ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕನ್ನಡ | ಮಂದಗತಿಯಲ್ಲಿ ಮಳೆಗಾಲದ ತಯಾರಿ

ಚುನಾವಣೆ ಒತ್ತಡದಲ್ಲಿ ಅಧಿಕಾರಿಗಳು: ಮುನ್ನೆಚ್ಚರಿಕೆಗೆ ನಿರ್ಲಕ್ಷ್ಯದ ದೂರು
Published 6 ಮೇ 2024, 5:04 IST
Last Updated 6 ಮೇ 2024, 5:04 IST
ಅಕ್ಷರ ಗಾತ್ರ

ಕಾರವಾರ: ಮಳೆಗಾಲ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಜಿಲ್ಲೆಯಲ್ಲಿ ಮಳೆಗಾಲದ ಮುನ್ನೆಚ್ಚರಿಕೆ ಕಾರ್ಯಗಳು ಮಂದಗತಿಯಲ್ಲಿ ಸಾಗಿವೆ ಎಂಬ ದೂರು ವ್ಯಾಪಕವಾಗಿದೆ.

ಲೋಕಸಭೆ ಚುನಾವಣೆಯ ಕೆಲಸದ ಒತ್ತಡದಲ್ಲಿರುವ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳತ್ತ ಲಕ್ಷ್ಯ ವಹಿಸುತ್ತಿಲ್ಲ ಎಂಬುದು ಸ್ಥಳೀಯರ ದೂರು. ಚುನಾವಣೆ ಕೆಲಸದ ನಡುವೆಯೂ ಮಳೆಗಾಲಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂಬುದು ಅಧಿಕಾರಿಗಳ ಸಬೂಬು.

ಬಹುತೇಕ ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ಚರಂಡಿ ಹೂಳೆತ್ತುವ ಕೆಲಸ ನಿಧಾನವಾಗಿ ಸಾಗಿದೆ. ರಾಜಕಾಲುವೆ ಹೂಳೆತ್ತುವ ಕೆಲಸ ನಡೆಯದಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಅಪಾಯಕಾರಿ ಮರಗಳ ತೆರವು ಕಾರ್ಯವೂ ಚುರುಕಾಗಿಲ್ಲ. ಕಾರವಾರ ನಗರದಲ್ಲಿ ಸಣ್ಣ ಚರಂಡಿ ಹೂಳೆತ್ತಲಾಗುತ್ತಿದೆಯೇ ಹೊರತು ಮಳೆನೀರು ಸರಾಗವಾಗಿ ಹರಿದು ಹೋಗಬೇಕಾದ ರಾಜಕಾಲುವೆ ನಿರ್ವಹಣೆ ಅಷ್ಟಕಷ್ಟೆ ಇದೆ.

ಮಳೆಗಾಲ ಪೂರ್ವ ಕಾಮಗಾರಿ ಸಮರ್ಪಕವಾಗಿ ಅನುಷ್ಠಾನವಾಗದ ಪರಿಣಾಮ ಶಿರಸಿಯ ಬಸವೇಶ್ವರ ಕಾಲೊನಿ, ವಿಶ್ವೇಶ್ವರ ಕಾಲೊನಿ, ಆರ್.ಟಿ.ಒ ಕಚೇರಿ ಸುತ್ತಮುತ್ತ, ಮುಸ್ಲಿಂ ಗಲ್ಲಿ, ಮರಾಠಿಕೊಪ್ಪ, ದೇವಿಕೆರೆ, ದುಂಡಶಿನಗರ, ಕೋಟೆಕೆರೆ ಸುತ್ತಮುತ್ತ ಸೇರಿ ನಗರದ ಬಹುಕಡೆ ಚರಂಡಿಗಳು ತ್ಯಾಜ್ಯದಿಂದ ತುಂಬಿವೆ. ಇದರಿಂದ ಸೊಳ್ಳೆಗಳ ಉತ್ಪತ್ತಿ ವಿಪರೀತವಾಗಿದ್ದು, ಸಾಂಕ್ರಾಮಿಕ ರೋಗದ ಭೀತಿಯೂ ಎದುರಾಗಿದೆ. ಕೆಲವೆಡೆ ಚರಂಡಿ ನೀರು ಜಲಮೂಲಕ್ಕೆ ಸೇರುತ್ತಿದ್ದು, ಕುಡಿಯುವ ನೀರಿಗೂ ಸಮಸ್ಯೆ ಆಗುತ್ತಿದೆ.

‘ಮಾರಿಕಾಂಬಾ ಜಾತ್ರೆಯ ಸಂದರ್ಭದಲ್ಲಿ ಸ್ವಚ್ಛತೆ ಕಾರ್ಯಕ್ಕೆ 50 ಹೊರಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿದ್ದು, ಅವರನ್ನು ಸ್ವಚ್ಛತೆಗಾಗಿ ಬಳಸಿಕೊಳ್ಳಲಾಗುತ್ತಿದೆ. ನಿಗದಿತ ಸಮಯದೊಳಗೆ ಚರಂಡಿಗಳ ಸ್ವಚ್ಛತೆ ಮಾಡಲಾಗುವುದು’ ಎಂದು ಪೌರಾಯುಕ್ತ ಕಾಂತರಾಜ್ ಹೇಳಿದರು.

ಗೋಕರ್ಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಗಾಲ ಪೂರ್ವ ಕಾಮಗಾರಿ ಪ್ರಾರಂಭವಾಗಿಲ್ಲ. ಮಳೆ ನೀರು ಹೋಗಲು ಇರುವ ಚರಂಡಿ ಕಲ್ಲು, ಮಣ್ಣಿನಿಂದ ತುಂಬಿಕೊಂಡಿದೆ. ಚರಂಡಿ, ಸಮುದ್ರ ಸೇರುವ ಹಳ್ಳದ ಹೂಳೆತ್ತುವ ಕಾಮಗಾರಿಯನ್ನು ಇನ್ನೂ ಪ್ರಾರಂಭಿಸಿಲ್ಲ. ಮೇಲಿನಕೇರಿ, ಗಂಜಿಗದ್ದೆ, ರಥಬೀದಿ ಮುಂತಾದ ಕಡೆ ಚರಂಡಿ ಕಲ್ಲು, ಮಣ್ಣಿನಿಂದ ಮುಚ್ಚಿಹೋಗಿದೆ.

ಕೆಲ ದಿನಗಳ ಹಿಂದೆ ಬಂದ ಮಳೆಯೇ ಸಾಕಷ್ಟು ಅವಾಂತರ ಮಾಡಿತ್ತು. ರಥಬೀದಿಯಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿತ್ತು. ಅಷ್ಟೇ ಅಲ್ಲದೆ ಗುಡ್ಡದ ಮೇಲಿನಿಂದ ಹರಿದು ಬರುವ ನೀರು ಕಲ್ಲು, ಮಣ್ಣಿನೊಂದಿಗೆ ರಸ್ತೆಯ ಮೇಲೆ ಬಂದಿದೆ. ಆತ್ಮಲಿಂಗವೂ ಮಳೆಯ ರಾಡಿ ನೀರಿನಿಂದ ಮುಳುಗಿ ಭಕ್ತರಿಗೆ ಕೆಲವು ತಾಸುಗಳ ಕಾಲ ಪೂಜೆಗೆ ಅವಕಾಶ ಇಲ್ಲದಂತಾಗಿತ್ತು.

ಭಟ್ಕಳ ಪುರಸಭೆಯಿಂದ ಮಳೆಗಾಲ ಆರಂಭಕ್ಕೂ ಮುನ್ನ ಚರಂಡಿ ಹೂಳೆತ್ತಲ್ಲೂ ಕ್ರಮವಹಿಸಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ಪಟ್ಟಣದ ರಂಗಿನಕಟ್ಟೆ, ಶಂಸುದ್ದೀನ್ ಸರ್ಕಲ, ಕೊಕ್ತಿ, ಮಣ್ಕುಳಿ ಮುಂತಾದವುಗಳ ಕಡೆ ಮಳೆಗಾಲ ಒಂದೆರಡು ತಿಂಗಳ ಮೊದಲೇ ಚರಂಡಿ ಹೂಳೆತ್ತಿ ನೀರು ಹರಿದುಹೋಗಲು ಅನುವು ಮಾಡಿಕೊಡಲಾಗುತಿತ್ತು. ಆದರೆ ಈ ಬಾರಿ ಮೇ ಆರಂಭವಾದರೂ ಹೂಳೆತ್ತುವ ಕಾಮಗಾರಿ ಆರಂಭವಾಗಿಲ್ಲ ಎನ್ನುವುದು ಸಾರ್ವಜನಿಕರ ದೂರು.

ಕಳೆದ ಬಾರಿ ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ನೀರು ನಿಂತು ಅವ್ಯವಸ್ಥೆಗೆ ಕಾರಣವಾದ ರಂಗಿನಕಟ್ಟೆ ವೃತ್ತದಲ್ಲಿ ಇದುವರೆಗೂ ಸಮರ್ಪಕ ಚರಂಡಿ ವ್ಯವಸ್ಥೆ ಮಾಡಿಲ್ಲ.

ಮುಂಡಗೋಡ ಪಟ್ಟಣ ವ್ಯಾಪ್ತಿಯಲ್ಲಿ ಮಳೆಗಾಲದ ಮುಂಜಾಗೃತಾ ಕ್ರಮಗಳು ಅಷ್ಟಾಗಿ ನಡೆದಿಲ್ಲ. ಈ ವರ್ಷ ಬಹುತೇಕ ಅಧಿಕಾರಿ, ಸಿಬ್ಬಂದಿ ಚುನಾವಣೆಯ ಕೆಲಸದಲ್ಲಿ ನಿರತರಾಗಿದ್ದಾರೆ. ಒಂದೆರೆಡು ಬಾರಿ ಮಾತ್ರ ಪಟ್ಟಣದಲ್ಲಿ ಮಳೆಯಾಗಿದ್ದು ಬಿಟ್ಟರೇ, ಉಳಿದಂತೆ ಉರಿಬಿಸಿಲಿಗೆ ಜನರು ಹೈರಾಣಾಗಿದ್ದಾರೆ.

ಪಟ್ಟಣದ ಮುಖ್ಯ ರಸ್ತೆಗಳಾದ ಯಲ್ಲಾಪುರ-ಬಂಕಾಪುರ ಹಾಗೂ ಶಿರಸಿ-ಹುಬ್ಬಳ್ಳಿ ರಸ್ತೆಗಳ ಎಡಬಲ ಬದಿಯಲ್ಲಿರುವ ದೊಡ್ಡ ಚರಂಡಿಗಳ ಹೂಳು ತೆಗೆಯುವ ಕೆಲಸ ಬಾಕಿಯಿದೆ. ಕೆಲವೆಡೆ, ಚರಂಡಿ ಮೇಲಿರುವ ಕಲ್ಲುಗಳು ಚರಂಡಿಯಲ್ಲಿ ಬಿದ್ದು ಹೂತುಕೊಂಡಿವೆ. ಇನ್ನೂ ಕೆಲವೆಡೆ, ಕೆಲವರು ಕಲ್ಲು, ಮಣ್ಣಿನ ರಾಶಿ ಹಾಕಿದ್ದರಿಂದ ಚರಂಡಿ ಮುಚ್ಚಿಕೊಂಡಿವೆ.

ಅಂಕೋಲಾ ಪಟ್ಟಣ ವ್ಯಾಪ್ತಿಯಲ್ಲಿ ಬಹುತೇಕ ಕಡೆ ಚರಂಡಿ ಕಸ, ಹೂಳಿನಿಂದ ತುಂಬಿಕೊಂಡಿದೆ. ಮಳೆಗಾಲದ ಮುನ್ನೆಚ್ಚರಿಕೆ ಕಾರ್ಯಗಳು ವೇಗ ಪಡೆದುಕೊಂಡಿಲ್ಲ ಎಂಬ ದೂರುಗಳಿವೆ.

‘ಆದಷ್ಟು ಬೇಗ ಚರಂಡಿ ಹೂಳೆತ್ತಿಸುತ್ತೇವೆ’ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಹೇಳುತ್ತಾರೆ.

‘ದಾಂಡೇಲಿ ನಗರದ ಹಲವು ಕಡೆಯಲ್ಲಿ ವಾರ್ಡ್ ಸದಸ್ಯರ ಬೇಡಿಕೆಯ ಮೇರೆಗೆ ಚರಂಡಿ ಸ್ವಚ್ಛತೆ ಕೆಲಸ ಪ್ರಗತಿಯಲ್ಲಿದೆ’ ಎಂದು ಆರೋಗ್ಯ ಅಧಿಕಾರಿ ವಿಲಾಸ ದೇವಕರ ಮಾಹಿತಿ ನೀಡಿದರು.

‘ಮಳೆಗಾಲ ಪ್ರಾರಂಭವಾದ ನಂತರ ದೂರುಗಳು ಬಂದ ನಂತರ ಅರಣ್ಯ ಇಲಾಖೆ ಸಹಯೋಗದಲ್ಲಿ ತೆರವು ಮಾಡಲಾಗುವುದು‌’ ಎಂದು ತಿಳಿಸಿದರು.

ಗಣೇಶ ನಗರದಲ್ಲಿ ಚರಂಡಿ ಸ್ವಚ್ಛತೆ ಇಲ್ಲವಾಗಿದೆ. ರಸ್ತೆ ಸ್ವಚ್ಛತೆ ಮಾಡಲು ಪೌರಕಾರ್ಮಿಕರು ಬರುತ್ತಿಲ್ಲ ಎಂದು ಜನರು ದೂರಿದ್ದಾರೆ.

ಯಲ್ಲಾಪುರ ಪಟ್ಟಣ ಪಂಚಾಯಿತಿ ಮಳೆಗಾಲ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಚರಂಡಿ ಸ್ವಚ್ಛ ಗೊಳಿಸುವ ಕೆಲಸವನ್ನು ಭರದಿಂದ ನಡೆಸಿದೆ. ಆದರೆ ವಿದ್ಯುತ್‌ ಇಲಾಖೆ ವಿದ್ಯುತ್ ಲೈನ್ ಸಮೀಪದ ಟೊಂಗೆ ಕಟಾವು ಕೆಲಸ ಮಾಡಬೇಕಿದೆ. ಪಟ್ಟಣದ ಬಸ್ ನಿಲ್ಲಾಣದ ಹತ್ತಿರ ಹಾಗೂ ಎಪಿಎಂಸಿ ಮಾರ್ಗದಲ್ಲಿ ಬಹಳಷ್ಟು ಮರದ ಟೊಂಗೆಗಳು ವಿದ್ಯುತ್ ಲೈನ್ ತಾಕುವಂತಿದ್ದು, ಅವನ್ನು ಕಟಾವು ಮಾಡಬೇಕಿದೆ ಎಂಬುದು ಜನರ ಆಗ್ರಹ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷ ಕುಮಾರ ಹಬ್ಬು, ಶಾಂತೇಶ ಬೆನಕನಕೊಪ್ಪ, ಎಂ.ಜಿ.ಹೆಗಡೆ, ರವಿ ಸೂರಿ, ಮೋಹನ ನಾಯ್ಕ, ಪ್ರವೀಣಕುಮಾರ ಸುಲಾಖೆ, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.

ಶಿರಸಿ ನಗರದ ಆರ್.ಟಿ.ಒ ಕಚೇರಿ ಬಳಿ ಇರುವ ಚರಂಡಿ ಹೂಳು ಹಾಗೂ ಹುಲ್ಲಿನಿಂದ ತುಂಬಿರುವುದು
ಶಿರಸಿ ನಗರದ ಆರ್.ಟಿ.ಒ ಕಚೇರಿ ಬಳಿ ಇರುವ ಚರಂಡಿ ಹೂಳು ಹಾಗೂ ಹುಲ್ಲಿನಿಂದ ತುಂಬಿರುವುದು
ಹಳಿಯಾಳ ಪಟ್ಟಣದ ಕಿಲ್ಲಾ ಕೆರೆಯನ್ನು ಪುರಸಭೆ ಸಿಬ್ಬಂದಿ ಸ್ವಚ್ಚ ಗೊಳಿಸಿದರು.
ಹಳಿಯಾಳ ಪಟ್ಟಣದ ಕಿಲ್ಲಾ ಕೆರೆಯನ್ನು ಪುರಸಭೆ ಸಿಬ್ಬಂದಿ ಸ್ವಚ್ಚ ಗೊಳಿಸಿದರು.
ಯಲ್ಲಾಪುರದ ಬಸ್ ನಿಲ್ಲಾಣದ ಎದುರಿಗೆ ವಿದ್ಯುತ್ ತಂತಿಯ ಸುತ್ತಮುತ್ತ ಮರದ ಟೊಂಗೆಗಳು ಬೀಳುವ ಸ್ಥಿತಿಯಲ್ಲಿರುವುದು.
ಯಲ್ಲಾಪುರದ ಬಸ್ ನಿಲ್ಲಾಣದ ಎದುರಿಗೆ ವಿದ್ಯುತ್ ತಂತಿಯ ಸುತ್ತಮುತ್ತ ಮರದ ಟೊಂಗೆಗಳು ಬೀಳುವ ಸ್ಥಿತಿಯಲ್ಲಿರುವುದು.
ಮುಂಡಗೋಡ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆಯ ಮುಖ್ಯ ಚರಂಡಿಯಲ್ಲಿ ಸ್ವಚ್ಛತೆ ಮಾಡದಿರುವುದರಿಂದ ಚರಂಡಿ ನೀರು ಸಂಗ್ರಹಗೊಂಡಿರುವುದು.
ಮುಂಡಗೋಡ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆಯ ಮುಖ್ಯ ಚರಂಡಿಯಲ್ಲಿ ಸ್ವಚ್ಛತೆ ಮಾಡದಿರುವುದರಿಂದ ಚರಂಡಿ ನೀರು ಸಂಗ್ರಹಗೊಂಡಿರುವುದು.

ಮಳೆಗಾಲಕ್ಕೂ ಮುನ್ನ ಅಗತ್ಯ ಮುನ್ನೆಚ್ಚರಿಕೆ ಕಾಮಗಾರಿ ನಡೆಸಲು ಸೂಚನೆ ನೀಡಲಾಗಿದೆ

-ಗಂಗೂಬಾಯಿ ಮಾನಕರ ಜಿಲ್ಲಾಧಿಕಾರಿ

ಶಿರಸಿ ನಗರದಲ್ಲಿ ವರ್ಷದಿಂದ ಚರಂಡಿ ಸ್ವಚ್ಛತೆಯಿಲ್ಲ. ನಗರಸಭೆ ಈ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸುತ್ತಿದೆ

-ರಾಮೇಶ್ವರ ನಾಯ್ಕ ಶಿರಸಿ ನಿವಾಸಿ

ಮಣ್ಕುಳಿ ಭಾಗದಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ನೀರು ಚರಂಡಿ ತುಂಬಿ ಮನೆಗಳಿಗೆ ನುಗ್ಗುತ್ತದೆ. ಈ ಬಾರಿ ಮಳೆಗಾಲ ಹತ್ತಿರ ಬಂದರೂ ಪುರಸಭೆಯವರು ಚರಂಡಿ ಹೂಳೆತ್ತಲೂ ಬಂದಿಲ್ಲ

-ಸತೀಶ ನಾಯ್ಕ ಭಟ್ಕಳ ನಿವಾಸಿ

ಮುಂಡಗೋಡ ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ಮೂರು ತಿಂಗಳಾದರೂ ಚರಂಡಿ ಸ್ವಚ್ಛತೆ ಕೈಗೊಳ್ಳುವುದಿಲ್ಲ. ಮಳೆಗಾಲದಲ್ಲಿ ಬಂಕಾಪುರ ರಸ್ತೆಯಲ್ಲಿ ಅಸಮರ್ಪಕ ನಿರ್ವಹಣೆಯಿಂದ ಪ್ರತಿ ವರ್ಷ ಸಾರ್ವಜನಿಕರು ತೊಂದರೆ ಅನುಭವಿಸುತ್ತಾರೆ

-ಸಂತೋಷ ರಾಯ್ಕರ ಮುಂಡಗೋಡ ನಿವಾಸಿ

50 ಕಿ.ಮೀ ಹೂಳೆತ್ತಿದರು ಹಳಿಯಾಳ ಪುರಸಭೆ ವ್ಯಾಪ್ತಿಯಲ್ಲಿ ಮಾರ್ಚ್ ತಿಂಗಳಿನಿಂದಲೇ ಮಳೆಗಾಲದ ಪೂರ್ವಸಿದ್ಧತೆ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿರುವ 82 ಕಿ.ಮೀ ಉದ್ದದ ಚರಂಡಿಯ ಪೈಕಿ 50 ಕಿ.ಮೀ ಈಗಾಗಲೇ ಹೂಳೆತ್ತಲಾಗಿದೆ. ಚರಂಡಿಗಳ ಹೂಳೆತ್ತುವ ಕೆಲಸ ಮಂದಗತಿಯಿಂದ ಸಾಗಿದೆ ಎಂಬುದು ಜನರ ದೂರು. ‘ಪಟ್ಟಣದಲ್ಲಿ ಅಪಾಯಕಾರಿ ಮರಗಳ ಬಗ್ಗೆ ಜನರಿಂದ ದೂರು ಬಂದಿಲ್ಲ. ಸದ್ಯ ಚರಂಡಿ ಹೂಳೆತ್ತಲು ಆದ್ಯತೆ ನೀಡಲಾಗುತ್ತಿದೆ’ ಎಂದು ಪರಿಸರ ಎಂಜಿನಿಯರ್ ದರ್ಶಿತಾ ಬಿ.ಎಸ್ ಹೇಳಿದರು. ‘ಪಟ್ಟಣ ವ್ಯಾಪ್ತಿಯಲ್ಲಿ ಹಲವೆಡೆ ಮನೆಗಳ ಬಾಗಿಲ ಬಳಿಯೇ ಚರಂಡಿ ಇದ್ದು ಸರಿಯಾಗಿ ಹೂಳೆತ್ತಿಲ್ಲ. ಮಳೆ ಬಂದರೆ ನೀರು ಮನೆಗಳಿಗೆ ನುಗ್ಗುವ ಅಪಾಯವಿದೆ’ ಎಂದು ದೂರುತ್ತಾರೆ ಪಟ್ಟಣದ ನಿವಾಸಿ ಪ್ರಸಾದ ಕಮ್ಮಾರ.

‘ಸದಸ್ಯರೇ ಮುಂದೆ ನಿಂತು ಕೆಲಸ ಮಾಡಿಸಬೇಕು’ ಹೊನ್ನಾವರ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಮಳೆಗಾಲದ ಪೂರ್ವ ಸಿದ್ಧತಾ ಕಾರ್ಯಗಳು ಆಮೆಗತಿಯಲ್ಲಿ ಸಾಗಿವೆ. ಗಿಡ-ಗಂಟಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಕೂಡ ನಡೆಯದಿರುವುದರಿಂದ ವಿದ್ಯುತ್ ವ್ಯತ್ಯಯ ರಸ್ತೆ ಸಂಚಾರಕ್ಕೆ ಅಡಚಣೆ ಮೊದಲಾದ ಅವಘಡಗಳು ಮಳೆಗಾಲದಲ್ಲಿ ಎದುರಾಗಬಹುದು ಎಂಬುದು ಸಾರ್ವಜನಿಕರ ದೂರು. ‘ಸದಸ್ಯರೇ ಮುಂದೆ ನಿಂತು ತಮ್ಮ  ವಾರ್ಡ್‍ಗಳಲ್ಲಿ ಮಳೆಗಾಲದ ಪೂರ್ವ ಸಿದ್ಧತೆಯಾಗಿ ಸಿಬ್ಬಂದಿ ನೆರವಿನೊಂದಿಗೆ ಅಷ್ಟಿಷ್ಟು ಕೆಲಸ ಮಾಡಿಸಿಕೊಂಡಿದ್ದಾರೆ’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಶಿವರಾಜ ಮೇಸ್ತ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT