ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರೂರು ದುರಂತ | ಮಗನಿಗೆ ಆಟಿಕೆ ಲಾರಿ ಖರೀದಿಸಿದ್ದ ಅರ್ಜುನ್

Published : 27 ಸೆಪ್ಟೆಂಬರ್ 2024, 4:14 IST
Last Updated : 27 ಸೆಪ್ಟೆಂಬರ್ 2024, 4:14 IST
ಫಾಲೋ ಮಾಡಿ
Comments

ಕಾರವಾರ: ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿಗೆ ಬಿದ್ದಿದ್ದ ಕೇರಳ ಲಾರಿ ಮತ್ತು ಅದರ ಚಾಲಕ ಅರ್ಜುನ್ ಶವ ಕಾರ್ಯಾಚರಣೆ ವೇಳೆ ಪತ್ತೆಯಾಗಿದ್ದು, ಇನ್ನಷ್ಟು ವಸ್ತುಗಳು ಸಿಕ್ಕಿವೆ.

ಲಾರಿಯ ಕ್ಯಾಬಿನ್ ಭಾಗದಲ್ಲಿ ಎರಡು ಮೊಬೈಲ್, ಪಾತ್ರೆಗಳು ಮತ್ತು ಆಟಿಕೆ ಲಾರಿ ಸಿಕ್ಕಿದೆ. ಆಟಿಕೆ ಲಾರಿಗೆ ಸ್ವಲ್ಪವೂ ಹಾನಿಯಾಗಿಲ್ಲ. ಅದನ್ನು ಅರ್ಜುನ್ ಸಹೋದರನಿಗೆ ಕೊಡಲಾಗಿದೆ.

‘ಅರ್ಜುನ್ ಸಾವು ಅನಿರೀಕ್ಷಿತ. ಮಗನಿಗಾಗಿ ಆತ ಖರೀದಿಸಿದ ಆಟಿಕೆ ಲಾರಿಯೇ ನಮಗೆ ನೆನಪಿನ ಕಾಣಿಕೆಯಾಗಿದೆ. ಅದನ್ನು ನೋವಿನಿಂದ ಒಯ್ಯುತ್ತಿರುವೆ’ ಎಂದು ಅರ್ಜುನ್ ಸಹೋದರ ಅಭಿಜಿತ್ ತಿಳಿಸಿದರು.

‘ಕಾರ್ಯಾಚಣೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶ್ಲಾಘಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಅವರು ನನ್ನನ್ನೂ ಸೇರಿ ಉತ್ತರ ಕನ್ನಡ ಜಿಲ್ಲಾಡಳಿತದ ಕಾರ್ಯವೈಖರಿ ಮೆಚ್ಚಿದ್ದಾರೆ. ನಿರಂತರವಾಗಿ ಶಿರೂರಿನಲ್ಲಿ ಕಾರ್ಯಾಚರಣೆ ನಡೆಸಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ’ ಎಂದು ಶಾಸಕ ಸತೀಶ ಸೈಲ್ ತಿಳಿಸಿದರು.

ತೆರವಾಗದ ಮಣ್ಣಿನ ರಾಶಿ:

ಒಟ್ಟಾರೆ 10 ದಿನಗಳ ತೆರವು ಕಾರ್ಯಾಚಣೆಯಲ್ಲಿ ಏಳನೇ ದಿನಕ್ಕೆ ಲಾರಿ ಸಿಕ್ಕಿದೆ. ಆದರೆ, ಉಳಿದ ಮೂರು ದಿನಗಳಲ್ಲಿ ಮಣ್ಣಿನ ರಾಶಿ ಸಂಪೂರ್ಣವಾಗಿ ತೆರವು ಆಗುವುದೇ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಕಾಡುತ್ತಿದೆ.

‘ಗಂಗಾವಳಿ ನದಿಯಲ್ಲಿ ಶೇಖರಣೆಯಾದ ಮಣ್ಣಿನ ರಾಶಿ ಮುಂದಿನ ಮೂರು ದಿನಗಳಲ್ಲಿ ತೆರವು ಆಗದಿದ್ದರೆ, ನದಿ ತೀರದ ವಾಸರ ಕುದ್ರಗಿ, ಶಿರಗುಂಜಿ ಸೇರಿ ಕೆಲ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಬಹುದು. ಕೃಷಿಭೂಮಿಗೂ ಹಾನಿಯಾಗಬಹುದು’ ಎಂದು ಕುದ್ರಗಿಯ ನಾಗರಾಜ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ಸೇತುವೆ ತೆರವಿಗೂ ಬಾರ್ಜ್:

‘ಕಾಳಿ ನದಿಯ ಹಳೆಯ ಸೇತುವೆಯ ಅವಶೇಷ ತೆರವಿಗಾಗಿ ಮುಂಬೈನಿಂದ ಕ್ರೇನ್ ಸಹಿತ ಬೃಹತ್ ಗಾತ್ರದ ಬಾರ್ಜ್ ಐದು ದಿನಗಳಲ್ಲಿ ಬರಲಿದೆ. ಅದರ ನಿಲುಗಡೆಗಾಗಿ ಕಾಳಿನದಿಯ ದಡದಲ್ಲಿ 75 ಮೀಟರ್ ಉದ್ದದ ಜಟ್ಟಿ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ’ ಐ.ಆರ್.ಬಿ ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದರು.

ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗಂಗಾವಳಿ ನದಿಯಲ್ಲಿನ ಮಣ್ಣಿನ ದಿಬ್ಬಗಳ ಬಳಿ ಮೀನುಗಾರರು ಸಾಗುತ್ತಿರುವುದು

ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗಂಗಾವಳಿ ನದಿಯಲ್ಲಿನ ಮಣ್ಣಿನ ದಿಬ್ಬಗಳ ಬಳಿ ಮೀನುಗಾರರು ಸಾಗುತ್ತಿರುವುದು

ದುರ್ಘಟನೆಯಲ್ಲಿ ಕಾಣೆಯಾದ ಜಗನ್ನಾಥ ನಾಯ್ಕ ಲೊಕೇಶ ನಾಯ್ಕ ಅವರ ಪತ್ತೆಗೆ ಆದ್ಯತೆ ನೀಡಿದ್ದೇವೆ. ಪತ್ತೆ ಕಾರ್ಯದ ಜತೆಯಲ್ಲೇ ಮಣ್ಣಿನ ದಿಬ್ಬ ತೆರವು ಆಗಲಿದೆ.
ಸತೀಶ ಸೈಲ್ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT