ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜುಗುಣಿ ರಥೋತ್ಸವ ಸಂಭ್ರಮ

Published 23 ಏಪ್ರಿಲ್ 2024, 13:05 IST
Last Updated 23 ಏಪ್ರಿಲ್ 2024, 13:05 IST
ಅಕ್ಷರ ಗಾತ್ರ

ಶಿರಸಿ: ಕರ್ನಾಟಕದ ತಿರುಪತಿ ಖ್ಯಾತಿಯ ತಾಲ್ಲೂಕಿನ ಮಂಜುಗುಣಿ ವೆಂಕಟರಮಣ ದೇವರ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.

ರಥೋತ್ಸವದ ಅಂಗವಾಗಿ ಪದ್ಮಾವತಿ ಹಾಗೂ ಲಕ್ಷ್ಮಿ ದೇವರ ಸಮೇತ ವೆಂಕಟರಮಣ ದೇವರ ಉತ್ಸವ ಮೂರ್ತಿಗಳನ್ನು ಮುಂಜಾನೆ ಬ್ರಹ್ಮರಥದ ಬೆಳ್ಳಿಮಂಟಪದಲ್ಲಿ ಧಾರ್ಮಿಕ ಕೈಂಕರ್ಯಗಳೊಂದಿಗೆ ಸ್ಥಾಪಿಸಲಾಯಿತು. ನಂತರ  ಮಹಾಮಂಗಳರಾತಿ ಮಾಡಿ, ರಥದ ಗಾಲಿಗಳಿಗೆ ಕಾಯಿಗಳನ್ನು ಒಡೆದು ಹಣ್ಣು ಕಾಯಿ ಸಮರ್ಪಣೆ ಹಾಗೂ ದರ್ಶನಕ್ಕೆ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ಅವಕಾಶ ಮಾಡಿಕೊಟ್ಟರು.

ಬ್ರಹ್ಮರಥದಲ್ಲಿ ವಿರಾಜಮಾನರಾಗಿ ಕುಳಿತ ಸರ್ವಾಲಂಕೃತ ಉತ್ಸವ ಮೂರ್ತಿಗಳ ದರ್ಶನ ಪಡೆದ ಅಪಾರ ಭಕ್ತರು ಭಕ್ತಿ ಸಾಗರದಲ್ಲಿ ಮಿಂದು ಪುಳಕಿತರಾದರು. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ವೆಂಕಟರಮಣ ದೇವರಿಗೆ ಹಣ್ಣುಕಾಯಿ ಸೇವೆ ಅರ್ಪಿಸಿದರು. ಬೆಳಿಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನರು ಸರದಿಯಲ್ಲಿ ನಿಂತು ದೇವರಿಗೆ ಹಣ್ಣುಕಾಯಿ, ವಿವಿಧ ಸೇವೆ ಅರ್ಪಿಸಿದರು.

ನೆತ್ತಿ ಸುಡುವ ಬಿಸಿಲಿನಲ್ಲೂ ಭಕ್ತರ ಸಾಲು ಒಂದು ಕಿ.ಮೀ.ವರೆಗೆ ತಲುಪಿತ್ತು. ಹರಕೆ ತೀರಿಸಲೆಂದು ದೂರದ ಊರುಗಳಿಂದ ನಸುಕಿನಲ್ಲೆ ಆಗಮಿಸಿದ ಭಕ್ತಾಧಿಗಳು ವೆಂಕಟೇಶ್ವನಿಗೆ ಬಹು ಪ್ರೀತಿಯ ಕಡಲೆ ಕಾಳುಗಳನ್ನು ಸಮರ್ಪಿಸಿ ಧನ್ಯತೆ ಭಾವ ಮೆರೆದರು. ಇನ್ನೂ ಹಲವರು ಹರಕೆ ಹೇಳಿಕೊಂಡಂತೆ ಬೆಳ್ಳಿ ಹಾಗೂ ಚಿನ್ನದ ಕಡಲೆಗಳನ್ನು ದೇವರಿಗೆ ಸಮರ್ಪಿಸಿದರು.

ಬ್ರಹ್ಮರಥದ ಗಾಲಿಯ ಬಳಿ ಕುಡಿಬಾಳೆಯಲ್ಲಿ ಅಕ್ಕಿಯನ್ನು ಹರಡಿ ಶಿಶುಗಳನ್ನು ಮಲಗಿಸಿ ದೇವರಲ್ಲಿ ಮಗುವಿಗೆ ಒಳ್ಳೆಯದಾಗಲೆಂದು ಹತ್ತಾರು ಪಾಲಕರು ಬೇಡಿಕೊಂಡಿದ್ದು ವಿಶೇಷವಾಗಿತ್ತು. ಅಡಿಕೆ ಬೆಳೆಗಾರರು ಹರಕೆಯಾಗಿ ಅಡಿಕೆ, ಕಾಳುಮೆಣಸು, ಯಾಲಕ್ಕಿ, ಬಶಳೆಗ ಅರ್ಪಿಸಿ ಕೃತಾರ್ಥರಾದರು.

ಮಂಜುಗುಣಿಯ ರಥ ಅತಿದೊಡ್ಡ ತಿರುಗುಣಿ ರಥವಾಗಿದೆ. ಮಂಜುಗುಣಿ ರಥೋತ್ಸವದಂದು ತಿರುಪತಿಯಿಂದ ಸಾಕ್ಷಾತ್ ತಿಮ್ಮಪ್ಪನೇ ಇಲ್ಲಿಗೆ ಆಗಮಿಸುವನು ಎಂಬುದು ಭಕ್ತರ ನಂಬಿಕೆ. ಹೀಗಾಗಿ ರಾಜ್ಯದ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ರಥಾರೂಢ ವೆಂಕಟರಮಣನಿಗೆ ಪೂಜೆ ಸಲ್ಲಿಸಿದರು. ಈ ನಂಬಿಕೆಗೆ ಪುಷ್ಠಿ ಎಂಬಂತೆ ಮಂಜುಗುಣಿ ರಥೋತ್ಸವದ ದಿನ ತಿರುಪತಿ ದೇವಾಲಯದಲ್ಲಿ ತಿಮ್ಮಪ್ಪನಿಗೆ ಸೇವೆ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT