ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿ ಸರ್ಕಾರದಿಂದ ಕಟ್ಟಡ ಕಾರ್ಮಿಕರಿಗೆ ಅಪಾಯ’

Published 15 ಏಪ್ರಿಲ್ 2024, 15:56 IST
Last Updated 15 ಏಪ್ರಿಲ್ 2024, 15:56 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕೇಂದ್ರದ ಮೋದಿ ಸರ್ಕಾರ ಕಟ್ಟಡ ಕಾರ್ಮಿಕ ಕಾಯ್ದೆಗಳನ್ನು ರದ್ದುಮಾಡಲು ಹೊರಟಿದೆ. ಇದರ ವಿರುದ್ಧ ಕಾರ್ಮಿಕರು ಎಚ್ಚೆತ್ತುಕೊಂಡಿದ್ದು, ಈ ಬಾರಿ ಎನ್‌ಡಿಎ ವಿರುದ್ಧ ಮತ ಚಲಾಯಿಸುವಂತೆ ಅವರ ಮನವೊಲಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ ನಿರ್ಮಾಣ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರು ಮತ ಚಲಾಯಿಸಲಿದ್ದಾರೆ. ಮೋದಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಹಲವು ಕಾರ್ಮಿಕ ವಿರೋಧಿ ನೀತಿಗಳನ್ನು ತಳೆದಿದ್ದು, ಬೀಡಿ, ಸಿನಿಮಾ, ಗಣಿ ಕಾರ್ಮಿಕರ ಕಲ್ಯಾಣ ಮಂಡಳಿಗಳನ್ನು ರದ್ದುಪಡಿಸಿದೆ. ಮುಂದಿನ ಬಾರಿಯೂ ಇದೇ ಸರ್ಕಾರ ರಚನೆಯಾದರೆ 1996ರ ಕಟ್ಟಡ ಕಾರ್ಮಿಕರ ಕಾನೂನು  ಮತ್ತು ಸೆಸ್‌ ಕಾನೂನುಗಳು ರದ್ದಾಗುವ ಅಪಾಯ ಇದೆ. ಹೀಗಾಗಿ ಚಿಕ್ಕಬಳ್ಳಾಪುರದಲ್ಲಿ ಸಿಪಿಎಂ ಅಭ್ಯರ್ಥಿಗೆ ಹಾಗೂ ರಾಜ್ಯದ ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ನಿರ್ಧಾರಕ್ಕೆ ಭಾರತೀಯ ನಿರ್ಮಾಣ ಕಾರ್ಮಿಕರ ಫೆಡರೇಷನ್‌ (ಸಿಡಬ್ಲ್ಯುಎಫ್‌ಐ) ಬಂದಿದೆ ಎಂದರು.

1926ರ ಇಂಡಿಯಾ ಟ್ರೇಡ್ ಯೂನಿಯನ್ ಕಾಯ್ದೆ ತಿದ್ದುಪಡಿಯ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರು 10 ಕಾರ್ಮಿಕ ಕಾನೂನುಗಳನ್ನು ಜಾರಿಗೆ ತಂದಿದ್ದರು. ಹಲವಾರು ಹೋರಾಟಗಳ ನಂತರ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಕಳೆದ 17 ವರ್ಷಗಳಿಂದ ರಾಜ್ಯದಲ್ಲಿ ಕಾರ್ಯ ಮಾಡುತ್ತಿದೆ. ಇದರಿಂದ ಬಹಳಷ್ಟು ಪ್ರಯೋಜನ ಸಿಗುತ್ತಿದೆ. ಈ ಮಂಡಳಿಯನ್ನೇ ರದ್ದುಪಡಿಸಲು ಕೇಂದ್ರ ಹುನ್ನಾರ ನಡೆಸಿರುವುದರಿಂದ ಕಾರ್ಮಿಕರು ಮತ ಚಲಾಯಿಸುವ ಮೊದಲು ಸರಿಯಾಗಿ ಚಿಂತಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕಲ್ಯಾಣ ಮಂಡಳಿ ಹಣ ದುರ್ಬಳಕೆ: ‘ಈ ಹಿಂದಿನ ರಾಜ್ಯದ ಬಿಜೆಪಿ ಸರ್ಕಾರ ಕಾರ್ಮಿಕ ಕಲ್ಯಾಣ ಮಂಡಳಿಯ ₹ 5 ಸಾವಿರ ಕೋಟಿ ಹಣವನ್ನು ದುರ್ಬಳಕೆ ಮಾಡಿದೆ. ನೋಟು ರದ್ದತಿ ಮತ್ತು ಜಿಎಸ್‌ಟಿ ಅನ್ಯಾಯಗಳಿಂದ ನಿರ್ಮಾಣ ಚಟುವಟಿಕೆಗೆ ಭಾರಿ ಪೆಟ್ಟು ಬಿದ್ದಿದೆ. ಕಾರ್ಮಿಕ ಜೀವದ ಜತೆಗೆ ಚೆಲ್ಲಾಟವಾಡುತ್ತಿರುವ ನಿರ್ಮಾಣ ಕಂಪನಿಗಳಿಂದಲೇ ಬಿಜೆಪಿಗೆ ಚುನಾವಣಾ ಬಾಂಡ್ ರೂಪದಲ್ಲಿ ಸಾವಿರಾರು ಕೋಟಿ ಹಣ ಸಂದಾಯವಾಗಿದೆ. ಯುದ್ಧಪೀಡಿತ ಪ್ರದೇಶಗಳಿಗೆ ದೇಶದ ಬಡ ಕಾರ್ಮಿಕರನ್ನು ಕಳುಹಿಸುವ ದಂಧೆಯೂ ನಡೆಯುತ್ತಿದೆ. ಇದೆಲ್ಲವನ್ನೂ ಗಮನಿಸಿ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರು ಎನ್‌ಡಿಎ ಅಭ್ಯರ್ಥಿಗಳಿಗೆ ಮತ ಚಲಾಯಿಸದಂತೆ ತಿಳಿವಳಿಕೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಫೆಡರೇಷನ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್‌.ಯಲ್ಲಾಲಿಂಗ, ಸಿಪಿಎಂ ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ರೆಡ್ಡಿ, ಫೆಡರೇಷನ್‌ನ ಶಬ್ಬೀರ್, ಕೃಷ್ಣ, ಕರಿಯಣ್ಣ ಇದ್ದರು.

ಈ ಬಾರಿ ಕೇಂದ್ರದ ಎನ್‌ಡಿಎ ಸರ್ಕಾರವನ್ನು ಸೋಲಿಸಲೇಬೇಕು ಎಂದು ಕಟ್ಟಡ ಕಾರ್ಮಿಕರಿಗೆ ಕರೆ ನೀಡುವ ಭಿತ್ತಿಫಲಕವನ್ನು ಹೊಸಪೇಟೆಯಲ್ಲಿ ಸೋಮವಾರ ಕೆ.ಮಹಾಂತೇಶ್ ಬಿಡುಗಡೆ ಮಾಡಿದರು  –ಪ್ರಜಾವಾಣಿ ಚಿತ್ರ
ಈ ಬಾರಿ ಕೇಂದ್ರದ ಎನ್‌ಡಿಎ ಸರ್ಕಾರವನ್ನು ಸೋಲಿಸಲೇಬೇಕು ಎಂದು ಕಟ್ಟಡ ಕಾರ್ಮಿಕರಿಗೆ ಕರೆ ನೀಡುವ ಭಿತ್ತಿಫಲಕವನ್ನು ಹೊಸಪೇಟೆಯಲ್ಲಿ ಸೋಮವಾರ ಕೆ.ಮಹಾಂತೇಶ್ ಬಿಡುಗಡೆ ಮಾಡಿದರು  –ಪ್ರಜಾವಾಣಿ ಚಿತ್ರ

ಗೆಲ್ಲುವ ಸಾಧ್ಯತೆ ಇರುವವರಿಗೆ ಬೆಂಬಲ

‘ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಎಸ್‌ಯುಸಿಐ ಅಭ್ಯರ್ಥಿ ಕಣದಲ್ಲಿದ್ದಾರೆ. ಅವರು ಗಣನೀಯ ಮತ ಗಳಿಸುವ ನಿರೀಕ್ಷೆ ಇಲ್ಲ. ಹೀಗಾಗಿ ಕಟ್ಟಡ ಕಾರ್ಮಿಕರು ಅವರಿಗೆ ಬೆಂಬಲವಾಗಿ ನಿಂತಿಲ್ಲ. ಚಿಕ್ಕಬಳ್ಳಾಪುರದಲ್ಲಿ ಸಿಪಿಎಂ ಅಭ್ಯರ್ಥಿ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಇರುವ ಕಾರಣ ಅವರಿಗೆ ಬೆಂಬಲ ಘೋಷಿಸಲಾಗಿದೆ. ಉಳಿದ 27 ಜಿಲ್ಲೆಗಳಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳಿಗೆ ತಕ್ಕ ಉತ್ತರ ಕೊಡುವ ಸಾಮರ್ಥ್ಯ ಇರುವುದು ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮಾತ್ರ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಕಟ್ಟಡ ಕಾರ್ಮಿಕರ ಬೆಂಬಲ ಕೋರಲಾಗಿದೆ’ ಎಂದು ಮಹಾಂತೇಶ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT