ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಯಿಡಾ ಜನರ ಕಂಗೆಡಿಸಿದ ಹೆದ್ದಾರಿ ದುಸ್ಥಿತಿ

ಜ್ಞಾನೇಶ್ವರ ದೇಸಾಯಿ
Published 6 ಏಪ್ರಿಲ್ 2024, 6:05 IST
Last Updated 6 ಏಪ್ರಿಲ್ 2024, 6:05 IST
ಅಕ್ಷರ ಗಾತ್ರ

ಜೊಯಿಡಾ: ತಾಲ್ಲೂಕಿನ ಜನರಿಗೆ ಜಿಲ್ಲಾ ಕೇಂದ್ರ ಕಾರವಾರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಾಗಿರುವ ಜತೆಗೆ, ಕಾರವಾರದಿಂದ ಬೆಳಗಾವಿ, ದಾಂಡೇಲಿ, ಧಾರವಾಡಕ್ಕೆ ಪ್ರತಿ ದಿನವೂ ನೂರಾರು ವಾಹನಗಳು ಸಂಚರಿಸುವ ಸದಾಶಿವಗಡ–ಔರಾದ್ ರಾಜ್ಯ ಹೆದ್ದಾರಿ–34ರ ದುಸ್ಥಿತಿಯಿಂದ ಜನರು ಪರದಾಡುವಂತಾಗಿದೆ.

ರಾಜ್ಯ ಹೆದ್ದಾರಿ ತಾಲ್ಲೂಕಿನ ಗುಂಡಾಳಿಯಿಂದ ಜೊಯಿಡಾ ತಾಲ್ಲೂಕು ಗಡಿ ಬರಪಾಲಿಯವರೆಗೆ ಸುಮಾರು 14 ಕಿಲೋ ಮೀಟರ್ ಸಂಪೂರ್ಣ ಹಾಳಾಗಿದ್ದು ರಸ್ತೆಯುದ್ದಕ್ಕೂ ಗುಂಡಿಗಳೇ ತುಂಬಿಕೊಂಡಿವೆ. ಕಿರವತ್ತಿ, ದೋಣಪಾದಲ್ಲಿಯೂ ರಾಜ್ಯ ಹೆದ್ದಾರಿ ಹೊಂಡಗಳಿಂದ ತುಂಬಿದ್ದು ಸಾರ್ವಜನಿಕರು ರಸ್ತೆ ಅಭಿವೃದ್ಧಿ ಪಡಿಸುವಂತೆ ಆಗ್ರಹಿಸುತ್ತಿದ್ದಾರೆ.

ಗುಂಡಾಳಿಯಿಂದ ಬರಪಾಲಿ ಯವರೆಗೆ ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ಮಾಸೇತ, ನುಜ್ಜಿ, ನಿಗುಂಡಿ ಮತ್ತು ಬಾಡಪೋಲಿ ಗ್ರಾಮದ ಜನರು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸುವ ಕುಮಟಾ-ಕೊಲ್ಹಾಪುರ, ಉಡುಪಿ-ಬೆಳಗಾವಿ, ಕಾರವಾರ–ಪಿಂಪ್ರಿ ಮುಂತಾದ ಬಸ್‍ಗಳು ರಸ್ತೆ ಸಮಸ್ಯೆಯ ಕಾರಣ ನೀಡಿ ಸದ್ಯ ನಿಲುಗಡೆಯಾಗುತ್ತಿಲ್ಲ ಎಂಬುದು ಜನರ ದೂರು.

‘ರಾಜ್ಯ ಹೆದ್ದಾರಿಯ ದುಸ್ಥಿತಿಯ ಕಾರಣಕ್ಕೆ ತಾಲ್ಲೂಕಿನ ಹಲವು ಹಳ್ಳಿಗಳಿಗೆ ಬಾಡಿಗೆ ವಾಹನಗಳು ಬರಲು ಒಪ್ಪುತ್ತಿಲ್ಲ. ಆರೋಗ್ಯ ಹಾಗೂ ಇನ್ನಿತರ ಸಂದರ್ಭದಲ್ಲಿ ಬಾಡಿಗೆಗೆ ವಾಹನಗಳನ್ನು ಕರೆಯಿಸಲು ತೊಂದರೆ ಪಡಬೇಕಾಗುತ್ತಿದೆ. ಹೆದ್ದಾರಿ ಸಂಪೂರ್ಣ ಧೂಳುಮಯವಾಗಿದ್ದರಿಂದ ದ್ವಿಚಕ್ರ ವಾಹನ ಸವಾರರು ಸಂಚರಿಸಲು ಕಷ್ಟಪಡಬೇಕಾಗಿದೆ’ ಎನ್ನುತ್ತಾರೆ ನುಜ್ಜಿಯ ವಿಷ್ಣು ದೇಸಾಯಿ.

‘ಹದಿನೈದು ವರ್ಷಗಳ ಹಿಂದೆಯೂ ರಸ್ತೆ ದುಸ್ಥಿತಿಯಿಂದ ಅಣಶಿ, ಕುಂಬಾರವಾಡಾ ಭಾಗಕ್ಕೆ ವಾಹನಗಳ ಸಂಚಾರ ಇಲ್ಲದಂತಾಗಿತ್ತು. ಮಳೆಗಾಲ ಪೂರ್ವದಲ್ಲಿ ರಸ್ತೆ ಅಭಿವೃದ್ಧಿ ಪಡಿಸದಿದ್ದರೆ ಹದಿನೈದು ವರ್ಷಗಳ ಹಿಂದಿನ ಕರಾಳ ದಿನಗಳು ಮತ್ತೆ ಮರುಕಳಿಸಬಹುದು’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಅಣಶಿಯ ಅಲ್ಕೇಶ ದೇಸಾಯಿ ಮತ್ತು ಆನಂದು ವೇಳಿಪ.

‘ಬಸ್‍ಗಳು ಅತಿ ವೇಗವಾಗಿ ಈ ರಸ್ತೆಯಲ್ಲಿ ಸಂಚರಿಸುವುದರಿಂದ ಹಿಂಬದಿಯ ಸೀಟಿನಲ್ಲಿ ಕುಳಿತು ಪ್ರಯಾಣಿಸುವುದು ಕಷ್ಟವಾಗುತ್ತಿದೆ. ಮೊದಲಿನ ಹಾಗೆ ಖಾಸಗಿ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುವುದಿಲ್ಲ. ಕೆಲವು ಬಸ್‍ಗಳು ಹಳ್ಳಿಗಳಲ್ಲಿ ನಿಲುಗಡೆಯಾಗದು. ವಿಚಾರಿಸಿದರೆ ರಸ್ತೆ ಸರಿ ಇಲ್ಲ ಎನ್ನುತ್ತಾರೆ’ ಎಂಬುದು ಪ್ರೇಮಾ ವೇಳಿಪ ಮತ್ತು ಭಾರಾಡಿಯ ಗೌರಿ ವೇಳಿಪ ಅವರ ದೂರು.

ಸದಾಶಿವಗಡ–ಔರಾದ್ ರಾಜ್ಯ ಹೆದ್ದಾರಿ ಅಭಿವೃದ್ದಿಗೆ ₹3 ಕೋಟಿ ಅನುದಾನ ಬಂದಿದ್ದು ಸುಮಾರು 3 ಕಿ.ಮೀ ರಸ್ತೆ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹೆಚ್ಚಿನ ರಸ್ತೆ ಅಭಿವೃದ್ಧಿಗೆ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
-ಶಿವಪ್ರಕಾಶ ಶೇಟ್, ಪಿಡಬ್ಲ್ಯೂಡಿ ಎಇಇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT