ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಬಾಡಿಗೆ ಕಟ್ಟಡದಲ್ಲಿ ದಿನದೂಡುವ ಮಹಿಳಾ ಕಾಲೇಜು

Published 16 ಮೇ 2024, 6:24 IST
Last Updated 16 ಮೇ 2024, 6:24 IST
ಅಕ್ಷರ ಗಾತ್ರ

ಕಾರವಾರ: ದಶಕದ ಹಿಂದೆ ಮಂಜೂರಾದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಈಗಲೂ ಬಾಡಿಗೆ ಕಟ್ಟಡಗಳನ್ನೇ ಅವಲಂಬಿಸಿ ನಡೆಯುತ್ತಿದೆ. ಮಂಜೂರಾದ ಸ್ವಂತ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.

ಜಿಲ್ಲೆಗೆ ಒಂದು ಸರ್ಕಾರಿ ಮಹಿಳಾ ಕಾಲೇಜ್ ಸ್ಥಾಪಿಸುವ ಉದ್ದೇಶದಿಂದ ಜಿಲ್ಲಾಕೇಂದ್ರ ಕಾರವಾರಕ್ಕೆ 2013–14ನೇ ಸಾಲಿನಲ್ಲಿ ಮಹಿಳಾ ಕಾಲೇಜ್ ಮಂಜೂರು ಮಾಡಲಾಗಿತ್ತು. ಆರಂಭದ ಎರಡು ವರ್ಷ ಬಿಣಗಾದ ಸೋಮನಾಥ ಪ್ರೌಢಶಾಲೆಯ ಕಟ್ಟಡದ ಒಂದು ಭಾಗದಲ್ಲಿ ನಡೆದ ಕಾಲೇಜನ್ನು 2015–16ರಲ್ಲಿ ಇಲ್ಲಿನ ಕುಂಠಿ ಮಹಮ್ಮಾಯಾ ದೇವಸ್ಥಾನದ ಬಳಿಯಲ್ಲಿದ್ದ ಹಳೆಯ ಬಿಇಒ ಕಚೇರಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು.

ಬಿಇಒ ಕಚೇರಿಯ ಮೂರು ಕೊಠಡಿಯ ಪೈಕಿ ಒಂದರಲ್ಲಿ ಕಚೇರಿ, ಇನ್ನೆರಡರಲ್ಲಿ ತರಗತಿ ನಡೆಸಲಾಗುತ್ತಿದೆ. ಇದಲ್ಲದೆ ಪಕ್ಕದಲ್ಲಿರುವ ನಗರಸಭೆಯ ಸಭಾಭವನ ಮತ್ತು ಎದುರಿನಲ್ಲಿರುವ ಮನೆಯೊಂದರ ಮೇಲ್ಮಹಡಿಯ ಮೂರು ಕೊಠಡಿ ಬಾಡಿಗೆ ಪಡೆದು ತರಗತಿ ನಿಭಾಯಿಸಲಾಗುತ್ತಿದೆ.

ಬಿ.ಎ, ಬಿ.ಕಾಂ ತರಗತಿಗಳು ಮಾತ್ರ ನಡೆಯುತ್ತಿದ್ದು, 2023–24ನೇ ಸಾಲಿನಲ್ಲಿ 147 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರ ಕೊರತೆಯ ಕಾರಣಕ್ಕೆ ಈವರೆಗೂ ಬಿ.ಎಸ್‍ಸಿ, ಬಿ.ಎಸ್. ಡಬ್ಲ್ಯೂ ವಿಭಾಗಗಳು ಕಾರ್ಯಾರಂಭ ಮಾಡಿಲ್ಲ. ಕಾಲೇಜಿನಲ್ಲಿ ಮೂವರು ಕಾಯಂ, 11 ಅತಿಥಿ ಉಪನ್ಯಾಸಕರಿದ್ದಾರೆ.

‘ಇಕ್ಕಟ್ಟಾಗಿರುವ ಕೊಠಡಿಗಳಲ್ಲಿ ಕುಳಿತು ಪಾಠ ಕೇಳುವ ಅನಿವಾರ್ಯತೆ ಇದೆ. ಕೆಲವೊಮ್ಮೆ ಮನೆಯೊಂದರ ಮೇಲಿನ ಮಹಡಿಯಲ್ಲಿರುವ ಕೊಠಡಿಯಲ್ಲಿಯೂ ತರಗತಿ ನಡೆಸಲಾಗುತ್ತಿದೆ. ಮನೆಯಲ್ಲಿರುವ ಕೊಠಡಿಯಲ್ಲಿ ಪಾಠ ಕೇಳುವುದು ಇರಿಸು ಮುರಿಸು ಉಂಟುಮಾಡುತ್ತದೆ. ಕಾಲೇಜಿನ ವಾತಾವರಣದ ಬದಲು ಮನೆಯಲ್ಲಿರುವಂತೆ ವಾತಾವರಣ ಇಲ್ಲಿದೆ. ಇದು ಕಲಿಕೆಗೆ ಅಡ್ಡಿಯುಂಟು ಮಾಡುತ್ತಿದೆ’ ಎಂದು ವಿದ್ಯಾರ್ಥಿನಿಯೊಬ್ಬರು ಸಮಸ್ಯೆ ಹೇಳಿಕೊಂಡರು.

‘ಹೆಣ್ಣು ಮಕ್ಕಳ ಶೈಕ್ಷಣಿಕ ನೆರವಿಗೆ ಕೋಟ್ಯಂತರ ಖರ್ಚು ಮಾಡುವ ಸರ್ಕಾರಕ್ಕೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ದುಸ್ಥಿತಿ ಕಣ್ಣಿಗೆ ಗೋಚರಿಸುತ್ತಿಲ್ಲವೆ?’ ಎಂದು ಪ್ರಶ್ನಿಸುತ್ತಾರೆ ಸಾಮಾಜಿಕ ಕಾರ್ಯಕರ್ತ ಸಂತೋಷ ನಾಯ್ಕ.

‘ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತರಗತಿ ಕೊಠಡಿಗೆ ಕಟ್ಟಡದಿಂದ ಕಟ್ಟಡಕ್ಕೆ ಅಲೆದಾಡುವ ಸ್ಥಿತಿ ತಂದಿಡಲಾಗಿದೆ. ಅದರ ಬದಲು ಹೊಸ ಕಟ್ಟಡ ಪೂರ್ಣಗೊಳಿಸಿ ಅಲ್ಲಿಯೇ ತರಗತಿ ನಡೆಸಲು ಅನುಕೂಲ ಮಾಡಿಕೊಡಬೇಕು’ ಎಂದು ಅವರು ಒತ್ತಾಯಿಸಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ತರಗತಿ ನಡೆಯುವ ನಗರಸಭೆ ಸಭಾಭವನದ ಮೊದಲ ಮಹಡಿ
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ತರಗತಿ ನಡೆಯುವ ನಗರಸಭೆ ಸಭಾಭವನದ ಮೊದಲ ಮಹಡಿ
ಕಾರವಾರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ
ಕಾರವಾರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ
ಕಾಲೇಜಿಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪಾಲಿಟೆಕ್ನಿಕ್ ಕಾಲೇಜಿಗೆ ಹೊಂದಿಕೊಂಡ ಜಾಗದಲ್ಲಿ ಹೊಸ ಕಟ್ಟಡ ಮಂಜೂರಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಪ್ರತ್ಯೇಕ ಹಾಸ್ಟೆಲ್ ಹೆಣ್ಣುಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕೋಟ್ಯಂತರ ರೂಪಾಯಿ ಅನುದಾನ ಮಂಜೂರಾಗಿದೆ
ವಿ.ಎಂ. ನಾಯ್ಕ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ
ಬಿಸಿಎ ಆರಂಭಿಸಲು ತಯಾರಿ
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ 2024–25ನೇ ಸಾಲಿನಿಂದ ಬಿ.ಸಿ.ಎ (ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್) ವಿಭಾಗ ಆರಂಭಿಸಲು ಸಿದ್ಧತೆ ನಡೆದಿದೆ. ‘ಬಿ.ಸಿ.ಎ ವಿಭಾಗಕ್ಕೆ ಹೆಚ್ಚು ಬೇಡಿಕೆ ಬರುತ್ತಿದೆ. ಹೀಗಾಗಿ ಈ ಕೋರ್ಸ್ ಆರಂಭಿಸಲು ವಿಶ್ವವಿದ್ಯಾಲಯದಿಂದ ಅನುಮತಿ ಸಿಕ್ಕಿದೆ. ಕಾಲೇಜು ಶಿಕ್ಷಣ ಇಲಾಖೆಯ ಅನುಮತಿಗೆ ಕಾಯತ್ತಿದ್ದೇವೆ. 10ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರು ಪ್ರವೇಶಾತಿ ಪಡೆದರೆ ಬಿ.ಎಸ್.ಡಬ್ಲ್ಯೂ ಬಿ.ಎಸ್‍ಸಿ ತರಗತಿಯೂ ಆರಂಭಗೊಳ್ಳಲಿದೆ. ಇವುಗಳ ಹೊರತಾಗಿ ವಿದ್ಯಾರ್ಥಿನಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಒದಗಿಸಲಾಗುತ್ತಿದೆ’ ಎಂದು ಪ್ರಾಚಾರ್ಯ ವಿ.ಎಂ. ನಾಯ್ಕ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT