ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ | ಕಾಂಗ್ರೆಸ್ ಮುಸ್ಲಿಂ ಲೀಗ್‌ನ ವಿಸ್ತರಣೆ: ತೇಜಸ್ವಿ ಸೂರ್ಯ

ಹೊಸಪೇಟೆಯಲ್ಲಿ ಬಿಜೆಪಿ ಯುವಮೋರ್ಚಾದಿಂದ 'ನವಭಾರತ ನಿರ್ಮಾಣಕ್ಕಾಗಿ ಯುವ ಸಂಕಲ್ಪ ಸಮಾವೇಶ’
Published 4 ಮೇ 2024, 16:23 IST
Last Updated 4 ಮೇ 2024, 16:23 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನೂರಕ್ಕೂ ಅಧಿಕ ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷ ವಯನಾಡಿನಲ್ಲಿ ಮುಸ್ಲಿಂ ಲೀಗ್‌ನ ಒತ್ತಾಯಕ್ಕೆ ಮಣಿದು ತನ್ನ ಸ್ವಂತ ಬಾವುಟ, ಚಿಹ್ನೆಯನ್ನೇ ಕೈಬಿಡುತ್ತದೆ, ಸಂಪೂರ್ಣ ಮಂಡಿಯೂರುತ್ತದೆ. ತುಷ್ಟೀಕರಣವನ್ನೇ ಉಸಿರಾಗಿಸಿಕೊಂಡಿರುವ ಕಾಂಗ್ರೆಸ್‌ ಇಂದು ಮುಸ್ಲಿಂ ಲೀಗ್‌ನ ವಿಸ್ತರಣೆ ಆಗಿ ಮಾತ್ರ ಉಳಿದುಕೊಂಡಿದೆ ಎಂದು ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಟೀಕಿಸಿದರು.

ಇಲ್ಲಿ ಶನಿವಾರ ರಾತ್ರಿ ಯುವಮೋರ್ಚಾ ಹಮ್ಮಿಕೊಂಡಿದ್ದ 'ನವಭಾರತ ನಿರ್ಮಾಣಕ್ಕಾಗಿ ಯುವ ಸಂಕಲ್ಪ ಸಮಾವೇಶ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತನ್ನ ಸ್ವಂತ ಚಿಹ್ನೆ, ಬಾವುಟವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದ ಕಾಂಗ್ರೆಸ್‌ಗೆ ದೇಶದ ಮಹಿಳೆಯರನ್ನು ರಕ್ಷಿಸುವುದು ಸಾಧ್ಯವಿದೆಯೇ ಎಂದು ಕುಟುಕಿದರು.

ಮಕ್ಕಳ ಭವಿಷ್ಯ: ರಾಜ್ಯದಲ್ಲಿ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ಮಗ, ಮಗಳು, ಸೊಸೆಯಂದಿರ ಭವಿಷ್ಯ ರೂಪಿಸುವ ಸಲುವಾಗಿ ಈ ಬಾರಿ ಕಣಕ್ಕೆ ಇಳಿಸಿದ್ದಾರೆ. ಅವರಿಗೆ ಸ್ವಂತ ವರ್ಚಸ್ಸು ಇಲ್ಲ ಮತ್ತು ಯಾವುದೇ ಕೆಲಸವನ್ನೂ ಅವರು ಮಾಡಿಲ್ಲ. ನೀವು ಕಾಂಗ್ರೆಸ್‌ಗ ಮತ ಹಾಕಿ ಈ ಮಕ್ಕಳ ಭವಿಷ್ಯ ರೂಪಿಸುತ್ತೀರೋ, ಬಿಜೆಪಿಗೆ ಮತ ಹಾಕಿ 25 ವರ್ಷಗಳ ಬಳಿಕದ ಭಾರತದ ಭವಿಷ್ಯ ರೂಪಿಸುತ್ತೀರೋ ನಿರ್ಧರಿಸಿ’ ಎಂದು ತೇಜಸ್ವಿ ಸೂರ್ಯ ಮಾರ್ಮಿಕವಾಗಿ ನುಡಿದರು.

‘ಮೋದಿ ಆಡಳಿತ ಅವಧಿಯಲ್ಲಿ 25 ಕೋಟಿ ಮಂದಿ ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ. ವೈದ್ಯಕೀಯ ಕಾಲೇಜುಗಳು, ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆಯ ಶಾಖೆಗಳ ನಿರ್ಮಾಣದಲ್ಲಿ ದಾಖಲೆಯೇ ಸೃಷ್ಟಿಯಾಗಿದೆ. ದೇಶದಲ್ಲಿ ಸಾವಿರಾರು ಸ್ಟಾರ್ಟ್ಅಪ್‌ಗಳು ಸ್ಥಾಪನೆಯಾಗುವ ಮೂಲಕ ಸಾವಿರಾರು ಯುವಕರು ಸ್ವಂತ ಕಾಲ ಮೇಲೆ ನಿಂತಿದ್ದಾರೆ, ಲಕ್ಷಾಂತರ ಉದ್ಯೋಗವೂ ಸೃಷ್ಟಿಯಾಗಿದೆ’ ಎಂದರು.

ಮೇ 7ರಂದು ಬೆಳಿಗ್ಗೆ 7ಗಂಟೆಗೇ ಮತದಾರರು ಸರದಿಯಲ್ಲಿ ನಿಂತು ದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸಬೇಕು ಹಾಗೂ ಮಧ್ಯಾಹ್ನ 12.30ರ ಮೊದಲು ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸುವ ರೀತಿಯಲ್ಲಿ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದರು.

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ  ಮೈಸೂರಿನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಬಲಿಷ್ಠ ಭಾರತ ನಿರ್ಮಿಸಲು ಮೋದಿ ಕೈ ಬಲಪಡಿಸುವ ಅಗತ್ಯ ಇದೆ ಎಂದರು.

ಹೂವಿನಹಡಗಲಿ ಬಿಜೆಪಿ ಶಾಸಕ ಕೃಷ್ಣ ನಾಯ್ಕ, ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಳೆಕಾಯಿ, ಯುವ ಮೋರ್ಚಾ ರಾಜ್ಯ ಖಜಾಂಚಿ ಸಿದ್ಧಾರ್ಥ ಸಿಂಗ್‌, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಿಚಡಿ ಕೊಟ್ರೇಶ್‌ ಇತರರು ಮಾತನಾಡಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್‌, ಮುಖಂಡರಾದ ಬಲ್ಲಾಹುಣ್ಸಿ ರಾಮಣ್ಣ, ಅಯ್ಯಾಳಿ ತಿಮ್ಮಪ್ಪ, ಶಂಕರ ಮೇಟಿ, ಸಾಲಿ ಸಿದ್ದಯ್ಯಸ್ವಾಮಿ ಇತರರು ಇದ್ದರು

ಇದಕ್ಕೆ ಮೊದಲು ನಗರದ ರಾಮಾ ಟಾಕೀಸ್ ಬಳಿಯಿಂದ ವೆಂಕಟೇಶ್ವರ ಕಲ್ಯಾಣ ಮಂಟಪದವರೆಗೆ ರೋಡ್ ಶೋ ನಡೆಯಿತು.

ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ
ಪ್ರಧಾನಿ ಮೋದಿ ಅವರು 12 ಕೋಟಿ ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಹೀಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಚೊಂಬು ಹಿಡಿದು ಓಡಾಡುತ್ತಿರುವುದು ಏಕೆ?
ತೇಜಸ್ವಿ ಸೂರ್ಯ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT