ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುರುಡೇಶ್ವರದಲ್ಲಿ ಪ್ರವಾಸಿಗರ ದಂಡು; ಅಗತ್ಯ ಸೌಲಭ್ಯ ಇಲ್ಲದೆ ಜನರ ಪರದಾಟ

Published 22 ಮೇ 2024, 5:32 IST
Last Updated 22 ಮೇ 2024, 5:32 IST
ಅಕ್ಷರ ಗಾತ್ರ

ಭಟ್ಕಳ: ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರವಾಸಿತಾಣ ಮುರುಡೇಶ್ವರಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಏರುತ್ತಿದ್ದರೂ ಪ್ರವಾಸೋದ್ಯಮ ಇಲಾಖೆ ಅಗತ್ಯ ಮೂಲಸೌಕರ್ಯದ ಸೌಲಭ್ಯ ಒದಗಿಸಿದ ಕಾರಣ ಪ್ರವಾಸಿಗರು ಪರದಾಡುವಂತಾಗಿದೆ.

ಮುರುಡೇಶ್ವರಲ್ಲಿನ ಪ್ರಕೃತಿದತ್ತ ಸೌಂದರ್ಯವನ್ನು ವೀಕ್ಷಿಸುವುದೇ ಒಂದು ಸುಂದರ ಅನುಭವ. ಈಶ್ವರನ ದೇವಸ್ಥಾನ, ಬೃಹದಾಕಾರದ ರಾಜಗೋಪುರ, ಬೃಹದಾಕಾರದ ಈಶ್ವರನ ಮೂರ್ತಿ, ಸುಂದರರಾಮೇಶ್ವರ ದೇವಸ್ಥಾನ, ಪಂಚ ಶಿವಕ್ಷೇತ್ರ ಆದ ಬಗ್ಗೆ ಈಶ್ವರನ ಬೃಹಾದಾಕಾರದ ಮೂರ್ತಿಯ ಕೆಳಭಾಗದ ಗುಹೆಯೊಳಗಿನ ಸುಂದರ ಚಿತ್ರಣ, ಶನೇಶ್ಚರ ದೇವಸ್ಥಾನ, ಸೂರ್ಯಾಸ್ತ ವೀಕ್ಷಣೆ, ಸುತ್ತಲೂ ಇರುವ ಸುಂದರ ಸಮುದ್ರ ಹೀಗೆ ಮುರುಡೇಶ್ವರದ ಸೊಬಗನ್ನು ವೀಕ್ಷಿಸಲು ಪ್ರವಾಸಿಗರ ದಂಡೇ ಇಲ್ಲಿಗೆ ಹರಿದು ಬರುತ್ತಿದೆ. ಸಮುದ್ರ ತೀರದಲ್ಲಂತೂ ಕಿಕ್ಕಿರಿದು ಪ್ರವಾಸಿಗರು ಸೇರುತ್ತಿದ್ದು, ಸಮುದ್ರದ ನೀರನ್ನು ನೋಡಿ ಈಜುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಮುರುಡೇಶ್ವರದ ಸಮುದ್ರದಲ್ಲಿ ಸ್ಪೀಡ್ ಬೋಟಿಂಗ್, ಸೀ ವಾಕ್ ಮುಂತಾದ ಜಲ ಕ್ರೀಡೆಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಮುರುಡೇಶ್ವರದ ಕಡಲತೀರದ ಚಟುವಟಿಕೆಯಿಂದ ಪ್ರವಾಸೋದ್ಯಮ ಇಲಾಖೆಗೆ ವಾರ್ಷಿಕ ಕೋಟ್ಯಂತರ ರೂಪಾಯಿ ಆದಾಯ ಇದ್ದರೂ, ಶುದ್ಧ ಕುಡಿಯುವ ನೀರು, ಸ್ನಾನಗೃಹ, ಕಡಲಿನಲ್ಲಿ ಈಜುವ ಪ್ರವಾಸಿಗರ ಸುರಕ್ಷತೆ ಹಾಗು ವಾಹನ ನಿಲುಗಡೆ ಸೇರಿದಂತೆ ಅಗತ್ಯ ಮೂಲಭೂತಸೌಕರ್ಯ ಒದಗಿಸಿಲ್ಲ. ಮುರುಡೇಶ್ವರಕ್ಕೆ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ ಕೆಲದಿನಗಳಿಂದ ಪಾರ್ಕಿಂಗ್, ಸುಗಮ ವಾಹನ ಸಂಚಾರಕ್ಕೆ ಪರದಾಡುವಂತಾಗಿದೆ. ವಾಹನ ದಟ್ಟಣೆಯಿಂದಾಗಿ ಕಳೆದ ಕೆಲದಿನಗಳಿಂದ ಸ್ಥಳೀಯ ಪೊಲೀಸರಿಗೆ ವಾಹನ ದಟ್ಟಣೆ ಸುಧಾರಿಸಿ ಸುಗಮ ಸಂಚಾರದ ವ್ಯವಸ್ಥೆ ಮಾಡಿಕೊಡುವುದೇ ಕಾಯಕವಾಗಿದೆ.

ಪ್ರತಿ ದಿವಸ ಸಾವಿರಾರು ಪ್ರವಾಸಿಗರು ಮುರುಡೇಶ್ವರಕ್ಕೆ ಭೇಟಿ ನೀಡುತ್ತಾರೆ. ಪ್ರವಾಸಿಗರಿಂದ ಕೋಟ್ಯಂತರ ರೂಪಾಯಿ ಆದಾಯ ಕೂಡ ಸರ್ಕಾರಕ್ಕೆ ಇದೆ ಆದರೆ ಇಲ್ಲಿನ ಮೂಲಸೌಕರ್ಯ ಅಭಿವೃದ್ದಿಗೆ ಮಾತ್ರ ಒತ್ತು ನೀಡುವುದಿಲ್ಲ. ಪ್ರವಾಸಿಗರ ಸಮಯದಲ್ಲಿ ವಾಹನ ದಟ್ಟಣೆಯಿಂದ ಸ್ಥಳೀಯರು ಪರದಾಡಬೇಕಾದ ಸ್ಥಿತಿಇದೆ. ಪ್ರವಾಸೋದ್ಯಮ ಇಲಾಖೆ ಮುರುಡೇಶ್ವರದಲ್ಲಿ ಅಗತ್ಯ ಮೂಲಭೂತ ಸೌಕರ್ಯಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎನ್ನುತ್ತಾರೆ ಸ್ಥಳೀಯರಾದ ಆನಂದ ನಾಯ್ಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT