ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ವರ್ಷದ ಬಳಿಕ ಸಂಸದ ಅನಂತಕುಮಾರ ‘ಪ್ರತ್ಯಕ್ಷ’

ಬಿಜೆಪಿ ನಾಯಕರು, ಕಾರ್ಯಕರ್ತರಲ್ಲೇ ಭಿನ್ನಾಭಿಪ್ರಾಯ
Published 30 ಡಿಸೆಂಬರ್ 2023, 19:54 IST
Last Updated 30 ಡಿಸೆಂಬರ್ 2023, 19:54 IST
ಅಕ್ಷರ ಗಾತ್ರ

ಕಾರವಾರ: ಲೋಕಸಭೆ ಚುನಾವಣೆಯಲ್ಲಿ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಯಾರು ಸ್ಪರ್ಧಿಸುವರು ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ‘ಚುನಾವಣೆ ರಾಜಕೀಯದಿಂದ ನಿವೃತ್ತರಾಗುತ್ತಾರೆ’ ಎಂಬುದು ಬರೀ ವದಂತಿ ಎಂಬಂತೆ ಹಾಲಿ ಸಂಸದ ಅನಂತಕುಮಾರ ಹೆಗಡೆ ಮತ್ತೆ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.

2019ರಲ್ಲಿ ಆಯ್ಕೆಯಾದ ಆರಂಭದ ಕೆಲ ದಿನ ಹೊರತುಪಡಿಸಿದರೆ ಸಂಸದರು ಸಾರ್ವಜನಿಕವಾಗಿ ಕಾಣಿಸಿದ್ದು ಅಪರೂಪ. ಪಕ್ಷದ ಚಟುವಟಿಕೆಯಿಂದಲೂ ದೂರ ಸರಿದಿದ್ದ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಸಮಾವೇಶದಲ್ಲೂ ಪಾಲ್ಗೊಂಡಿರಲಿಲ್ಲ.

ಆದರೆ, ಕೆಲ ದಿನಗಳಿಂದ ಸಂಸದರ ನಿವಾಸಕ್ಕೆ ವಿವಿಧ ತಾಲ್ಲೂಕುಗಳಿಂದ ಪ್ರತ್ಯೇಕವಾಗಿ ಕಾರ್ಯಕರ್ತರ ತಂಡವು ತೆರಳಿ ಮತ್ತೆ ಸ್ಪರ್ಧಿಸಲು ಒತ್ತಾಯಿಸುತ್ತಿದೆ. ‘ಸ್ಪರ್ಧೆ ಕುರಿತು ನಿರ್ಧರಿಸಲು ಸಮಯ ನೀಡಿ’ ಎಂದು ಅವರು ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಯು ಬಿಜೆಪಿಯಲ್ಲೇ ಪರ, ವಿರೋಧದ ಚರ್ಚೆಗೆ ಕಾರಣವಾಗಿದೆ.

‘ಅಭಿವೃದ್ಧಿಗಿಂತ ಹಿಂದುತ್ವ ವಿಷಯವನ್ನೇ ಹೆಚ್ಚು ಪ್ರತಿಪಾದಿಸುತ್ತ ಐದು ಬಾರಿ ಗೆದ್ದಿರುವ ಅನಂತಕುಮಾರ ಇನ್ನೊಮ್ಮೆ ಸ್ಪರ್ಧಿಸಬೇಕು. ಬಿಜೆಪಿ ಗೆಲುವಿಗೆ ಹಿಂದುತ್ವವೇ ಮುಖ್ಯ ಅಸ್ತ್ರ. ಅದನ್ನು ಪ್ರಯೋಗಿಸಲು ಅನಂತಕುಮಾರ ಸೂಕ್ತ’ ಎಂದು ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಹೇಳುತ್ತಾರೆ.

ಆದರೆ, ಮತ್ತೊಂದೆಡೆ ಬಿಜೆಪಿಯ ಕೆಲ ನಾಯಕರು, ‘ಪಕ್ಷದ ಸಕ್ರಿಯ ಚಟುವಟಿಕೆಯಿಂದ ದೂರವುಳಿದು, ಚುನಾವಣೆ ಸಮೀಪಿಸುತ್ತಿದ್ದಂತೆ ಅವರು ಈಗ ಬಂದಿದ್ದು ಸರಿಯಲ್ಲ. ಮೋದಿ ಜಿಲ್ಲೆಗೆ ಭೇಟಿ ನೀಡಿದ್ದಾಗಲೇ ಬಾರದಿದ್ದವರು ಈಗ ಮೋದಿ ಹೆಸರಿನಲ್ಲಿ ಸ್ಪರ್ಧೆಗೆ ಯತ್ನಿಸುತ್ತಿರುವುದು ಹಾಸ್ಯಾಸ್ಪದ’ ಎಂದು ಹೇಳುತ್ತಾರೆ.

ಅನಂತಕುಮಾರ ಬದಲು ಈ ಬಾರಿ ಬೇರೊಬ್ಬರನ್ನು ಕಣಕ್ಕಿಳಿಸಲು ಬಿಜೆಪಿ ಯೋಚಿಸಿದೆ ಎಂದು ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ. ಇದಕ್ಕೆ ಪೂರಕವಾಗಿ ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ. ಚರ್ಕವರ್ತಿ ಸೂಲಿಬೆಲೆ ಹೆಸರೂ ಸಂಭಾವ್ಯರ ಪಟ್ಟಿಯಲ್ಲಿದೆ.

ಅಭ್ಯರ್ಥಿ ಯಾರಾಗಬೇಕು ಎಂಬುದರ ಕುರಿತು ಬಿಜೆಪಿ ವರಿಷ್ಠರು ನಿರ್ಧರಿಸುವರು. ಯಾರೇ ಅಭ್ಯರ್ಥಿ ಆದರೂ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು
ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆ ಮಾಜಿ ಅಧ್ಯಕ್ಷ
ಕಾಂಗ್ರೆಸ್ ನಾಯಕರು ಈಗಾಗಲೇ ಕೆಲವರನ್ನು ಗುರುತಿಸಿದ್ದು ಅವರನ್ನು ಚುನಾವಣಾ ಕಣಕ್ಕೆ ಇಳಿಸುವರು. ಈ ಬಾರಿ ಉತ್ತರ ಕನ್ನಡ ಕ್ಷೇತ್ರ ನಮ್ಮ ತೆಕ್ಕೆಗೆ ಬರುವುದು ನಿಶ್ಚಿತ
ಮಂಕಾಳ ವೈದ್ಯ ಜಿಲ್ಲಾ ಉಸ್ತುವಾರಿ ಸಚಿವ

ಕಾಂಗ್ರೆಸ್‌ ಅಭ್ಯರ್ಥಿಗೆ ಮಾಹಿತಿ ಸಂಗ್ರಹಣೆ

ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಉಸ್ತುವಾರಿ ಜವಾಬ್ದಾರಿ ಹೊತ್ತಿರುವ ಸಚಿವ ಎಚ್.ಕೆ.ಪಾಟೀಲ ಅವರು ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಅಭಿಪ್ರಾಯ ಸಂಗ್ರಹ ನಡೆದಿದೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ವಕೀಲ ಜಿ.ಟಿ.ನಾಯ್ಕ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೆಸರು ಮುಂಚೂಣಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT