ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಕೈಕೊಡುತ್ತಿರುವ ಎಲ್ಇಡಿ ದೀಪ

ಹೊಸ ಬೀದಿದೀಪದ ಗುಣಮಟ್ಟದ ಬಗ್ಗೆ ಸಾರ್ವಜನಿಕರ ಅಪಸ್ವರ
Published 5 ಸೆಪ್ಟೆಂಬರ್ 2024, 5:22 IST
Last Updated 5 ಸೆಪ್ಟೆಂಬರ್ 2024, 5:22 IST
ಅಕ್ಷರ ಗಾತ್ರ

ಶಿರಸಿ: ನಗರದಲ್ಲಿ ಹಳೆಯ ಬೀದಿ ದೀಪಗಳ ಬದಲಾವಣೆ ಜತೆ ವಿದ್ಯುತ್ ಉಳಿತಾಯದ ಉದ್ದೇಶದಿಂದ ಅಳವಡಿಸುತ್ತಿರುವ ಎಲ್‍ಇಡಿ ದೀಪಗಳು ಆರಂಭದಲ್ಲೇ ಕೈಕೊಡುತ್ತಿದ್ದು, ದೀಪಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ಅಪಸ್ವರ ಕೇಳಿ ಬರುತ್ತಿದೆ.

ನಗರಸಭೆ ವ್ಯಾಪ್ತಿಯಲ್ಲಿ 5,800 ವಿದ್ಯುತ್ ಬೀದಿ ದೀಪಗಳಿವೆ. ಅವುಗಳ ಪೈಕಿ 4,800 ವಿದ್ಯುತ್ ಕಂಬಗಳಿಗೆ ಆಧುನಿಕವಾಗಿರುವ ಎಲ್‍ಇಡಿ ದೀಪ ಅಳವಡಿಕೆ ಮಾಡಲಾಗುತ್ತದೆ. ಈಗಾಗಲೇ ಐದಕ್ಕೂ ಹೆಚ್ಚು ವಾರ್ಡ್‍ಗಳ ವ್ಯಾಪ್ತಿಯಲ್ಲಿ 1,000ಕ್ಕೂ ಹೆಚ್ಚು ದೀಪ ಅಳವಡಿಕೆ ಪೂರ್ಣಗೊಂಡಿದೆ. ಉಳಿದೆಡೆ ಕಾಮಗಾರಿ ಪ್ರಗತಿಯಲ್ಲಿದೆ.

ಆದರೆ ದೀಪ ಅಳವಡಿಸಿ ಎರಡು ವಾರದೊಳಗೆ ಹಲವೆಡೆಗಳಲ್ಲಿ ಸಮಸ್ಯೆ ಆರಂಭವಾಗಿದೆ. ಅತಿಯಾದ ಮಳೆಯ ಕಾರಣಕ್ಕೆ ಕಾರ್ಬನ್ ಕಟ್ಟುವಿಕೆ ಸಮಸ್ಯೆಯ ತಲೆದೋರಿ ದೀಪ ಬೆಳಗದಂತಾಗಿದೆ.

‘ಎಲ್ಇಡಿ ದೀಪ ಅಳವಡಿಕೆಯಿಂದ ನಗರಸಭೆಗೆ ತಿಂಗಳಿಗೆ ಸುಮಾರು ₹15 ಲಕ್ಷವರೆಗೆ ಬೀದಿದೀಪದ ಹಣ ಉಳಿತಾಯ ಆಗುತ್ತದೆ. ಪ್ರತಿ ತಿಂಗಳ ಈಗಿನ ದೀಪಗಳ ನಿರ್ವಹಣೆಗೆ ನಗರಸಭೆ ನಿಧಿಯಿಂದ ₹3.5 ಲಕ್ಷ ಕೊಡಲಾಗುತ್ತಿತ್ತು. ಅದು ಸಹ ಉಳಿತಾಯವಾಗಲಿದೆ. ಆದರೆ ಈಗಿನಂತೆ ಎಲ್ಇಡಿ ದೀಪಗಳು ನಿರಂತರವಾಗಿ ಕೈಕೊಟ್ಟರೆ ನಗರ ಕತ್ತಲೆಯಲ್ಲಿ ಇರುವಂತಾಗುತ್ತದೆ’ ಎಂಬುದಾಗಿ ನಗರಸಭೆಯ ಹಲವು ಸದಸ್ಯರು ಹೇಳುತ್ತಿದ್ದಾರೆ.

‘ಹೊಸದಾಗಿ ಅಳವಡಿಸುತ್ತಿರುವ 16 ರಿಂದ 80 ವ್ಯಾಟ್‍ವರೆಗಿನ ಎಲ್‍ಇಡಿ ದೀಪಗಳು ಸೆಂಟ್ರಲೈಸ್ ಮೊನಿಟರಿಂಗ್ ಸಿಸ್ಟಮ್ ಸಾಪ್ಟವೇರ್ ನಿಯಂತ್ರಣಕ್ಕೆ ಒಳಪಟ್ಟಿವೆ. ಒಂದೇ ಕಡೆಯಿಂದ ಇಲ್ಲಿನ ಎಲ್ಲ ಎಲ್ಇಡಿ ದೀಪನ್ನು ನಿಯಂತ್ರಿಸಬಹುದಾಗಿದೆ. ಯಾವುದೇ ದೀಪ ಹಾಳಾದರೂ ಕಚೇರಿಯಲ್ಲಿ ಮಾಹಿತಿ ಸಿಗುತ್ತದೆ. ದುರಸ್ತಿ ತಂಡ ಅಂಥ ಕಡೆಗಳಲ್ಲಿ ತೆರಳಿ ಸರಿಪಡಿಸುತ್ತದೆ. ವಾರದಿಂದ ಕಚೇರಿಗೆ ಹಲವು ಬಾರಿ ನಿಯಂತ್ರಣ ಕಚೇರಿಗೆ ಮಾಹಿತಿ ರವಾನೆಯಾಗಿದ್ದು, ದುರಸ್ತಿ ತಂಡ ಆಯಾ ದೀಪದ ಬಳಿ ತೆರಳಿ ದುರಸ್ತಿ ಮಾಡುತ್ತಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಎಲ್ಲ ಹಾಳಾದ ಎಲ್ಇಡಿ ದೀಪಗಳನ್ನು ದುರಸ್ತಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು. ಈ ಕುರಿತು ನಗರಸಭೆಗೆ ಅವರನ್ನು ಕರೆಸಿ ಸೂಚನೆ ನೀಡಲಾಗಿದೆ.
ಕಾಂತರಾಜ್, ಪೌರಾಯುಕ್ತ, ನಗರಸಭೆ ಶಿರಸಿ

‘ಪ್ರತಿ ಎಲ್ಇಡಿ ದೀಪಕ್ಕೆ ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ₹4 ಸಾವಿರದಿಂದ ₹8 ಸಾವಿರ ದರವಿದೆ. ಆದರೆ ಈಗ ಅಳವಡಿಸುತ್ತಿರುವ ದೀಪಗಳ ಗುಣಮಟ್ಟ ಕಳಪೆಯಾಗಿರುವ ಸಾಧ್ಯತೆಯಿದೆ. ಈ ಕಾರಣ ಅಳವಡಿಸಿದ ಕೆಲವೇ ದಿನಗಳಲ್ಲಿ ಕಾರ್ಯ ಸ್ಥಗಿತ ಮಾಡುತ್ತಿವೆ. ಏಳು ವರ್ಷಗಳವರೆಗೆ ಗುತ್ತಿಗೆದಾರರದ್ದೇ ನಿರ್ವಹಣೆ ಇರಲಿದೆ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಮಾಹಿತಿ ನೀಡಿದರೆ ದರ್ಪದ ಮಾತನಾಡುತ್ತಿದ್ದಾರೆ. ನಗರಸಭೆ ಅಧಿಕಾರಿಗಳು ಎಚ್ಚರಿಕೆ ವಹಿಸುವ ಅಗತ್ಯವಿದೆ. ಇಲ್ಲದಿದ್ದರೆ ಸಾರ್ವಜನಿಕರು ಜನಪ್ರತಿನಿಧಿಗಳನ್ನು ತರಾಟೆಗೆ ಪಡೆಯುವ ಸ್ಥಿತಿ ಬರಲಿದೆ’ ಎಂದು ನಗರಸಭೆ ಸದಸ್ಯ ಮಧುಕರ ಬಿಲ್ಲವ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT