ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣದ ಮೇಲೆ ರಾಜಕೀಯ ಬಿಜೆಪಿಯ ಹಳೆ ಚಾಳಿ: ಭೀಮಣ್ಣ

Published 23 ಏಪ್ರಿಲ್ 2024, 13:04 IST
Last Updated 23 ಏಪ್ರಿಲ್ 2024, 13:04 IST
ಅಕ್ಷರ ಗಾತ್ರ

ಶಿರಸಿ: ‘ಅಮಾಯಕರ ಹೆಣದ ಮೇಲೆ ರಾಜಕೀಯ ಮಾಡುವುದು ಬಿಜೆಪಿಯ ಹಳೆಯ ಚಾಳಿಯಾಗಿದೆ’ ಎಂದು ಶಾಸಕ ಭೀಮಣ್ಣ ನಾಯ್ಕ ಟೀಕಿಸಿದರು.

ನಗರದಲ್ಲಿ ಮಂಗಳವಾರ ಕಾಂಗ್ರೆಸ್ ಲೋಕಸಭಾ ಚುನಾವಣಾ ಪ್ರಣಾಳಿಕೆ ಹಾಗೂ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿ ಅವರು ಮಾತನಾಡಿದರು. ‌

‘ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಯುವಕ ಪರೇಶ ಮೇಸ್ತ ಸಾವನ್ನು ಬಳಸಿಕೊಂಡು ವಿಧಾನಸಭೆ ಚುನಾವಣೆ ಎದುರಿಸಿದ್ದ ಬಿಜೆಪಿಯು ಸಾವಿನಲ್ಲೂ ರಾಜಕಾರಣದ ಬೇಳೆ ಬೇಯಿಸಿಕೊಂಡಿತ್ತು. ಮೇಸ್ತ ಸಾವಿನ ಪ್ರಕರಣಕ್ಕೂ ಕಾಂಗ್ರೆಸ್‍ಗೂ ಯಾವುದೇ ಸಂಬಂಧ ಇರದಿದ್ದರೂ ಮೇಸ್ತನನ್ನು ಕಾಂಗ್ರೆಸ್‍ನವರೇ ಕೊಂದ ರೀತಿಯಲ್ಲಿ ಬಿಂಬಿಸಿ ಚುನಾವಣೆ ಗೆದ್ದಿದ್ದರು. ನಂತರದಲ್ಲಿ ಸಿಬಿಐ ವರದಿ ಬಂದ ಮೇಲೆ ಆ ವಿಷಯವನ್ನೇ ಪ್ರಸ್ತಾಪಿಸುತ್ತಿಲ್ಲ. ಧರ್ಮ, ಜಾತಿಯ ಮೇಲೆ ರಾಜಕೀಯ ಮಾಡುವ ಜಾಯಮಾನ ಕಾಂಗ್ರೆಸ್ ಗೆ ಬಂದಿಲ್ಲ ಎಂಬುದನ್ನು ಬಿಜೆಪಿಗರು ಅರಿತುಕೊಳ್ಳಬೇಕು‘ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಡವರ ಕಲ್ಯಾಣ ಆಗಿದೆ. ಹಿಂದುಳಿದ, ದೀನದಲಿತರಿಗೆ ಬದುಕು ಸಹನೀಯವಾಗಿದೆ. ಗ್ಯಾರಂಟಿ ಯೋಜನೆ ಮೂಲಕ ಕಾಂಗ್ರೆಸ್ ಸರ್ಕಾರ ಜನಹಿತ ಕಾಯುತ್ತಿದೆ. ಆದರೆ ಈ ಗ್ಯಾರಂಟಿಯ ಬಗ್ಗೆ ಬಿಜೆಪಿಗರು ಅಸಮಾಧಾನ ಹೊರ ಹಾಕುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಯನ್ನು ನಕಲು ಮಾಡುವ ಕಾರ್ಯ ಮಾಡುತ್ತಿದೆ. ಇದು ಬಿಜೆಪಿಗೆ ಅವಮಾನದ ಸಂಗತಿಯಲ್ಲವೇ?‘ ಎಂದರು. 

‘ಅಭಿವೃದ್ಧಿ ಆಧಾರದ ಮೇಲೆ ಕಣದಲ್ಲಿರುವ ಡಾ.ಅಂಜಲಿ ನಿಂಬಾಳ್ಕರ್ ಗೆಲುವು ಈ ಬಾರಿ ನಿಶ್ಚಿತ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಗಲು, ರಾತ್ರಿ ಕೆಲಸ ಮಾಡಬೇಕು’ ಎಂದು ಕರೆ ನೀಡಿದರು.

ಶಿರಸಿ ಬ್ಲಾಕ್ ಅಧ್ಯಕ್ಷ ಜಗದೀಶ ಗೌಡ, ಪ್ರಮುಖರಾದ ವಸಂತ ನಾಯ್ಕ, ಅಬ್ಬಾಸ ತೋನ್ಸೆ, ಸತೀಶ ನಾಯ್ಕ, ಸಂತೋಷ ಶೆಟ್ಟಿ, ಗೀತಾ ಶೆಟ್ಟಿ, ರಮೇಶ ದುಭಾಶಿ, ಜ್ಯೋತಿ ಪಾಟೀಲ, ಸುಮಾ ಉಗ್ರಾಣಕರ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT