ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಸಕ ಹೆಬ್ಬಾರ ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ: ಸಂಸದ ಕಾಗೇರಿ

Published 19 ಜೂನ್ 2024, 15:46 IST
Last Updated 19 ಜೂನ್ 2024, 15:46 IST
ಅಕ್ಷರ ಗಾತ್ರ

ಮುಂಡಗೋಡ: ‘ಬಿಜೆಪಿಯಿಂದ ಬೇಕಿದ್ದರೆ ಉಚ್ಚಾಟನೆ ಮಾಡಲಿ ಎನ್ನುತ್ತಿರುವ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಅವರು, ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆಯನ್ನು ಎದುರಿಸಲಿ. ಚುನಾವಣೆಗೆ ಬಿಜೆಪಿ ಸಿದ್ಧವಾಗಿದೆ. ಉಚ್ಚಾಟನೆ ಮಾಡಿದರೆ ಶಾಸಕ ಸ್ಥಾನ ಉಳಿಯುತ್ತದೆ ಎಂಬ ಅವರ ತಂತ್ರಗಾರಿಕೆ ಎಲ್ಲರಿಗೂ ಗೊತ್ತಿರುವ ವಿಚಾರ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಇಲ್ಲಿಯ ಪಟ್ಟಣ ಪಂಚಾಯಿತಿಯ ಟೌನ್‌ಹಾಲ್‌ನಲ್ಲಿ ಬುಧವಾರ ನಡೆದ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ‘ಶಾಸಕ ಹೆಬ್ಬಾರ ಬಿಜೆಪಿಯಿಂದ ಆಯ್ಕೆಯಾಗಿದ್ದರೂ, ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ಮಾಡಲಿಲ್ಲ. ಕೋಟ್ಯಂತರ ಜನರು ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗಲಿ ಎಂದು ಬಯಸಿದರೆ, ಇವರು ಮಾತ್ರ ಅದ್ಯಾವ ಕಾರಣಕ್ಕೆ ಕಾಂಗ್ರೆಸ್‌ ಬೆಂಬಲಿಸಲು ನಿರ್ಧರಿಸಿದರು ಎಂಬುದನ್ನು ಜನರಿಗೆ ತಿಳಿಸಲಿ. ಈ ಕ್ಷೇತ್ರದ ಜನರು ಸ್ವಾಭಿಮಾನಿಗಳು, ನಿಮ್ಮ ಒತ್ತಡ, ಆಸೆ ಆಮಿಷಗಳಿಗೆ ಬಲಿಯಾಗುವುದಿಲ್ಲ ಎಂಬುದನ್ನು ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಕ್ಷೇತ್ರದಲ್ಲಿ ಈಗ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದರೇ, ಅವು ಹಿಂದಿನ ಬಿಜೆಪಿ ಸರ್ಕಾರದ ಕಾಮಗಾರಿಗಳು’ ಎಂದು ವಾಗ್ದಾಳಿ ನಡೆಸಿದರು.

‘ಒಂದು ವರ್ಷದ ರಾಜ್ಯ ಕಾಂಗ್ರೆಸ್‌ ಆಡಳಿತ ಜನರಲ್ಲಿ ಭ್ರಮನಿರಸನ ಉಂಟು ಮಾಡಿದೆ. ಅಪರಾಧಿಗಳಿಗೆ ಸುರಕ್ಷಿತ ತಾಣ ಎಂಬ ಭಾವನೆ ಮನೆ ಮಾಡಿದೆ. ರಾಜ್ಯದ ಜನರು ತಲೆ ತಗ್ಗಿಸುವಂತೆ ಕಾಂಗ್ರೆಸ್‌ ಆಡಳಿತ ನಡೆಸಿದ್ದು, ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಹಾಗೂ ಮೈಸೂರು ಕ್ಷೇತ್ರಗಳನ್ನು ಗೆಲ್ಲಲಾಗದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಗೃಹಸಚಿವ ಜಿ. ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಲಿ. ಅವರ ಆಡಳಿತವನ್ನೂ ಒಂದು ಸಲ ನೋಡೋಣ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಎಸ್‌.ಹೆಗಡೆ, ಜಿಲ್ಲಾ ಉಪಾಧ್ಯಕ್ಷರಾದ ಎಲ್‌.ಟಿ.ಪಾಟೀಲ, ಅಶೋಕ ಚಲವಾದಿ, ಮಂಡಲ ಅಧ್ಯಕ್ಷ ಮಂಜುನಾಥ ಪಾಟೀಲ, ಪಿ.ಜಿ. ತಂಗಚ್ಚನ್‌, ಗುರುಪ್ರಸಾದ ಹೆಗಡೆ ಮಾತನಾಡಿದರು. ವಿನಾಯಕ ರಾಯ್ಕರ, ಮುತ್ತು ಸಂಗೂರಮಠ, ಜಯಸುಧಾ ಭೋವಿ, ಬಸವರಾಜ ಓಶೀಮಠ, ಮಹೇಶ ಹೊಸಕೊಪ್ಪ, ಸಿ.ಕೆ.ಅಶೋಕ, ಶ್ರೀಕಾಂತ ಸಾನು, ವಿಠ್ಠಲ ಬಾಳಂಬೀಡ, ಶಿವಾಜಿ ನರಸಾನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT