ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ– ಅಂಕೋಲಾ ರೈಲ್ವೆ ಯೋಜನೆಗೆ ಒಕ್ಕೊರಲ ಬೇಡಿಕೆ

ಕೇಂದ್ರದ ಸಮಿತಿಗೆ ಇ– ಮೇಲ್‌ನಲ್ಲಿ 1,000ಕ್ಕೂ ಅಧಿಕ ಅಭಿಪ್ರಾಯ ಮಂಡನೆ
Last Updated 28 ಸೆಪ್ಟೆಂಬರ್ 2022, 14:20 IST
ಅಕ್ಷರ ಗಾತ್ರ

ಕಾರವಾರ: ಪ್ರಸ್ತಾವಿತ ಹುಬ್ಬಳ್ಳಿ– ಅಂಕೋಲಾ ರೈಲ್ವೆ ಯೋಜನೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ, ಕೇಂದ್ರದ ಏಳು ಸದಸ್ಯರ ಸಮಿತಿ, ರೈಲ್ವೆ ಬಳಕೆದಾರರು ಹಾಗೂ ಜನಪ್ರತಿನಿಧಿಗಳ ಸಭೆ ನಡೆಯಿತು. ಭಾಗವಹಿಸಿದ್ದವರು ಯೋಜನೆಯು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಹೋರಾಟ ಸಮಿತಿಗಳ ಪ್ರಮುಖರು, ಮೀನುಗಾರರ ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.

ಯೋಜನೆಯ ಪರವಾಗಿ ಜಿಲ್ಲಾಡಳಿತದ ಇ–ಮೇಲ್‌ ವಿಳಾಸಕ್ಕೆ 59 ಹಾಗೂ ಆಕ್ಷೇಪ ವ್ಯಕ್ತಪಡಿಸಿ52 ಪತ್ರಗಳು ಬಂದಿವೆ. ಅರಣ್ಯ ಇಲಾಖೆಯು 1,000ಕ್ಕೂ ಅಧಿಕ ಪತ್ರಗಳನ್ನು ಸ್ವೀಕರಿಸಿದೆ. ಅವುಗಳಲ್ಲಿ ಪರ ಮತ್ತು ಆಕ್ಷೇಪಗಳೆಷ್ಟು ಎಂದು ತಿಳಿದುಬಂದಿಲ್ಲ.

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ‘ರೈಲ್ವೆ ಯೋಜನೆಯ ಪ್ರಕರಣವು 25 ವರ್ಷಗಳಿಂದ ನ್ಯಾಯಾಲಯದಲ್ಲಿದೆ. ರೈಲು ಅಂಕೋಲಾಕ್ಕೆ ಯಾವಾಗ ತಲುಪುತ್ತದೋ ಎಂದು ಜನ ಕಾಯುತ್ತಿದ್ದಾರೆ. ಗುಜರಾತ್, ಮಹಾರಾಷ್ಟ್ರ, ಗೋವಾ, ಸಕಲೇಶಪುರದಲ್ಲಿ ಪಶ್ಚಿಮ ಘಟ್ಟದ ಮೂಲಕ ರೈಲು ಸಾಗುತ್ತದೆ. ಆದರೆ, ಉತ್ತರ ಕನ್ನಡದಲ್ಲಿ ಸಮಸ್ಯೆ ಯಾಕೆ? ರಾಜ್ಯದ ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿಯಲ್ಲಿ ಹಿಂದುಳಿದ ಪ್ರದೇಶಗಳನ್ನು ಜೋಡಿಸಲು ಈ ಯೋಜನೆ ಅತ್ಯಗತ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ವನ್ಯಜೀವಿಗಳ ರಕ್ಷಣೆಗೆ ಏನೇನು ಮಾಡಬೇಕೋ ಅವುಗಳನ್ನೆಲ್ಲ ಸರ್ಕಾರ ಮಾಡಿದೆ. ಆದರೆ, ಅದಕ್ಕಾಗಿ ತ್ಯಾಗ ಮಾಡಿದ ಜನರಿಗೆ ಏನು ಕೊಡಲಾಗಿದೆ? ಸರ್ವಾಂಗೀಣ ಅಭಿವೃದ್ಧಿಗಾಗಿ ಈ ಯೋಜನೆ ಜಾರಿಯಾಗಬೇಕು. ಶೇ 90ರಷ್ಟು ಜನ ಇದನ್ನು ಸ್ವಾಗತಿಸಿದರೆ, ಕೇವಲ ಶೇ 10ರಷ್ಟು ಮಂದಿ ಮಾತ್ರ ವಿರೋಧಿಸುತ್ತಿದ್ದಾರೆ’ ಎಂದು ಪ್ರತಿಪಾದಿಸಿದರು.

ಮಾಜಿ ಶಾಸಕ ಸತೀಶ ಸೈಲ್ ಮಾತನಾಡಿ, ‘ರೈಲ್ವೆ ಯೋಜನೆಗಾಗಿ ಕಡಿಯಲಾಗುವ ಒಂದು ಮರಕ್ಕೆ ಐದು ಸಸಿಗಳನ್ನು ನಾವು ನೆಡುತ್ತೇವೆ. ಅಂಕೋಲಾ– ಯಲ್ಲಾಪುರ ನಡುವೆ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥವಾಗಿಸುವ ಪ್ರಸ್ತಾಪವಿದೆ. ಅದರ ಬದಲು ರೈಲ್ವೆ ಯೋಜನೆಯನ್ನೂ ಮಾಡಬಹುದು’ ಎಂದರು.

‘ನ್ಯಾಯಾಲಯಕ್ಕೆ ತಪ್ಪು ಮಾಹಿತಿ’:

ರೈಲ್ವೆ ಹೋರಾಟ ಸಮಿತಿಯ ಪರವಾಗಿ ಮಾತನಾಡಿದ ವಕೀಲ ಅಕ್ಷಯ ಕೊಲ್ಲೆ, ‘ಈ ಯೋಜನೆಯನ್ನು ವಿರೋಧಿಸುತ್ತಿರುವವರು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಇದು ಕಾನೂನಿನ ದುರ್ಬಳಕೆಯಾಗುತ್ತದೆ’ ಎಂದು ಆರೋಪಿಸಿದರು.

‘ಪ್ರಸ್ತಾವಿತ ಯೋಜನೆಯು ಪರಿಸರ ಸೂಕ್ಷ್ಮ ಪ್ರದೇಶದ ಮೂಲಕ ಸಾಗುತ್ತದೆ ಎಂಬುದು ಸುಳ್ಳು. ಅಲ್ಲದೇ ಕಾಳಿ ಹುಲಿ ಸಂರಕ್ಷಿತ ಪ್ರದೇಶದ (ಕೆ.ಟಿ.ಆರ್) ಸಮೀಪದಲ್ಲೇ ರೈಲು ಹೋಗಲಿದೆ ಎಂಬುದೂ ತಪ್ಪು ಮಾಹಿತಿ. ಈ ಯೋಜನೆಯು ಕೆ.ಟಿ.ಆರ್.ಗಿಂತ 14 ಕಿ.ಮೀ, ಬೇಡ್ತಿ ಸಂರಕ್ಷಣಾ ವಲಯವು ಯೋಜನಾ ವಲಯದಿಂದ 25 ಕಿ.ಮೀ ದೂರದಲ್ಲಿದೆ. ಈ ಪ್ರಕರಣದಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕರವನ್ನು ಅನಗತ್ಯವಾಗಿ ಎಳೆದು ತರಲಾಗುತ್ತಿದೆ’ ಎಂದರು.

ಎಲ್ಲರ ಅಭಿಪ್ರಾಯಗಳನ್ನು ಲಿಖಿತವಾಗಿ ಪಡೆದ ಸಮಿತಿ ಸದಸ್ಯರು, ವರದಿ ಸಿದ್ಧಪಡಿಸಲಿದ್ದಾರೆ. ಬಳಿಕ ಅದನ್ನು ಕೇಂದ್ರ ಸರ್ಕಾರಕ್ಕೆ ಮತ್ತು ಹೈಕೋರ್ಟ್‌ಗೆ ಸಲ್ಲಿಸಲಿದ್ದಾರೆ.

ರೂಪಾಲಿ–ಸೈಲ್ ಮಾತಿನ ಚಕಮಕಿ:

ರೈಲ್ವೆ ಬಳಕೆದಾರರು ಮತ್ತು ಕೇಂದ್ರದ ತಂಡದ ನಡುವಿನ ಸಭೆಯು, ಶಾಸಕಿ ರೂಪಾಲಿ ನಾಯ್ಕ ಮತ್ತು ಮಾಜಿ ಶಾಸಕ ಸತೀಶ ಸೈಲ್ ನಡುವೆ ಮಾತಿನ ಚಕಮಕಿಗೆ ಸಾಕ್ಷಿಯಾಯಿತು. ಗದ್ದಲದ ಕಾರಣ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಭೆಯನ್ನು ಸ್ವಲ್ಪ ಹೊತ್ತು ಮುಂದೂಡಿದರು.

‘ಸಾರ್ವಜನಿಕರ ಅಹವಾಲು ಸಭೆಯನ್ನು ಸಭಾಂಗಣದಲ್ಲಿ ಮಾಡಬೇಡಿ. ಹೊರಗೆ ಸಾಕಷ್ಟು ಜನರಿದ್ದಾರೆ. ಅಲ್ಲೇ ಮಾಡಬೇಕು’ ಎಂದು ಸೈಲ್ ಆಕ್ಷೇಪಿಸಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ‘ಇದು ಸಾರ್ವಜನಿಕ ಅಹವಾಲು ಸಭೆಯಲ್ಲ. ರೈಲು ಬಳಕೆದಾರರ ಅಭಿಪ್ರಾಯ ಕೇಳಲು ಮಾತ್ರ ಆಯೋಜಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು. ಆದರೂ ಗದ್ದಲ ಮುಂದುವರಿಯಿತು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ಎಲ್ಲದರಲ್ಲೂ ರಾಜಕೀಯ ತಂದಿಟ್ಟು ಕಾರವಾರ ಹಾಳು ಮಾಡಿದ್ರಿ. ಸುಮ್ನೆ ಇಲ್ಲಿ ಭಾಷಣ ಮಾಡ್ಬೇಡಿ. ಸುಮ್ನೆ ಹೋಗಿ ಕೂತ್ಕೊಳ್ಳಿ’ ಎಂದು ಏರು ಧ್ವನಿಯಲ್ಲೇ ಹೇಳಿದರು. ಒಂದು ಹಂತದಲ್ಲಿ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಕೊನೆಗೆ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಿದ ಜಿಲ್ಲಾಧಿಕಾರಿ, ಅಧಿಕಾರಿಗಳನ್ನು ಹೊರಗೆ ಕಳುಹಿಸಿದರು. ಹೊರಗಿದ್ದ ಎಲ್ಲ ಸಾರ್ವಜನಿಕರಿಗೂ ಸಭಾಂಗಣಕ್ಕೆ ಪ್ರವೇಶ ಕಲ್ಪಿಸಿದರು.

ನಂತರ ಮಾತನಾಡಿದ ಸಚಿವ ಶಿವರಾಮ ಹೆಬ್ಬಾರ, ‘ರೈಲು ಯೋಜನೆ ಜಾರಿಯಾಗಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ನಮ್ಮ ನಡವಳಿಕೆಯಿಂದ ಸಮಿತಿಯ ಸದಸ್ಯರಿಗೆ ಮಾನಸಿಕವಾಗಿ ನೋವಾಗಬಾರದು. ಜಾಣ್ಮ, ತಾಳ್ಮೆಯಿಂದ ವರ್ತಿಸಿ’ ಎಂದು ಕಿವಿಮಾತು ಹೇಳಿದರು.

****

_ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ದಿನವೂ ಸುಮಾರು 4 ಸಾವಿರ ವಾಹನಗಳು ಸಂಚರಿಸುತ್ತವೆ. ಅಪಘಾತಗಳಾಗಿ ಸಾವು ನೋವು ಆಗುತ್ತಿವೆ. ಅವನ್ನು ತಡೆಯಲು ರೈಲ್ವೆ ಸಹಕಾರಿ.

– ಶಿವರಾಮ ಹೆಬ್ಬಾರ, ಕಾರ್ಮಿಕ ಸಚಿವ

ಈ ಯೋಜನೆಯು ಆರ್ಥಿಕ ಚಟುವಟಿಕೆಗಳ ಮೇಲೆ ಬಹಳ ಪ್ರಭಾವ ಬೀರಲಿದೆ. ಪ್ರವಾಸೋದ್ಯಮ ಅಭಿವೃದ್ಧಿ, ಮಾಲಿನ್ಯ ನಿಯಂತ್ರಣಕ್ಕೆ ಅನುಕೂಲವಾಗಲಿದೆ.

– ರಮಾನಂದ ನಾಯಕ, ಅಧ್ಯಕ್ಷ, ಹುಬ್ಬಳ್ಳಿ– ಅಂಕೋಲಾ ರೈಲ್ವೆ ಹೋರಾಟ ಸಮಿತಿ.

* ಯೋಜನೆಯ ಮಾರ್ಗದಲ್ಲಿ 28 ಸುರಂಗಗಳನ್ನು ರಚಿಸಲಾಗುತ್ತದೆ. ಕಾರಿಡಾರ್‌ಗಳನ್ನು ರಚಿಸುವ ಕಾರಣ ವನ್ಯಜೀವಿಗಳಿಗೆ ತೊಂದರೆಯಾಗದು. ‌

– ಎಂ.ಡಿ.ಸುಭಾಶ್ಚಂದ್ರನ್, ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT