ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ನಿರ್ವಹಣೆ ಕಾಣದ ಹೆಸ್ಕಾಂ ಗ್ರಾಮೀಣ ತಂತಿ ಮಾರ್ಗ

ಸಮರ್ಪಕ ವಿದ್ಯುತ್ ಪೂರೈಕೆಯೇ ಸವಾಲು
Published 1 ಜೂನ್ 2024, 5:53 IST
Last Updated 1 ಜೂನ್ 2024, 5:53 IST
ಅಕ್ಷರ ಗಾತ್ರ

ಶಿರಸಿ: ಹೆಸ್ಕಾಂ ಶಿರಸಿ ಉಪವಿಭಾಗ ವ್ಯಾಪ್ತಿಯ ಮುಖ್ಯ ತಂತಿ ಮಾರ್ಗಗಳ ಹೊರತಾಗಿ ಒಳ ಮಾರ್ಗಗಳು ಬಹುತೇಕ ನಿರ್ವಹಣೆ ಕೊರತೆಯಿಂದ ಬಳಲುತ್ತಿವೆ. ಇದರ ಪರಿಣಾಮ ಗ್ರಾಮೀಣ ಭಾಗಕ್ಕೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎಂಬ ದೂರು ವ್ಯಾಪಕವಾಗಿದೆ. 

ಶಿರಸಿ ಉಪವಿಭಾಗ ವ್ಯಾಪ್ತಿಯಲ್ಲಿ ಐದು ಸೆಕ್ಷನ್‍ಗಳಿದ್ದು, 23 ಫೀಡರ್‌ಗಳಿವೆ. ಅಂದಾಜು 2,760 ಕಿ.ಮೀ. ಎಲ್‍ಟಿ ಲೈನ್ ಹಾಗೂ 8,800 ಕಿ.ಮೀ. ಎಚ್‍ಟಿ ಲೈನ್ ಮಾರ್ಗವಿದೆ. ಬಹುತೇಕ ಮಾರ್ಗ ಗ್ರಾಮೀಣ ಹಾಗೂ ಅರಣ್ಯ ಪ್ರದೇಶದಲ್ಲಿಯೇ ಇದ್ದು, ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಜಂಗಲ್ ಕಟಿಂಗ್ ಕಾರ್ಯ ಅನಿವಾರ್ಯವಾಗಿದೆ. ಆದರೆ, ಈ ಕಾರ್ಯ ಮಳೆಗಾಲ ಪೂರ್ವದಲ್ಲಿ ವ್ಯವಸ್ಥಿತವಾಗಿ ನಡೆಯದಿರುವುದು ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಸವಾಲೊಡ್ಡುತ್ತಿದೆ.

‘ಜಂಗಲ್ ಕಟಿಂಗ್ ಕಾರ್ಯಕ್ಕೆ ತಿಂಗಳಿಗೆ ₹ 1.25- ₹ 1.50 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಕಾಮಗಾರಿಯನ್ನು ಖಾಸಗಿ ಗುತ್ತಿಗೆದಾರರಿಗೆ ವಹಿಸಲಾಗಿದ್ದು, 1 ವಾಹನದ ಜತೆ 10 ಜನರ ತಂಡ ತಂತಿ ಮಾರ್ಗಕ್ಕೆ ಅಡೆತಡೆಯೊಡ್ಡುವ ಗಿಡಮರಗಳ ಕಟಿಂಗ್ ಕಾರ್ಯ ಮಾಡುತ್ತದೆ. ನಿಯಮದ ಪ್ರಕಾರ ಪ್ರತಿ ಸೆಕ್ಷನ್‌‍ನಲ್ಲಿ 6 ದಿನ ಕೆಲಸ ಕಡ್ಡಾಯ. 1 ಫೀಡರ್‌ ವ್ಯಾಪ್ತಿಯಲ್ಲಿ ಕಾರ್ಯ ಪೂರ್ಣ ಮಾಡಲು ಒಂದು ವಾರ ಬೇಕು. ಎಲ್ಲ ಫೀಡರ್‌ಗಳಲ್ಲಿ ಕೆಲಸ ಮಾಡಲು ಕನಿಷ್ಠ 140 ದಿನ ಬೇಕು. 2,300 ಟ್ರಾನ್ಸ್‌ಫಾರ್ಮ‌ರ್ ವ್ಯಾಪ್ತಿಯ ಪ್ರತ್ಯೇಕ ಕಾರ್ಯಕ್ಕೆ ತಲಾ ಒಂದಕ್ಕೆ 10 ಜನರಿಗೆ ಒಂದು ದಿನ ಬೇಕು’ ಎಂಬುದು ಹೆಸ್ಕಾಂ ಅಧಿಕಾರಿಯೊಬ್ಬರ ಮಾಹಿತಿಯಾಗಿದೆ. 

‘ಕಾಮಗಾರಿಯ ಈ ನಿಯಮಗಳೆಲ್ಲ ದಾಖಲೆಗಳಿಗಷ್ಟೇ ಸೀಮಿತವಾಗಿದ್ದು, ವಾಸ್ತವದಲ್ಲಿ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಗ್ರಾಮೀಣ ಪ್ರದೇಶದ ವಿದ್ಯುತ್ ಕಂಬಗಳಿಗೆ ಕಾಡುಬಳ್ಳಿಗಳು ಹಬ್ಬಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಕೆಲವೊಮ್ಮ ಆದರೂ ವೋಲ್ಟೇಜ್ ಸಮಸ್ಯೆ ಕಾಡುತ್ತದೆ’ ಎಂಬುದು ಕೊಪ್ಪ ಗ್ರಾಮದ ವೆಂಕಟ್ರಮಣ ಹೆಗಡೆ ಅವರ ಆರೋಪ.

‘ಗ್ರಾಮೀಣ ಭಾಗದಲ್ಲಿ ವಿದ್ಯುತ್ ತಂತಿಗೆ ಧಕ್ಕೆಯಾದರೆ ಎರಡು ಮೂರು ದಿನ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗುತ್ತದೆ. ಎಲ್ಲಿ ಸಮಸ್ಯೆಯಾಗಿದೆ ಎಂಬುದನ್ನು ಹುಡುಕುವುದರಲ್ಲೇ ದಿನಗಳು ಕಳೆಯುತ್ತವೆ. ಹೀಗಾಗಿ ಜಂಗಲ್ ಕಟಿಂಗ್ ಕಾರ್ಯ ಮಾಡುವಾಗಲೇ ವ್ಯವಸ್ಥಿತವಾಗಿ ಮಾಡಬೇಕು. ಇಲ್ಲವಾದರೆ ನಿರಂತರ ವಿದ್ಯುತ್ ಪೂರೈಕೆ ಕನಸಿನ ಮಾತು’ ಎಂಬುದು ಗ್ರಾಮೀಣ ಭಾಗದ ಜನರ ಅಭಿಪ್ರಾಯ.

ಬಳ್ಳಿಗಳು ಬೆಳೆದು ವಿದ್ಯುತ್‌ ಕಂಬಗಳಿಗೆ ಸುತ್ತಿಕೊಂಡಿವೆ. ಲೈನ್ ಮೇಲೆ ಮರಗಳ ಟೊಂಗೆಗಳು ಅಡ್ಡವಾಗಿವೆ. ಇದರಿಂದ ಗ್ರಾಮೀಣ ಭಾಗಕ್ಕೆ ಸರಿಯಾಗಿ ವಿದ್ಯುತ್‌ ಪೂರೈಕೆಯಾಗುತ್ತಿಲ್ಲ.

–ಶ್ರೀಕಾಂತ ನಾಯ್ಕ ನೀರ್ನಳ್ಳಿ ಹೆಸ್ಕಾಂ ಗ್ರಾಹಕ

ಈಗಾಗಲೇ ಜಂಗಲ್ ಕಟಿಂಗ್ ಕಾರ್ಯವನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ. ಮಳೆಗಾಲಪೂರ್ವ ನಿರ್ವಹಣೆ ಕಾರ್ಯ ಆಗುವ ಸಾಧ್ಯತೆಯಿದೆ.

–ಮಂಜಪ್ಪ ಹೆಸ್ಕಾಂ ಇಇ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT