ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ಕಗ್ಗತ್ತಲಲ್ಲಿ ಬಸ್ ನಿಲ್ದಾಣ

ರಸ್ತೆ ಬದಿಯಲ್ಲಿ ನಿಂತು ಬಸ್‍ಗೆ ಕಾಯುವ ಮಹಿಳೆಯರು, ಮಕ್ಕಳು
Published 14 ಮಾರ್ಚ್ 2024, 4:38 IST
Last Updated 14 ಮಾರ್ಚ್ 2024, 4:38 IST
ಅಕ್ಷರ ಗಾತ್ರ

ಮುಂಡಗೋಡ: ಪಟ್ಟಣದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ಸಾರ್ವಜನಿಕರ ಸೇವೆಗೆ ಲಭ್ಯವಾಗಿ ವರ್ಷ ಕಳೆದಿದೆ. ಆದರೆ, ರಾತ್ರಿ ಸಮಯದಲ್ಲಿ ಪ್ರಯಾಣಿಕರು ಬಸ್‌ಗಳಿಗಾಗಿ ರಸ್ತೆ ಮೇಲೆ ನಿಲ್ಲುವಂತ ಪರಿಸ್ಥಿತಿ ಮಾತ್ರ ಬದಲಾಗಿಲ್ಲ.

ಬೆಳಕಿನ ವ್ಯವಸ್ಥೆ ಇಲ್ಲದ ಪರಿಣಾಮ ಸಂಜೆಯಾಗುತ್ತಿದ್ದಂತೆ ಬಸ್‌ ನಿಲ್ದಾಣದ ಆವರಣದಲ್ಲಿ ಕಗ್ಗತ್ತಲು ಆವರಿಸುತ್ತದೆ. ಅನಿವಾರ್ಯವಾಗಿ ಪ್ರಯಾಣಿಕರು ಎದುರಿನ ರಸ್ತೆಗೆ ಹೋಗಿ ನಿಲ್ಲಬೇಕಾಗಿದೆ. ಪ್ರತಿ ದಿನವೂ ರಾತ್ರಿ 9 ಗಂಟೆ ಆಗುತ್ತಲೇ ನಿಲ್ದಾಣದ ಆವರಣದಲ್ಲಿರುವ ದೀಪಗಳನ್ನು ಬಂದ್‌ ಮಾಡಲಾಗುತ್ತದೆ ಎಂಬುದು ಜನರ ದೂರು.

‘ಹುಬ್ಬಳ್ಳಿ, ಶಿರಸಿ, ಮಂಗಳೂರು ಕಡೆ ಹೋಗುವಂತ ಬಸ್‌ಗಳು ರಾತ್ರಿ ಸಮಯದಲ್ಲಿ ನಿಲ್ದಾಣದ ಒಳಗೆ ಬರುವುದಿಲ್ಲ. ನಿಲ್ದಾಣದಲ್ಲಿ ಕತ್ತಲು ಇರುವುದರಿಂದ ರಸ್ತೆ ಮೇಲೆಯೇ ಬಸ್‌ಗಳನ್ನು ನಿಲ್ಲಿಸಿ, ಪ್ರಯಾಣಿಕರನ್ನು ಇಳಿಸಿ, ಹತ್ತಿಸಿಕೊಂಡು ಹೋಗುತ್ತಾರೆ. ಇಂತಹ ಕೆಟ್ಟ ವ್ಯವಸ್ಥೆಯಿಂದ ಮಳೆಗಾಲದಲ್ಲಿಯೂ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ಈಗಲೂ ಅದು ಮುಂದುವರೆದಿದೆ. ಕೋಟಿಗಟ್ಟಲೇ ಖರ್ಚು ಮಾಡಿ ಬಸ್‌ ನಿಲ್ದಾಣ ನಿರ್ಮಿಸಿದರೂ, ರಾತ್ರಿ ಸಮಯದಲ್ಲಿ ಪ್ರಯಾಣಿಕರಿಗೆ ಅನುಕೂಲ ಆಗುತ್ತಿಲ್ಲ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಪ್ರಕಾಶ ಬಡಿಗೇರ.

‘ಮಕ್ಕಳು, ಮಹಿಳೆಯರು, ವೃದ್ಧರು ರಸ್ತೆ ಪಕ್ಕವೇ ನಿಂತುಕೊಂಡು ರಾತ್ರಿ ಸಮಯದಲ್ಲಿ ಬಸ್‌ಗಳಿಗೆ ಕಾಯುತ್ತಿರುವುದನ್ನು ನಿತ್ಯವೂ ಕಾಣಬಹುದು. ಕನಿಷ್ಠ ಪಕ್ಷ ರಸ್ತೆ ಪಕ್ಕವಾದರೂ ಕುಳಿತುಕೊಳ್ಳೋಣ ಎಂದರೆ ಫುಟ್‌ಪಾತ್‌ಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ಅಂಗಡಿಗಳನ್ನು ಹಾಕಿಕೊಂಡಿದ್ದಾರೆ. ಒಂದೇ ಒಂದು ದೀಪವನ್ನು ನಿಲ್ದಾಣದಲ್ಲಿ ರಾತ್ರಿ ಉರಿಸಿದರೂ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಅವರು.

‘ಬಸ್‌ ನಿಲ್ದಾಣದಲ್ಲಿ ರಾತ್ರಿ 10ಗಂಟೆ ಒಳಗಡೆಯೇ ಆವರಣದಲ್ಲಿರುವ ದೀಪಗಳನ್ನು ಆರಿಸಿ ಬಿಡುತ್ತಾರೆ. ಇದರಿಂದ ಮುಂಡಗೋಡ ಮಾರ್ಗದ ಮೂಲಕ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ನಿಲ್ದಾಣದ ಒಳಗಡೆ ಹೋಗುವುದಿಲ್ಲ. ರಸ್ತೆ ಮೇಲೆಯೇ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿವೆ. ಎಷ್ಟೋ ಸಲ ಬಸ್‌ ಬಂದಾಗ ಮಕ್ಕಳು, ಮಹಿಳೆಯರು ನಿಲ್ದಾಣದಿಂದ ಓಡೋಡಿ ಬರುತ್ತಾರೆ. ನಿಲ್ದಾಣದ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸಲು ತಿಳಿಸಿದರೂ ಪ್ರಯೋಜನವಾಗಿಲ್ಲ’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಫಣಿರಾಜ ಹದಳಗಿ ಆರೋಪಿಸಿದರು.

ರಾತ್ರಿ ಸಮಯದಲ್ಲಿ ಪ್ರಯಾಣಿಕರು ಅಷ್ಟಾಗಿ ಇರುವುದಿಲ್ಲ. ಆದರೂ ನಿಲ್ದಾಣದ ವಿದ್ಯುದ್ದೀಪ ಆರಿಸದಂತೆ ನಿಲ್ದಾಣಾಧಿಕಾರಿಗೆ ಸೂಚಿಸಲಾಗುವುದು

-ಸಂತೋಷ ವೆರ್ಣೇಕರ ವ್ಯವಸ್ಥಾಪಕ ಯಲ್ಲಾಪುರ ಸಾರಿಗೆ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT