ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣಗೊಳ್ಳದ ‘ಚುನಾವಣೆ ಸೇತುವೆ’!

ಉಳಗಾ–ಕೆರವಡಿ ಗ್ರಾಮಗಳಿಗೆ ಸಂಪರ್ಕ ಬೆಸೆಯುವ ಸೌಕರ್ಯ ನನೆಗುದಿಗೆ
Published 4 ಮೇ 2024, 8:09 IST
Last Updated 4 ಮೇ 2024, 8:09 IST
ಅಕ್ಷರ ಗಾತ್ರ

ಕಾರವಾರ: ಹಲವು ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ರಾಜಕೀಯ ನಾಯಕರ ‘ಭರವಸೆ ವಿಷಯ’ವಾಗಿದ್ದ ಉಳಗಾ–ಕೆರವಡಿ ಸೇತುವೆ ಆರು ವರ್ಷ ಕಳೆದರೂ ಮುಗಿದಿಲ್ಲದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

2018ರಲ್ಲಿ ಅಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸೇತುವೆ ಮಂಜೂರಾಗಿತ್ತು. ₹25 ಕೋಟಿ ವೆಚ್ಚದ ಯೋಜನೆಯು ನಾಲ್ಕು ವರ್ಷಗಳ ಹಿಂದೆಯೇ ಪೂರ್ಣಗೊಳ್ಳಬೇಕಿತ್ತಾದರೂ, ರಾಜಕೀಯ ಕಾರಣಗಳಿಂದ ನನೆಗುದಿಗೆ ಬಿದ್ದಿದೆ. ಚುನಾವಣೆ ಸಂದರ್ಭದಲ್ಲಷ್ಟೆ ಜನಪ್ರತಿನಿಧಿಗಳಿಗೆ ನೆನಪಾಗುವ ಸೇತುವೆ ಕಾಮಗಾರಿಗೆ ಸ್ಥಳೀಯರು ‘ಚುನಾವಣೆ ಸೇತುವೆ’ ಎಂದು ಕುಹಕವಾಡುತ್ತಾರೆ.

ಕಾಳಿನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆಯು ಉಳಗಾ ಮತ್ತು ಕೆರವಡಿ ಗ್ರಾಮಗಳನ್ನು ಬೆಸೆಯುತ್ತದೆ. ಎರಡೂ ಕಡೆಯ ಹತ್ತಾರು ಹಳ್ಳಿಗಳ ಜನರಿಗೆ ಕಾರವಾರ ನಗರ, ಮಲ್ಲಾಪುರವನ್ನು ಕಡಿಮೆ ಅಂತರದಲ್ಲಿ ಕ್ರಮಿಸಲು ಸೇತುವೆ ಅನುಕೂಲವಾಗಿದೆ.

ಕಳೆದ ಒಂದೂವರೆ ದಶಕದಿಂದಲೂ ವಿಧಾನಸಭೆ, ಲೋಕಸಭೆ ಚುನಾವಣೆ ವೇಳೆ ಉಳಗಾ–ಕೆರವಡಿ ಸೇತುವೆ ವಿಚಾರ ಪ್ರಸ್ತಾಪವಾಗುತ್ತಿತ್ತು. ಚುನಾವಣೆ ಸಮೀಪಿಸಿದಾಗ ಸೇತುವೆ ನಿರ್ಮಾಣದ ಭರವಸೆ ನೀಡುವ ಜತೆಗೆ, ಹಲವು ಬಾರಿ ಕಾಮಗಾರಿಗೆ ಚಾಲನೆ ನೀಡಿದ ಘಟನೆಯೂ ನಡೆದಿದ್ದವು. ಆದರೆ ಇನ್ನೂವರೆಗೆ ಸೇತುವೆ ನಿರ್ಮಾಣವಾಗಿಲ್ಲ ಎಂಬುದು ಸ್ಥಳೀಯರ ದೂರು.

‘ಸೇತುವೆ ಕಾಮಗಾರಿ ಆರಂಭಿಸಿ ಆರು ವರ್ಷ ಕಳೆದಿದೆ. ಈ ಅವಧಿಯಲ್ಲಿ ಮೂರು ಸರ್ಕಾರಗಳು ಬದಲಾದವು. ಆದರೆ, ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಆರು ವರ್ಷದ ಹಿಂದೆ ಜಿಲ್ಲೆಯ ಬೇರೆ ಬೇರೆ ಕಡೆ ಆರಂಭಿಸಲಾದ ಸೇತುವೆ ಕಾಮಗಾರಿಗಳು ಪೂರ್ಣಗೊಂಡವು. ಉಳಗಾ–ಕೆರವಡಿ ಸೇತುವೆ ಪೂರ್ಣಗೊಳಿಸದಿರುವುದು ಆಡಳಿತ ವ್ಯವಸ್ಥೆಯ ಮೇಲೆ ಜನರಲ್ಲಿ ಭ್ರಮನಿರಸನ ಹುಟ್ಟುವಂತೆ ಮಾಡಿದೆ’ ಎನ್ನುತ್ತಾರೆ ಉಳಗಾದ ಸೂರಜ್ ಬೇಳೂರಕರ, ರೋಶನ್ ಗುನಗಿ, ಇತರರು.

‘ಉಳಗಾದಲ್ಲಿರುವ ಶಾಲೆ, ಕಾಲೇಜುಗಳಿಗೆ ಕೆರವಡಿ ಭಾಗದಿಂದ ಹತ್ತಾರು ವಿದ್ಯಾರ್ಥಿಗಳು ಬರುತ್ತಾರೆ. ಬಾರ್ಜ್ ಅವಲಂಬಿಸಿ ನದಿ ದಾಟಬೇಕಾಗುತ್ತಿದೆ. ಪ್ರವಾಹದ ವೇಳೆ ಬಾರ್ಜ್ ಕೂಡ ಸಂಚರಿಸಲಾಗದು. ಪ್ರತಿ ವರ್ಷ ಇಲ್ಲಿನ ಜನರು ನದಿ ದಾಟಲು ಸಾಕಷ್ಟು ಸಂಕಷ್ಟಪಡುತ್ತಿರುವುದು ಜನಪ್ರತಿನಿಧಿಗಳ ಗಮನಕ್ಕೂ ಇದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿದರೆ ಅನುಕೂಲವಾಗಲಿದೆ’ ಎಂದರು.

ಸೇತುವೆಗೆ ಮೂರು ಕಂಬ ನಿರ್ಮಿಸುವ ಜತೆಗೆ ಸಂಪರ್ಕ ರಸ್ತೆ ನಿರ್ಮಿಸಬೇಕಾಗಿದೆ. ಮುಖ್ಯ ಎಂಜಿನಿಯರ್ ಪರಿಶೀಲನೆ ನಡೆಸಿದ್ದು ಶೀಘ್ರವೇ ಕೆಲಸ ಆರಂಭಿಸಲಾಗುತ್ತದೆ

-ಪ್ರಕಾಶ ಹಲಂಗಲಿ ಕೆ.ಆರ್.ಡಿ.ಸಿ.ಎಲ್ ಎಇಇ

ಹೆಚ್ಚುವರಿ ಅನುದಾನಕ್ಕೆ ಬೇಡಿಕೆ

‘ಉಳಗಾ–ಕೆರವಡಿ ಸೇತುವೆ ಕಾಮಗಾರಿಯು ₹25 ಕೋಟಿ ವೆಚ್ಚದ ಯೋಜನೆ ಆಗಿತ್ತು. ಕಾಮಗಾರಿಯ ಗುತ್ತಿಗೆ ಪಡೆದಿದ್ದ ಹುಬ್ಬಳ್ಳಿಯ ಡಿ.ಆರ್.ಎನ್ ಇನ್‍ಫ್ರಾಸ್ಟ್ರಕ್ಚರ್ ಸಂಸ್ಥೆಯು ಹಲವು ತಿಂಗಳ ಹಿಂದೆಯೇ ಕೆಲಸ ನಿಲ್ಲಿಸಿದೆ. ಹಿಂದಿನ ವಿಸ್ತ್ರತ ಯೋಜನಾ ವರದಿ ಆಧರಿಸಿ ಈಗಿರುವ ಅನುದಾನದಲ್ಲಿ ಕೆಲಸ ಮುಂದುವರೆಸುವುದು ಕಷ್ಟ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ ಎಂದು ಸಂಸ್ಥೆಯು ಬೇಡಿಕೆ ಇಟ್ಟಿದೆ. ಸರ್ಕಾರದ ಮಟ್ಟದಲ್ಲಿ ಹೆಚ್ಚುವರಿ ಅನುದಾನಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಕೆಯಾಗಿದೆ’ ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆ.ಆರ್.ಡಿ.ಸಿ.ಎಲ್) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT