ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಅವಲೋಕನ: ‘ಬೂತ್’ವಾರು ಮತ ಲೆಕ್ಕ ಆರಂಭಿಸಿದ ಬಿಜೆಪಿ

Published 23 ಮೇ 2024, 6:00 IST
Last Updated 23 ಮೇ 2024, 6:00 IST
ಅಕ್ಷರ ಗಾತ್ರ

ಕಾರವಾರ: ಲೋಕಸಭೆಯ ಚುನಾವಣೆ ಕಾವು ತಹಬದಿಗೆ ಬಂದು ಎರಡು ವಾರ ಕಳೆದ ಬಳಿಕ ಈಗ ಮತ ಎಣಿಕೆಗೆ ದಿನಗಣನೆ ಆರಂಭವಾಗಿದೆ. ಅದಕ್ಕೆ ಮುನ್ನವೇ ಬೂತ್ ಮಟ್ಟದಲ್ಲಿ ಪಡೆದಿರಬಹುದಾದ ಮತಗಳ ಲೆಕ್ಕವನ್ನು ಬಿಜೆಪಿ ಎಣಿಸತೊಡಗಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ‘ಅವಲೋಕನ ಸಭೆ’ ನೆಪದಲ್ಲಿ ಕ್ಷೇತ್ರದ ಪ್ರತಿ ಬೂತ್ ಮಟ್ಟದಲ್ಲಿ ಪಡೆದಿರಬಹುದಾದ ಮತಗಳೆಷ್ಟು ಎಂಬುದನ್ನು ಲೆಕ್ಕ ಹಾಕುವ ಪ್ರಕ್ರಿಯೆಗೆ ಮೂರು ದಿನಗಳ ಹಿಂದೆ ಚಾಲನೆ ಸಿಕ್ಕಿದೆ.

ಮತದಾನ ಮುಗಿದ ಎರಡು ವಾರದ ನಂತರ ಯಲ್ಲಾಪುರದಲ್ಲಿ ಪಕ್ಷದ ಜಿಲ್ಲಾಮಟ್ಟದ ಮುಖಂಡರು, ತಾಲ್ಲೂಕು ಘಟಕದ ಅಧ್ಯಕ್ಷರ ಸಭೆ ನಡೆಸಿ ಅವಲೋಕನದ ಹೆಸರಿನಲ್ಲಿ ಮತಗಳಿಕೆಯ ಲೆಕ್ಕ ಹಾಕಿದ್ದ ಬಿಜೆಪಿ ನಾಯಕರು ಪಕ್ಷದ ಅಭ್ಯರ್ಥಿ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದರು. ಅದಾದ ಬಳಿಕ ಎರಡನೇ ಹಂತದಲ್ಲಿ ಪ್ರತಿ ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಲಾಗುತ್ತಿದೆ.

‘ಕಿತ್ತೂರಿನಲ್ಲಿ ಮೊದಲ ಸಭೆ ನಡೆದಿದ್ದು, ಬಳಿಕ ಖಾನಾಪುರ, ಜೊಯಿಡಾ, ಹಳಿಯಾಳ, ದಾಂಡೇಲಿ ಸೇರಿ ಕೆಲವೆಡೆ ಸಭೆ ಮುಗಿದಿದೆ. ಪ್ರತಿ ಸಭೆಯಲ್ಲಿಯೂ ಆಯಾ ತಾಲ್ಲೂಕು ವ್ಯಾಪ್ತಿಯ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು, ಶಕ್ತಿ ಕೇಂದ್ರ ಪ್ರಮುಖರು ಪಾಲ್ಗೊಳ್ಳಲು ಸೂಚಿಸಲಾಗುತ್ತಿದೆ. ಸಭೆಯಲ್ಲಿ ಪಕ್ಷದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಆಯಾ ಶಕ್ತಿ ಕೇಂದ್ರಗಳ ಅಧ್ಯಕ್ಷರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

‘ಉತ್ತರ ಕನ್ನಡ ಕ್ಷೇತ್ರವು ಬಿಜೆಪಿ ಪಾಲಿಗೆ ಭದ್ರಕೋಟೆ ಎನಿಸಿತ್ತು. ಈ ಬಾರಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಪರಿಣಾಮದಿಂದ ಹಾಗೂ ಪಕ್ಷದ ಅಭ್ಯರ್ಥಿಯನ್ನು ಬದಲಿಸಿದ್ದರಿಂದ ಫಲಿತಾಂಶದ ಬಗ್ಗೆ ಕುತೂಹಲ ಉಂಟಾಗಿದೆ. ಬಿಜೆಪಿಗೆ ಗೆಲುವಿನ ಭರವಸೆ ಇದ್ದರೂ ಚುನಾವಣೆ ವೇಳೆ ಎದುರಾದ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಚರ್ಚಿಸಲು ಅವಲೋಕನ ಸಭೆ ವೇದಿಕೆ ಆಗಿದೆ’ ಎಂದೂ ಹೇಳಿದರು.

ಒಳ ಏಟಿನ ಚರ್ಚೆ?
‘ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಕಾಂಗ್ರೆಸ್‍ನಿಂದ ಪ್ರಬಲ ಪೈಪೋಟಿ ಎದುರಿಸಿದೆ. ಫಲಿತಾಂಶ ಯಾರ ಪರ ಬರಲಿದೆ ಎಂಬುದು ಇನ್ನೂ ನಿಗೂಢವಾಗಿದೆ. ಪಕ್ಷದೊಳಗಿದ್ದರೂ ಹಾಲಿ ಸಂಸದ ಅನಂತಕುಮಾರ ಹೆಗಡೆ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಪ್ರಚಾರ ಕಾರ್ಯದಿಂದ ದೂರ ಇದ್ದರು. ಅವರ ಬಹುತೇಕ ಬೆಂಬಲಿಗರು ಪಕ್ಷದ ಪರ ಪ್ರಚಾರವನ್ನೂ ಕೈಗೊಂಡಿರಲಿಲ್ಲ. ಈ ನಡೆಗಳಿಂದ ಬಿಜೆಪಿಗೆ ಬೀಳುವ ಮತಗಳಲ್ಲಿ ವ್ಯತ್ಯಾಸ ಆಗಿದೆಯೇ ಎಂಬುದನ್ನು ಅವಲೋಕ ಸಭೆಯ ಮೂಲಕ ನಾಯಕರು ಖಾತ್ರಿಪಡಿಸಿಕೊಳ್ಳುತ್ತಿದ್ದಾರೆ’ ಎಂದು ಬಿಜೆಪಿಯ ಜಿಲ್ಲಾ ಘಟಕದ ಪದಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

Cut-off box -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT