ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಶ್ರ ಬೇಸಾಯದಲ್ಲಿ ‘ಚಾಲಕ’ನ ಕಮಾಲ್

Published 29 ಡಿಸೆಂಬರ್ 2023, 5:22 IST
Last Updated 29 ಡಿಸೆಂಬರ್ 2023, 5:22 IST
ಅಕ್ಷರ ಗಾತ್ರ

ಶಿರಸಿ: ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಸದಾಕಾಲ ಮೈಯೊಡ್ಡುವ ಬನವಾಸಿ ಹೋಬಳಿಯ ಮತ್ತಗುಣಿಯಲ್ಲಿ ಟ್ರ್ಯಾಕ್ಟರ್ ಬಾಡಿಗೆ ಹೊಡೆಯುವ ಚಾಲಕರೊಬ್ಬರು ತೋಟಗಾರಿಕೆಯಲ್ಲಿ ಯಶ ಕಂಡಿದ್ದಾರೆ. ಆ ಮೂಲಕ ಮಿಶ್ರ ಬೇಸಾಯದಲ್ಲಿ ಸೈ ಎನಿಸಿಕೊಂಡು ಸಣ್ಣ ಹಿಡುವಳಿದಾರರಿಗೆ ಮಾದರಿಯಾಗಿದ್ದಾರೆ.

ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿ ಸದಾಕಾಲ ಬರದ ಸ್ಥಿತಿ ಎದುರಿಸುತ್ತದೆ. ಇಂಥ ಪ್ರದೇಶದಲ್ಲಿ ಮಳೆಯಾಶ್ರಿತ ಬೇಸಾಯ ರೈತರ ಆಸರೆಯಾಗಿದೆ. ಬಹುತೇಕ ಕೃಷಿಕರು ಭತ್ತ, ಅನಾನಸ್, ಶುಂಠಿ ಬೆಳೆಗಳಿಗೆ ಅಂಟಿಕೊಂಡಿದ್ದಾರೆ. ಇವರು ಕೆಲವು ಬಾರಿ ಲಾಭ, ಹಲವು ಬಾರಿ ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಕೆಲ ರೈತರು ಅಡಿಕೆ, ಬಾಳೆ, ಮೆಕ್ಕೆಜೋಳದಂಥ ಮಿಶ್ರ ಬೇಸಾಯ ಮಾಡಿ ಕಾಲಕಾಲಕ್ಕೆ ಲಾಭದ ಹಾದಿಯಲ್ಲಿ ಸಾಗುತ್ತಿದ್ದಾರೆ. ಅಂಥ ರೈತರಲ್ಲಿ ಮತ್ತಗುಣಿಯ ಚಿದಾನಂದ ಮಡಿವಾಳ ಪ್ರಮುಖರು.

ತಮ್ಮ 4 ಎಕರೆ ಜಮೀನಿನಲ್ಲಿ ತಂದೆಯ ಜತೆಗೂಡಿ ಎರಡು ಎಕರೆ ಅಡಿಕೆ ತೋಟ, ಒಂದು ಎಕರೆ ಬಾಳೆ, ಒಂದು ಎಕರೆ ಮೆಕ್ಕೆಜೋಳ ಕೃಷಿಯಲ್ಲಿ ತೊಡಗಿದ್ದಾರೆ. ವಾರ್ಷಿಕವಾಗಿ 50 ಕ್ವಿಂಟಲ್ ಅಡಿಕೆ, 30 ಕ್ವಿಂಟಲ್‌ ಜೋಳ, 3 ಟನ್‌ಗೂ ಹೆಚ್ಚಿನ ಬಾಳೆಕಾಯಿ ಮಾರಾಟ ಮಾಡಿ ಆದಾಯ ಪಡೆಯುತ್ತಿದ್ದಾರೆ.

‘ನಾನು ಸ್ವಂತ ಟ್ರ್ಯಾಕ್ಟರ್ ಹೊಂದಿದ್ದೇನೆ. ಬಾಡಿಗೆಗೆ ಹೋಗುವ ಜತೆ ಕೃಷಿಯಲ್ಲೂ ತೊಡಗಿದ್ದೇನೆ. ಯಾವುದೇ ವೃತ್ತಿ ಮಾಡಿದರೂ ಕೃಷಿಯಲ್ಲಿ ಇರುವ ಖುಷಿ ಮತ್ತೆಲ್ಲೂ ಸಿಗುವುದಿಲ್ಲ. ಹೀಗಾಗಿ ಹಲವು ಜಂಜಡಗಳ ನಡುವೆಯೂ ಕೃಷಿ ಬದುಕಿಗೆ ಅಂಟಿಕೊಂಡಿದ್ದೇನೆ’ ಎನ್ನುತ್ತಾರೆ ಚಿದಾನಂದ. 

‘ವಾಹನ ಬಾಡಿಗೆ ಸಮಯ ಹೊರತುಪಡಿಸಿ ಬೆಳಿಗ್ಗೆ 5ಕ್ಕೆ ತೋಟದ ಕೆಲಸಕ್ಕೆ ತೆರಳುವ ಇವರು 10ರವರೆಗೆ, ನಂತರ ಸಂಜೆ 4ರಿಂದ 7ರವರೆಗೆ ಕೃಷಿಯಲ್ಲಿ ತೊಡಗುತ್ತಾರೆ. ತೋಟಗಾರಿಕೆ ಬೆಳೆಗೆ ಕೊಳವೆ ಬಾವಿ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಮಳೆಯನ್ನೇ ಆಶ್ರಯಿಸಿ ಬೆಳೆಯುವ ಅನಿವಾರ್ಯತೆ ಇವರಿಗಿಲ್ಲ. ತಮ್ಮ ಭೂಮಿಯಲ್ಲಿ ತಾವೇ ಸ್ವತಃ ದುಡಿಯುತ್ತಿದ್ದು, ಅಗತ್ಯ ಬಿದ್ದರೆ ಮಾತ್ರ ಕೂಲಿಯಾಳುಗಳ ಮೊರೆ ಹೋಗುತ್ತಾರೆ. ಕಟಾವು, ನೀರು ಪೂರೈಕೆ, ಗೊಬ್ಬರ ನೀಡುವ ಕೆಲಸಗಳಿಗೆ ಕುಟುಂಬದವರು ಜತೆಯಾಗುತ್ತಾರೆ. ಮನೆಮಂದಿಯೆಲ್ಲ ದುಡಿಯುವುದರಿಂದ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಇವರದ್ದಾಗುತ್ತಿದೆ.

‘ಒಂದು ಬೆಳೆಯನ್ನು ನಂಬಿ ವ್ಯವಸಾಯ ಮಾಡುವುದು ಕ್ಷೇಮಕರವಲ್ಲ. ನಾಲ್ಕು ಬೆಳೆ ಇಟ್ಟರೆ ಒಂದಲ್ಲಾ ಒಂದಕ್ಕೆ ಲಾಭದಾಯಕ ಬೆಲೆ ಸಿಗುತ್ತದೆ. ಇರುವ ಜಮೀನನ್ನು ವೈಜ್ಞಾನಿಕವಾಗಿ ವಿಂಗಡಿಸಿ ಬೆಳೆ ಬೆಳೆದಲ್ಲಿ ನಷ್ಟದ ಪ್ರಶ್ನೆ ಇಲ್ಲ’ ಎಂಬುದು ಅವರ ಅಭಿಪ್ರಾಯ. ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತದೆ. ದನದ ಗೊಬ್ಬರ, ಎರೆಹುಳು ಗೊಬ್ಬರಗಳ ಬಳಕೆಯಿಂದ ಭೂಮಿಯ ಫಲವತ್ತತೆ ಹೆಚ್ಚುವುದಲ್ಲದೇ, ಕಡಿಮೆ ಖರ್ಚಿನಿಂದ ಬೆಳೆ ಬೆಳೆಯಬಹುದು’ ಎನ್ನುತ್ತಾರೆ ಅವರು. 

ಚಿದಾನಂದ ಮಡಿವಾಳ
ಚಿದಾನಂದ ಮಡಿವಾಳ

ಅನುಭವವೇ ನಮಗೆ ಪಾಠ ಕಲಿಸಿಕೊಡುತ್ತದೆ. ಹಾಗಾಗಿ ವಾಹನ ಬಾಡಿಗೆ ಹೋದರೂ ನಿಗದಿತ ವೇಳೆ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ 

-ನಾಗರಾಜ ಮಡಿವಾಳ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT