ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಬಸ್ ನಿಲ್ದಾಣ ಕಾಮಗಾರಿ ವೀಕ್ಷಿಸಿದ ಶಾಸಕ ಭೀಮಣ್ಣ

Published 14 ಜೂನ್ 2024, 12:42 IST
Last Updated 14 ಜೂನ್ 2024, 12:42 IST
ಅಕ್ಷರ ಗಾತ್ರ

ಶಿರಸಿ: ಸುಮಾರು ಏಳು ಕೋಟಿ ರೂಪಾಯಿ ವೆಚ್ಚದಲ್ಲಿ ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬಸ್ ನಿಲ್ದಾಣದ ಕಾಮಗಾರಿಯನ್ನು ಶಾಸಕ ಭೀಮಣ್ಣ ನಾಯ್ಕ ಶುಕ್ರವಾರ ವೀಕ್ಷಿಸಿ,  ‘ಮುಂದಿನ ಆಗಸ್ಟ್ 30ರೊಳಗೆ ಕಾಮಗಾರಿ ಮುಗಿದು, ಶಿರಸಿ ಜನರಿಗೆ ನೂತನ ಬಸ್ ನಿಲ್ದಾಣದ ಸೇವೆ ಸಿಗಲಿದೆ’ ಎಂದು ತಿಳಿಸಿದರು.‌

ಶಿರಸಿಯ ಅಂಚೆ ವೃತ್ತದ ಬಳಿಯಿದ್ದ ಬಸ್ ನಿಲ್ದಾಣವನ್ನು ತೆರವುಗೊಳಿಸಿ ಕಳೆದ ಕೆಲ ವರ್ಷಗಳ ಹಿಂದೆ ಹೊಸ ಬಸ್ ನಿಲ್ದಾಣದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕಾರಣಾಂತರಗಳಿಂದ ವಿಳಂಬವಾಗಿದ್ದ ಕೆಲಸಕ್ಕೆ ಈಗ ಪುನಃ ವೇಗ ದೊರೆತಿದ್ದು, ಇದರಿಂದ ಶಾಸಕರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸಿದರು. 
  
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಭೀಮಣ್ಣ, ‘ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಚಿವ ರಾಮಲಿಂಗ ರೆಡ್ಡಿ ಅವರು ಶಿರಸಿಯಲ್ಲಿ ನೂತನ ಬಸ್ ನಿಲ್ದಾಣಕ್ಕೆ ಅನುದಾನ ಒದಗಿಸಿಕೊಟ್ಟಿದ್ದರು. ಬಳಿಕ ಕಾರಣಾಂತರದಿಂದ ವಿಳಂಬವಾಗಿತ್ತು. ಆದರೆ ಈಗ ಜನರಿಗೆ ತೊಂದರೆಯಾಗುತ್ತಿರುವ ಕಾರಣ 2-3 ಬಾರಿ ವೀಕ್ಷಣೆ ಮಾಡಿ ಬೇಗ ಮುಗಿಸಲು ಸೂಚನೆ ನೀಡಲಾಗಿದೆ. ಇನ್ನು ಸ್ವಲ್ಪ ಕೆಲಸ ಉಳಿದಿದ್ದು, ಆ.30ರೊಳಗೆ ಬಿಟ್ಟುಕೊಡುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ’ ಎಂದು ಮಾಹಿತಿ ನೀಡಿದರು. 

‘ಹೊಸದಾಗಿ ನಿರ್ಮಾಣ ಆಗಿರುವ ಕಟ್ಟಡದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಯಾಗಿದೆ. ಪ್ರಯಾಣಿಕರಿಗೆ ಎಲ್ಲಾ ಸೌಲಭ್ಯ ಒಳಗೊಂಡ ಬಸ್ ನಿಲ್ದಾಣ ಸಿಗಲಿದೆ, ಶಿರಸಿ ಘಟಕಕ್ಕೆ 10 ಬಸ್ಸುಗಳನ್ನು ನೀಡಲಾಗಿದೆ. ಇನ್ನೂ ಹೆಚ್ಚಿನ ಬಸ್ಸುಗಳಿಗೆ ಬೇಡಿಕೆ ಇಡಲಾಗಿದ್ದು, ಸಾರಿಗೆ ಸಚಿವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು. 

ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಸಾರಿಗೆ ಇಲಾಖೆಯ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್, ಪ್ರಮುಖರಾದ ದೀಪಕ ದೊಡ್ಡುರು, ಎಸ್.ಕೆ.ಭಾಗ್ವತ್, ಶ್ರೀನಿವಾಸ ನಾಯ್ಕ ಇತರರು ಇದ್ದರು. ಸಾರಿಗೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.‌

ನಂತರ ಭೀಮಣ್ಣ ನಾಯ್ಕ ಅವರು ನೂತನವಾಗಿ ನಿರ್ಮಾಣ ಆಗುತ್ತಿರುವ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ನಂತರ ಹೊಸದಾದ ಆರ್.ಟಿ.ಒ ಕಚೇರಿ ಕಟ್ಟಡ ನಿರ್ಮಾಣ ಸ್ಥಳಕ್ಕೆ ತೆರಳಿ, ಗುಣಮಟ್ಟದ ಕೆಲಸ ಮಾಡಲು ಸೂಚನೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT