ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಜಲಮೂಲದ ಕೃಷಿ ಚಟುವಟಿಕೆಗೆ ನೀರಿನ ಕೊರತೆ: ರೈತರ ಆತಂಕ

Published 16 ಜನವರಿ 2024, 6:49 IST
Last Updated 16 ಜನವರಿ 2024, 6:49 IST
ಅಕ್ಷರ ಗಾತ್ರ

ಶಿರಸಿ: ನಗರಕ್ಕೆ ಕುಡಿಯುವ ನೀರು ಪೂರೈಸುವ ಜಲಮೂಲದಲ್ಲಿ ನೀರ ಕೊರತೆ ಉಂಟಾಗಿದ್ದು, ಮುಂಬರುವ ಬೇಸಿಗೆಗೆ ನೀರು ಕಾಯ್ದಿಟ್ಟುಕೊಳ್ಳಲು ನಗರಾಡಳಿತ ಒಡ್ಡು ಎತ್ತರಿಸುವ ಕಾರ್ಯ ಕೈಗೊಂಡಿದೆ. ಇದರಿಂದ ಜಲಮೂಲದ ಕೃಷಿ ಚಟುವಟಿಕೆಗೆ ನೀರ ಕೊರತೆ ಎದುರಾಗುವ ಸಾಧ್ಯತೆ ಇದ್ದು, ಇದನ್ನು ನಂಬಿದ ರೈತರು ಕಂಗಾಲಾಗಿದ್ದಾರೆ.

ನಗರದಲ್ಲಿ ಸುಮಾರು 10 ಸಾವಿರ ಮನೆಗಳಿಗೆ ನಳ ಸಂಪರ್ಕವಿದೆ. ಅಂದಾಜು 80 ಸಾವಿರ ಜನರಿಗೆ ನಿತ್ಯ ನೀರು ಪೂರೈಸಬೇಕಿದೆ. 10 ಲಕ್ಷ ಲೀಟರ್‌ಗಿಂತ ಹೆಚ್ಚು ನಿತ್ಯದ ಬಳಕೆಗೆ ಬಳಸಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಜಲಮೂಲವಾದ ಕೆಂಗ್ರೆ ಮತ್ತು ಮಾರಿಗದ್ದೆಯಲ್ಲಿ ಕೊರತೆ ಎದುರಾಗಿದೆ. ಮುಂಬರುವ ಮಾರಿಕಾಂಬಾ ಜಾತ್ರೆಗೆ ಲಕ್ಷಾಂತರ ಭಕ್ತರು ಬರುವ ಕಾರಣ ಸಮರ್ಪಕ ನೀರು ಪೂರೈಕೆ ಸವಾಲಾಗಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ನಿರ್ಮಿಸಿರುವ ಒಡ್ಡುಗಳ ಮೇಲೆ ಹೆಚ್ಚುವರಿಯಾಗಿ ಒಡ್ಡು ನಿರ್ಮಿಸಲಾಗಿದೆ. ಆ ಮೂಲಕ ನೀರು ಸಂಗ್ರಹಣೆಗೆ ತಿಂಗಳ ಮೊದಲೇ ಕ್ರಮವಹಿಸಿದೆ.

ನಿತ್ಯ ನೀರು ಪೂರೈಕೆಗೆ ಸಹಾಯ:

'ಈವರೆಗೆ 5 ಅಡಿ ನೀರು ನಿಲ್ಲಿಸಲು ತಾತ್ಕಾಲಿಕ ಒಡ್ಡು ನಿರ್ಮಿಸಲಾಗಿತ್ತು. ನಡುವೆ ಮಳೆಯಾದ ಕಾರಣ ಹೆಚ್ಚುವರಿ ನೀರು ಹೊರ ಹರಿದಿದೆ. ಈಗಿರುವ ನೀರಿನ ಸಂಗ್ರಹದಿಂದ ಮಾರ್ಚ್ ಎರಡು ಅಥವಾ ಮೂರನೇ ವಾರದವರೆಗೆ ಕೊಡಲು ಸಾಧ್ಯವಾಗುತ್ತಿತ್ತು. ನಂತರದಲ್ಲಿ ವಾರಕ್ಕೊಮ್ಮೆ ನೀರು ಬಿಡುವ ಸನ್ನಿವೇಶ ಎದುರಾಗುವ ಸಾಧ್ಯತೆಯಿತ್ತು. ಇದನ್ನು ಮನಗಂಡು ಕೆಂಗ್ರೆ ಹಾಗೂ ಮಾರಿಗದ್ದೆ ಜಾಕ್ ವೆಲ್ ಬಳಿಯ ಒಡ್ಡನ್ನು ಐದು ಅಡಿ ಎತ್ತರಿಸಲಾಗಿದೆ. ಹೀಗಾಗಿ ಹೆಚ್ಚುವರಿ ನೀರು ಸಂಗ್ರಹವಾಗಿದ್ದು, ಏಪ್ರಿಲ್‌ವರೆಗೂ ಯಾವುದೇ ಸಮಸ್ಯೆ ಇಲ್ಲದೆ ನಿತ್ಯ ನೀರು ವಿತರಿಸಬಹುದಾಗಿದೆ' ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಕೃಷಿಕರಿಗೆ ನೀರ ಕೊರತೆ:

'ಇಷ್ಟು ವರ್ಷ ಕೇವಲ ಐದು ಅಡಿ ತಾತ್ಕಾಲಿಕ ಒಡ್ಡು ನಿರ್ಮಿಸುತ್ತಿದ್ದವರು ಏಕಾಏಕಿ ಹೆಚ್ಚುವರಿ ಐದು ಅಡಿ ಒಡ್ಡು ನಿರ್ಮಿಸಿದ್ದಾರೆ. ಮೊದಲೇ ಬರಗಾಲದಿಂದ ಕೃಷಿ ಚಟುವಟಿಕೆಗೆ ನೀರಿಲ್ಲದ ಸ್ಥಿತಿಯಿದ್ದು, ಒಡ್ಡು ನಿರ್ಮಾಣದಿಂದ ಹೊಳೆಯ ಕೆಳ ಭಾಗದಲ್ಲಿ ನೀರು ಹರಿವು ತೀರಾ ಇಳಿಕೆಯಾಗಿದೆ. ಗ್ರಾಮೀಣ ಭಾಗದಿಂದ ನೀರು ಕೊಂಡೊಯ್ಯುವ ನಗರಾಡಳಿತದವರು ಜಲಮೂಲ ಅಭಿವೃದ್ಧಿಗೆ ಅನುದಾನ ಮೀಸಲಿಡುವ ಜತೆ ವಿವಿಧ ಕಾರ್ಯಚಟುವಟಿಕೆ ಹಮ್ಮಿಕೊಳ್ಳುವ ಅಗತ್ಯವಿದೆ' ಎನ್ನುತ್ತಾರೆ ಕೆಂಗ್ರೆ ತಟದ ಕೃಷಿಕ ಸೀತಾರಾಮ ಹೆಗಡೆ.

ಅಂತರ್ಜಲ ವೃದ್ಧಿಗೆ ಕ್ರಮವಹಿಸುವಂತೆ ಮನವಿ ಮಾಡಲಾಗುತ್ತಿದೆ. ಆದರೆ ನಗರಾಡಳಿತ ಕಿಂಚಿತ್ ಆಸಕ್ತಿ ತೋರುತ್ತಿಲ್ಲ. ಇದೇ ರೀತಿಯಾದರೆ ಪ್ರತಿಭಟನೆ ಅನಿವಾರ್ಯ
ಉಮೇಶ ಗೌಡ ಕೆಶಿನ್ಮನೆ ಕೆಂಗ್ರೆ ತಟದ ನಿವಾಸಿ
ಬೇಸಿಗೆಯ ತಿಂಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಪೂರಕವಾಗಿ ನೀರು ಸಂಗ್ರಹಿಸಲು ಒಡ್ಡು ನಿರ್ಮಿಸಲಾಗಿದೆ. ಸಣ್ಣ ಪ್ರಮಾಣದಲ್ಲಿ ಹೊಳೆಯ ಕೆಳ ಭಾಗದಲ್ಲಿ ನೀರು ಹರಿಯುವುದರಿಂದ ಸಮಸ್ಯೆಯಿಲ್ಲ
ಕಾಂತರಾಜ್ ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT