ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ತಪಾಸಣೆಗೆ ತೊಡಕಾದ ಸೌಕರ್ಯ ರಹಿತ ಚೆಕ್‍ಪೋಸ್ಟ್

‍ಪಾಲನೆಯಾಗದ ಜಿಲ್ಲಾಧಿಕಾರಿ ಸೂಚನೆ: ಸಿಬ್ಬಂದಿಗೆ ದಿನಕ್ಕೆ 16 ತಾಸು ದುಡಿಯುವ ಒತ್ತಡ
Published 15 ಏಪ್ರಿಲ್ 2024, 4:04 IST
Last Updated 15 ಏಪ್ರಿಲ್ 2024, 4:04 IST
ಅಕ್ಷರ ಗಾತ್ರ

ಕಾರವಾರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸ್ಥಾಪಿಸಲಾದ ಚೆಕ್‍ಪೋಸ್ಟ್‌ಗಳಲ್ಲಿ ಸೌಲಭ್ಯಗಳ ಕೊರತೆ ಎದುರಾಗಿದೆ. ಹಗಲಿನಲ್ಲಿ ಸುಡು ಬಿಸಿಲು ಅಡ್ಡಿಯಾದರೆ, ರಾತ್ರಿ ಸೌಕರ್ಯಗಳ ಕೊರತೆಯಿಂದ ಸಿಬ್ಬಂದಿ ಪರದಾಡುತ್ತಿರುವ ದೂರುಗಳಿವೆ.

ಜಿಲ್ಲೆಯಲ್ಲಿ ಒಟ್ಟು 25 ಕಡೆಗಳಲ್ಲಿ ಚೆಕ್‍ಪೋಸ್ಟ್ ತೆರೆಯಲಾಗಿದೆ. ಈ ಪೈಕಿ ಕಾರವಾರದ ಮಾಜಾಳಿ ಮತ್ತು ಮೈಂಗಿಣಿ ಹಾಗೂ ಜೊಯಿಡಾದ ಅನಮೋಡದಲ್ಲಿ ಅಂತರ್ ರಾಜ್ಯ, ಉಳಿದೆಡೆ ಅಂತರ್ ಜಿಲ್ಲೆ ಗಡಿಭಾಗದಲ್ಲಿ ಚೆಕ್‍ಪೋಸ್ಟ್‌ಗಳಿವೆ.

ಚುನಾವಣೆ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಚೆಕ್‍ಪೋಸ್ಟ್‌ಗಳಲ್ಲಿ ಬಿಗು ತಪಾಸಣೆಗೆ ಸೂಚಿಸಲಾಗಿದ್ದು, ಅಗತ್ಯ ಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ. ಆದರೆ, ಅವರ ಸೌಲಭ್ಯ ಕಲ್ಪಿಸುವಲ್ಲಿ ಅವರ ನಿರ್ದೇಶನ ಪಾಲನೆಯಾಗಿಲ್ಲ ಎಂಬುದು ಸಿಬ್ಬಂದಿಯ ದೂರು. ಕೆಲವು ಕಡೆ ಚೆಕ್‍ಪೋಸ್ಟ್ ಇರುವ ಜಾಗ ಒಂದೆಡೆಯಾದರೆ ಶಾಮಿಯಾನ ಹಾಕಿದ್ದೇ ಬೇರೆಡೆ. ಪ್ರತಿ ಎಂಟು ತಾಸಿಗೊಂದು ಶಿಫ್ಟ್ ಮೂಲಕ ಕಾರ್ಯನಿರ್ವಹಿಸುವ ನಿಯಮವಿದ್ದರೂ ಕೆಲವು ಕಡೆ ಸಿಬ್ಬಂದಿಗೆ ದಿನಕ್ಕೆ 16 ತಾಸು ಕರ್ತವ್ಯ ನಿರ್ವಹಣೆಗೆ ಸೂಚಿಸಿರುವ ದೂರುಗಳಿವೆ.

ಬಿಸಿಲಿನಿಂದ ರಕ್ಷಣೆಗೆ ನೆರಳಿಲ್ಲ, ಕುಡಿಯಲು ಶುದ್ಧ ನೀರಿಲ್ಲ, ತಾತ್ಕಾಲಿಕ ಶೌಚಾಲಯ ವ್ಯವಸ್ಥೆಯಿಲ್ಲ ಎಂಬುದು ಶಿರಸಿ ತಾಲ್ಲೂಕಿನಲ್ಲಿ ಚುನಾವಣೆಗಾಗಿ ಮಾಡಿದ ಚೆಕ್‍ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಕೊರಗು. ಚಿಪಗಿ, ದಾಸನಕೊಪ್ಪ, ತಿಗಣಿಯಲ್ಲಿ ಚೆಕ್‍ಪೋಸ್ಟ್ ನಿರ್ಮಿಸಲಾಗಿದೆ.

‘ಶುದ್ಧ ನೀರಿಲ್ಲ. ಕೊಡದಲ್ಲಿ ನೀರು ಪೂರೈಸಲಾಗುತ್ತಿದೆ. ಪೊಲೀಸ್ ಸಿಬ್ಬಂದಿಗೆ ಮೂರು ಶಿಪ್ಟ್ ಎಂದು ನಿಗದಿಯಾಗಿದ್ದರೂ ದಿನಪೂರ್ತಿ ಎರಡು ಶಿಫ್ಟ್‌ ಗಳಲ್ಲಿ ಕಾರ್ಯ ಮಾಡಲಾಗುತ್ತಿದೆ. ಮೂತ್ರ, ಶೌಚಕ್ಕೆ ಬಯಲು ಪ್ರದೇಶವನ್ನೇ ಆಶ್ರಯಿಸುವಂತಾಗಿದೆ’ ಎಂದು ಸಿಬ್ಬಂದಿಯೊಬ್ಬರು ಹೇಳಿದರು.

ಭಟ್ಕಳ ತಾಲ್ಲೂಕಿನ ಸರ್ಪನಕಟ್ಟೆ ಹಾಗೂ ಕುಂಟವಾಣಿ ಭಾಗದಲ್ಲಿ ಚೆಕ್‍ಪೋಸ್ಟ್ ತೆರೆಯಲಾಗಿದೆ. ಭಟ್ಕಳದ ಬಹುತೇಕರು ಮದುವೆ ಮುಂಜಿ ಕಾರ್ಯಕ್ರಮಕ್ಕೆ ಬಟ್ಟೆ ತರಲು ಹಾಗೂ ಆರೋಗ್ಯ ಚಿಕಿತ್ಸೆಗೆ ನೆರೆಯ ಉಡುಪಿ, ಮಂಗಳೂರು ಜಿಲ್ಲೆಗೆ ತೆರಳುವಾಗ ಹಣ ತೆಗೆದುಕೊಂಡು ಹೋದರೆ ಚೆಕ್‍ಪೋಸ್ಟ್ ಸಿಬ್ಬಂದಿ ತೀವ್ರ ವಿಚಾರಣೆ ನಡೆಸುತ್ತಾರೆ. ಸಮಜಾಯಿಷಿ ನೀಡಿದಾಗ ಬಿಟ್ಟು ಕಳುಹಿಸುತ್ತಾರೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಹಳಿಯಾಳ ತಾಲ್ಲೂಕಿನ ಗಡಿಭಾಗವಾದ ಅರ್ಲವಾಡ, ಮಾವಿನಕೊಪ್ಪ, ಕಾವಲವಾಡ ಗಡಿ ಭಾಗದಲ್ಲಿ ತಪಾಸಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ತಪಾಸಣಾ ಸಿಬ್ಬಂದಿ ಮೂಲಭೂತ ಸೌಕರ್ಯ ಇಲ್ಲದೆ ಪರಿತಪಿಸುತ್ತಿದ್ದಾರೆ. ಅರ್ಲವಾಡಾ ಹತ್ತಿರ ನಿರ್ಮಿಸಿದ ತಪಾಸಣಾ ಕೇಂದ್ರದಲ್ಲಿ ನೆಪಕ್ಕೆ ಮಾತ್ರ ಚಾವಣಿ ನಿರ್ಮಿಸಲಾಗಿದೆ. ನಿರಂತರ ವಾಹನದ ದಟ್ಟಣೆ ಯಾಗುವುದರಿಂದ ಸಿಬ್ಬಂದಿಗೆ ವಿಶ್ರಾಂತಿ ಇಲ್ಲದಂತಾಗಿದೆ. ಉಪಹಾರ, ಉಟಕ್ಕೆ ತಪಾಸಣಾ ಕೇಂದ್ರದಿಂದ ಎರಡು ಕಿ.ಮೀ ದೂರದ ಅಳ್ನಾವರಕ್ಕೆ ಸಾಗಬೇಕಾಗಿದೆ.

ಯಲ್ಲಾಪುರ ತಾಲ್ಲೂಕಿನ ಕಿರವತ್ತಿಯಲ್ಲಿ ಅರಣ್ಯ ಇಲಾಖೆಯ ತಪಾಸಣಾ ನಾಕಾದ ಶೆಡ್‌ನ್ನೇ ತಾತ್ಕಾಲಿಕವಾಗಿ ಚುನಾವಣಾ ಚೆಕ್‌ಪೋಸ್ಟ್ ಆಗಿ ಮಾಡಿಕೊಳ್ಳಲಾಗಿದೆ.

ಗೋಕರ್ಣಕ್ಕೆ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಹಿರೇಗುತ್ತಿಯಲ್ಲಿ ಸ್ಥಾಪಿಸಲ್ಪಟ್ಟ ಚೆಕ್‍ಪೋಸ್ಟ್‌ನಲ್ಲಿ ಮೂಲಭೂತ ಸೌಕರ್ಯವಿಲ್ಲದೇ ಸಿಬ್ಬಂದಿ ಹೈರಾಣಾಗಿದ್ದಾರೆ. ಸುಡುವ ಬಿಸಿಲಿನಲ್ಲೇ ನಿಂತು ತಪಾಸಣಾ ಕಾರ್ಯ ನಿರ್ವಹಿಸಬೇಕಾಗಿದೆ. ಪೊಲೀಸ್ ಸಿಬ್ಬಂದಿ ಜತೆ ಇತರೆ ಸಿಬ್ಬಂದಿ ಕಾರ್ಯನಿರ್ವಹಿಸಬೇಕೆಂದು ಸುತ್ತೋಲೆಯಿದ್ದರೂ, ಇಲ್ಲಿ ಮಾತ್ರ ಒಬ್ಬರೇ ಕಾರ್ಯನಿರ್ವಹಿಸಬೇಕಾಗಿದೆ. ಹಸಿವು, ಬಾಯಾರಿಕೆ ನಿವಾರಿಸಿಕೊಳ್ಳಲೂ ಸುತ್ತಮುತ್ತಲು ಯಾವುದೇ ಅಂಗಡಿಗಳಿಲ್ಲ. ಎರಡು ಕಿ.ಮೀ ದೂರದ ಮೊರಬಾ ಅಥವಾ ಮಾದನಗೇರಿಗೆ ಹೋಗಬೇಕು ಎಂದು ಸಿಬ್ಬಂದಿ ಗೋಳಿಡುತ್ತಿದ್ದಾರೆ.

ಹೊನ್ನಾವರ ತಾಲ್ಲೂಕಿನಲ್ಲಿ ನಾಲ್ಕು ರಸ್ತೆಗಳು ಕೂಡುವ ಚಂದಾವರ ಹಾಗೂ ರಾಷ್ಟ್ರೀಯ ಹೆದ್ದಾರಿ 69ಕ್ಕೆ ಸಂಪರ್ಕ ಬೆಸೆಯುವ ಗೇರುಸೊಪ್ಪದಲ್ಲಿ ಚೆಕ್‌ಪೋಸ್ಟ್‌ಗಳಿವೆ. ಹಗಲು ರಾತ್ರಿಯೆನ್ನದೆ ಚೆಕ್ ಪೋಸ್ಟ್‌ನಲ್ಲಿದ್ದು ವಾಹನಗಳನ್ನು ತಪಾಸಣೆಗೊಳಪಡಸಬೇಕಾದ ಚುನಾವಣಾ ಸಿಬ್ಬಂದಿ ನಿಗದಿತ ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ ಎನ್ನುವ ದೂರು ಕೇಳಿಬರುತ್ತಿದೆ.

‘ಸಿಬ್ಬಂದಿಗೆ ತಂಗಳು ಆಹಾರ ಹಾಗೂ ಬಯಲು ಶೌಚಾಲಯವೇ ಗತಿಯಾಗಿದೆ. ಶಾಮಿಯಾನ ದೂರದಲ್ಲಿ ಹಾಕಿರುವುದರಿಂದ ಚೆಕ್‌ಪೋಸ್ಟ್‌ನಲ್ಲಿನ ಸಿಬ್ಬಂದಿ ಬಿಸಿಲಿನಲ್ಲಿ ಪರಿತಪಿಸುವಂತಾಗಿದೆ. ಸಮೀಪದಲ್ಲಿರುವ ಅರಣ್ಯ ಇಲಾಖೆಯ ಶೌಚಾಲಯ ಬಳಕೆಗೆ ಯೋಗ್ಯವಾಗಿಲ್ಲ’ ಎಂದು ಚಂದಾವರ ಚೆಕ್‌ಪೋಸ್ಟ್ ಸಿಬ್ಬಂದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕುಮಟಾ ತಾಲ್ಲೂಕಿನ ಮೂರು ಕಡೆಯಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಲಾಗಿದ್ದು, ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕನಿಷ್ಠ ಸೌಲಭ್ಯ ಒದಗಿಸಲಾಗಿದೆ ಎಂಬ ದೂರುಗಳಿವೆ.‌ ‘ಹಿರೇಗುತ್ತಿ, ಕತಗಾಲ ಹಾಗೂ ಹೊನ್ನಾವರ ತಾಲ್ಲೂಕಿನ ಚಂದಾವರದಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಲಾಗಿದೆ. ಅಲ್ಲಿ ತಪಾಸಣೆ ಸಿಬ್ಬಂದಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ’ ಎಂದು ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಹೇಳಿದರು.

ದಾಂಡೇಲಿ ತಾಲ್ಲೂಕಿನ ಬರ್ಚಿ ಹತ್ತಿರ ಚೆಕ್‍ಪೋಸ್ಟ್ ತೆರೆಯಲಾಗಿದೆ. ನಗರದಿಂದ ಸುಮಾರು ಎಂಟು ಕಿ.ಮೀ ದೂರದಲ್ಲಿರುವ ಕಾರಣ ಕೆಲಸ ಮುಗಿಸಿ ರಾತ್ರಿ ಕಾಡಿನ ನಡುವೆ ಬರುವ ಕಾರಣ ಭಯ ಉಂಟಾಗುತ್ತದೆ. ಊಟಕ್ಕೆ ಇತರೆ ಸಣ್ಣಪುಟ್ಟ ತೊಂದರೆ ಇರುತ್ತವೆ ಎನ್ನುತ್ತಾರೆ ಕರ್ತವ್ಯ ನಿರತ ಸಿಬ್ಬಂದಿ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಶಾಂತೇಶ ಬೆನಕನಕೊಪ್ಪ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ರವಿ ಸೂರಿ, ಮೋಹನ ನಾಯ್ಕ, ಜ್ಞಾನೇಶ್ವರ ದೇಸಾಯಿ, ಪ್ರವೀಣಕುಮಾರ ಸುಲಾಖೆ, ವಿಶ್ವೇಶ್ವರ ಗಾಂವ್ಕರ.

ದಾಂಡೇಲಿಯ ಬರ್ಚಿ ಚೆಕ್‍ಪೋಸ್ಟ್ ನಲ್ಲಿ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಸಾರ್ವಜನಿಕರ ವಾಹನ ತಪಾಸಣೆ ಮಾಡುತ್ತಿರುವುದು.
ದಾಂಡೇಲಿಯ ಬರ್ಚಿ ಚೆಕ್‍ಪೋಸ್ಟ್ ನಲ್ಲಿ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಸಾರ್ವಜನಿಕರ ವಾಹನ ತಪಾಸಣೆ ಮಾಡುತ್ತಿರುವುದು.
ಹೊನ್ನಾವರ ತಾಲ್ಲೂಕಿನ ಚಂದಾವರದಲ್ಲಿ ಚೆಕ್‍ಪೋಸ್ಟ್ ನಿಂದ ದೂರದಲ್ಲಿ ಸಿಬ್ಬಂದಿ ಸಲುವಾಗಿ ಹಾಕಲಾಗಿರುವ ಶಾಮಿಯಾನದಡಿಯಲ್ಲಿ ಪ್ರಯಾಣಿಕರು ಬಸ್‍ಗೆ ಕಾಯುತ್ತ ನಿಂತಿದ್ದರು.
ಹೊನ್ನಾವರ ತಾಲ್ಲೂಕಿನ ಚಂದಾವರದಲ್ಲಿ ಚೆಕ್‍ಪೋಸ್ಟ್ ನಿಂದ ದೂರದಲ್ಲಿ ಸಿಬ್ಬಂದಿ ಸಲುವಾಗಿ ಹಾಕಲಾಗಿರುವ ಶಾಮಿಯಾನದಡಿಯಲ್ಲಿ ಪ್ರಯಾಣಿಕರು ಬಸ್‍ಗೆ ಕಾಯುತ್ತ ನಿಂತಿದ್ದರು.
ಶಿರಸಿ ತಾಲ್ಲೂಕಿನ ಚಿಪಗಿಯ ಚೆಕ್‍ಪೋಸ್ಟ್ ಬಳಿ ಪೊಲೀಸರು ಚುನಾವಣೆ ಸಿಬ್ಬಂದಿ ಸುಡು ಬಿಸಿಲಿನಲ್ಲಿಯೂ ನಿಂತು ವಾಹನ ತಪಾಸಣೆ ನಡೆಸಿದರು.
ಶಿರಸಿ ತಾಲ್ಲೂಕಿನ ಚಿಪಗಿಯ ಚೆಕ್‍ಪೋಸ್ಟ್ ಬಳಿ ಪೊಲೀಸರು ಚುನಾವಣೆ ಸಿಬ್ಬಂದಿ ಸುಡು ಬಿಸಿಲಿನಲ್ಲಿಯೂ ನಿಂತು ವಾಹನ ತಪಾಸಣೆ ನಡೆಸಿದರು.

ಚೆಕ್‍ಪೋಸ್ಟ್‌ನಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಲಾಗಿದೆ. ಚುನಾವಣೆ ಅಕ್ರಮ ನಡೆಯದಂತೆ ಪ್ರತಿ ಚೆಕ್‍ಪೋಸ್ಟ್ ನಲ್ಲಿಯೂ ಬಿಗು ತಪಾಸಣೆಗೆ ಸೂಚಿಸಲಾಗಿದೆ

- ಗಂಗೂಬಾಯಿ ಮಾನಕರ ಜಿಲ್ಲಾಧಿಕಾರಿ

ಸದ್ಯದ ಬಿಸಿಲಿಗೆ ಮನೆಯಿಂದ ಜನರೇ ಹೊರಬರಲು ಹೆದರುತ್ತಿರುವಾಗ ಚುನಾವಣೆ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಚೆಕ್‌ಪೋಸ್ಟ್‌ಗಳಲ್ಲಿ ಶಾಮಿಯಾನ ಹಾಕಿಸಿದರೆ ನೆರಳು ಮಾಡಿಕೊಟ್ಟಂತಾಗುತ್ತದೆ

-ಮಂಜುನಾಥ ಬಿ. ಮುಂಡಗೋಡ ನಿವಾಸಿ

ಬಿಸಿಲಿನ ತೀವ್ರತೆಯಲ್ಲಿಯೇ ಇಲ್ಲಿಯ ಚುನಾವಣಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನೂ ಒದಗಿಸಿಲ್ಲ

-ಎನ್.ರಾಮು ಹಿರೇಗುತ್ತಿ ನಿವಾಸಿ

ಸಿಬ್ಬಂದಿ ಕೊರತೆಯ ಕೊರಗು

ಜೊಯಿಡಾ ತಾಲ್ಲೂಕಿನ ರಾಮನಗರ ಅನಮೋಡ ಮತ್ತು ಬಾಪೇಲಿ ಕ್ರಾಸ್‌ನಲ್ಲಿ ಚೆಕ್‍‍ಪೋಸ್ಟ್ ತೆರೆಯಲಾಗಿದ್ದು ಪ್ರತಿಯೊಂದು ಚೆಕ್‍ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಅಗತ್ಯ ಮೂಲ ಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ. ಬಾಪೇಲಿ ಕ್ರಾಸ್ ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಶೌಚಾಲಯ ಸ್ನಾನಗೃಹ ಸಮರ್ಪಕ ಕುಡಿಯುವ ನೀರು ಮತ್ತು ಊಟದ ವ್ಯವಸ್ಥೆ ಇಲ್ಲ ಜತೆಗೆ ಕೇವಲ ಮೂರು ಸಿಬ್ಬಂದಿ ಮಾತ್ರ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅನಮೋಡ ಮತ್ತು ರಾಮನಗರದಲ್ಲಿಯೂ ಚೆಕ್‍ಪೋಸ್ಟ್ ಗಳಲ್ಲಿ ಇರುವ ಸಿಬ್ಬಂದಿ ಶೌಚಾಲಯ ಇನ್ನಿತರ ಮೂಲಸೌಕರ್ಯಕ್ಕೆ ಪರದಾಡುತ್ತಿದ್ದಾರೆ. ‘ಸಿಬ್ಬಂದಿ ಸಂಖ್ಯೆ ಕಡಿಮೆ ಇರುವುದರಿಂದ ಭದ್ರತೆ ಭಯ ಕಾಡುತ್ತಿದೆ. ಸಿಬ್ಬಂದಿ ಸಂಖ್ಯೆ ಹೆಚ್ಚಿದ್ದರೆ ಭಯ ಇಲ್ಲದೆ ಕಾರ್ಯ ನಿರ್ವಹಿಸಬಹುದು’ ಎನ್ನುತ್ತಾರೆ ಬಾಪೇಲಿ ಕ್ರಾಸ್ ಚೆಕ್‍ಪೋಸ್ಟ್‌ನಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯೊಬ್ಬರು. ‘ಚೆಕ್‍ಪೋಸ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಬೇಸರವಿದೆ ಸೀಮಿತ ವ್ಯವಸ್ಥೆಯಲ್ಲಿಯೂ ಕಾರ್ಯ ನಿರ್ವಹಿಸಬೇಕಾಗಿದೆ’ ಎಂದು ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಸೆಕೆಯ ಹಿಂಸೆ ನೀಡುವ ಕಂಟೇನರ್

ಮುಂಡಗೋಡ ತಾಲ್ಲೂಕಿನ ಸನವಳ್ಳಿ ಅಗಡಿ ಹಾಗೂ ಬಾಚಣಕಿ ಗ್ರಾಮಗಳ ಸಮೀಪ ಚೆಕ್‌‍ಪೋಸ್ಟ್‌ಗಳನ್ನು ತೆರೆಯಲಾಗಿದೆ. ಅಲ್ಲಿ ಸಿಬ್ಬಂದಿಗೆ ಅನುಕೂಲವಾಗಲೆಂದು ಕ್ಯಾಬಿನ್‌ ಕಂಟೇನರ್‌ಗಳನ್ನು ಅಳವಡಿಸಲಾಗಿದೆ. ಆದರೆ ಬಿರು ಬಿಸಿಲಿನ ಝಳದಿಂದ ಮಧ್ಯಾಹ್ನದ ಸಮಯದಲ್ಲಿ ಕ್ಯಾಬಿನ್‌ ಕಂಟೇನರ್‌ಗಳಲ್ಲಿ ಕುಳಿತುಕೊಳ್ಳಲು ಆಗುವುದಿಲ್ಲ. ಅಷ್ಟೊಂದು ಪ್ರಮಾಣದಲ್ಲಿ ಕಂಟೇನರ್‌ಗಳ ಒಳಗಡೆ ಬಿಸಿ ವಾತಾವರಣ ಇರುತ್ತದೆ ಎಂದು ಸಿಬ್ಬಂದಿ ಹೇಳುತ್ತಾರೆ. ಬಿಸಿಲಿನ ಝಳದಿಂದ ಪಾರಾಗಲು ನೆರಳಿನಡಿ ಟೇಬಲ್‌ ಖುರ್ಚಿ ಹಾಕಿಕೊಂಡು ಸಿಬ್ಬಂದಿ ವಾಹನ ತಪಾಸಣೆ ಕಾರ್ಯ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT