ಶಿರಸಿ: ಕನ್ನಡ ಭಾಷೆ ಓದುವ, ಬಳಸುವ ಹಾಗೂ ಮಾತನಾಡುವುದರಿಂದ ಕನ್ನಡದ ಬಲವರ್ಧನೆ ಸಾಧ್ಯ ಎಂದು ನಗೆ ಭಾಷಣಕಾರ ಹಿರೇಮಗಳೂರು ಕಣ್ಣನ್ ಹೇಳಿದರು.
ತಾಲ್ಲೂಕಿನ ಬೆಟ್ಟಕೊಪ್ಪದಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ಸಂಸ್ಥೆಯು ಶನಿವಾರ ಹಮ್ಮಿಕೊಂಡ ನಮ್ಮನೆ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಳ್ಳಿಯ ಸಂಸ್ಕೃತಿಯನ್ನು ನಗರಕ್ಕೂ ಪಸರಿಸಬೇಕು. ಸಂಸ್ಕಾರ ಉಳಿಸಿದರೆ ಸಂಸ್ಕೃತಿ ವಿನಾಶವಾಗದಂತೆ ತಡೆಯಬಹುದು. ಇಂದು ನಗರಗಳ ಮೂಲಕ ಶಿಕ್ಷಣವನ್ನು ವಿಲಕ್ಷಣಗೊಳಿಸುತ್ತಿದ್ದೇವೆ. ಅದನ್ನು ತಡೆಯಬೇಕಿದೆ. ಕನ್ನಡ ಭಾಷೆ ಯಾವತ್ತೂ ಹೃದಯವಾಣಿ ಆಗಬೇಕು. ಕನ್ನಡ ಬದುಕಿಸುವ ಕೆಲಸ ಆಗಬೇಕು ಎಂದು ಹೇಳಿದರು.
ನಮ್ಮನೆ ಹಬ್ಬಕ್ಕೆ ಚಾಲನೆ ನೀಡಿದ ಕಿರುತೆರೆ ನಟಿ ರಂಜನಿ ರಾಘವನ್ ಮಾತನಾಡಿ, ಇಂದಿನ ಸುತ್ತಲಿನ ವಾತಾವರಣದ ಕಾರಣದಿಂದ ನಾವು ನಮ್ಮ ಮೂಲವನ್ನು ಮರೆಯುತ್ತಿದ್ದೇವೆ. ನಮ್ಮ ಸಂಸ್ಕೃತಿ, ಭಾಷೆ, ನಂಬಿಕೆಯನ್ನು ಬಿಡಬಾರದು. ಸಾಹಿತ್ಯ, ಸಂಸ್ಕೃತಿ ಬೆಳೆಸುವ ಕೆಲಸ ಮಾಡಬೇಕು ಎಂದರು.
ವೀರಲೋಕ ಪ್ರಕಾಶನ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.
ಪ್ರಶಸ್ತಿ ಪ್ರದಾನ: ನಮ್ಮನೆ ಪ್ರಶಸ್ತಿಯನ್ನು ಅಕ್ಕಿ ಡಾಕ್ಟರ್ ಶಶಿಕುಮಾರ ತಿಮ್ಮಯ್ಯ, ಕಲಾವಿದ ನಾಗೇಂದ್ರ ಭಟ್ ಮೂರೂರು, ಕಿಶೋರ ಪುರಸ್ಕಾರವನ್ನು ಶ್ರೀವತ್ಸ ಗುಡ್ಡೆದಿಂಬ ಅವರಿಗೆ ಪ್ರದಾನ ಮಾಡಲಾಯಿತು.
ವಿಶ್ವಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು. ವಿದ್ವಾಂಸ ಉಮಾಕಾಂತ ಭಟ್ ಕೆರೆಕೈ ಇದ್ದರು. ಮಹೇಶ ಹೆಗಡೆ ಪ್ರಾರ್ಥಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ಗಾಯತ್ರಿ ರಾಘವೇಂದ್ರ ವಂದಿಸಿದರು. ನಾರಾಯಣ ಭಾಗ್ವತ್ ನಿರ್ವಹಿಸಿದರು.
ಕಾರ್ಯಕ್ರಮದ ಅಂಗವಾಗಿ ಚಿತ್ರದುರ್ಗದ ಕಲಾವಿದೆ ಶಮಾ ಭಾಗವತ್ ಭರತನಾಟ್ಯ ಪ್ರದರ್ಶನ ನೀಡಿದರು. ಶ್ರೀಲತಾ ಹೆಗ್ಗರ್ಸಿಮನೆ ಗಾಯನ ಪ್ರಸ್ತುತಪಡಿಸಿದರು. ಕಲಾವಿದೆ ತುಳಸಿ ಹೆಗಡೆ ವಿಶ್ವಶಾಂತಿ ಸರಣಿಯ ಯಕ್ಷನೃತ್ಯ ರೂಪಕ ‘ಲೀಲಾವತಾರಮ್’ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.