದರೆ ಪಕ್ಷದ ಸಾಂಪ್ರದಾಯಿಕ ಮತಗಳನ್ನು ಕಸಿಯುವ ಆತಂಕವೂ ಇದೆ’ ಎಂದು ಕುಮಟಾ ಕ್ಷೇತ್ರದ ಕಾಂಗ್ರೆಸ್ ಹಿರಿಯ ಪದಾಧಿಕಾರಿಯೊಬ್ಬರು ಹೇಳಿದರು.

‘ಹಲವು ವರ್ಷಗಳಿಂದ ರಾಜಕೀಯ ಎದುರಾಳಿಗಳಾಗಿರುವ ಶಾರದಾ ಹಾಗೂ ಶಿವಾನಂದ ಇಬ್ಬರೂ ಈಗ ಬಂಡಾಯದ ನೆಪದಲ್ಲಿ ಒಂದಾಗುವ ಲಕ್ಷಣ ಗೋಚರಿಸಿದೆ. ಸ್ವಾಭಿಮಾನಿ ಬಣ ರಚಿಸಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT