ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಅನ್ನಪೂರ್ಣೇಶ್ವರಿ ವಿದ್ಯಾಪೀಠ ಶಾಲೆಯನ್ನು ದತ್ತು ಪಡೆದ ಗೀತಾ ಶಿವರಾಜಕುಮಾರ್‌

Published 11 ಮೇ 2023, 16:15 IST
Last Updated 11 ಮೇ 2023, 16:15 IST
ಅಕ್ಷರ ಗಾತ್ರ

ಹೊಸಪೇಟೆ: ಗೀತಾ ಶಿವರಾಜಕುಮಾರ್‌ ಅವರು ತಾಲ್ಲೂಕಿನ ಇಂಗಳಗಿ ಸಮೀಪದ ಅನ್ನಪೂರ್ಣೇಶ್ವರಿ ವಿದ್ಯಾಪೀಠ ಉಚಿತ ವಸತಿಯುತ ಪ್ರೌಢಶಾಲೆಯನ್ನು ದತ್ತು ತೆಗೆದುಕೊಂಡಿದ್ದಾರೆ.

ಸಂಡೂರು ತಾಲ್ಲೂಕಿನ ಜೋಗದ ದಿಗಂಬರ ರಾಜಭಾರತಿ ಸ್ವಾಮೀಜಿ 2012ರಲ್ಲಿ ಈ ಶಾಲೆ ಆರಂಭಿಸಿದ್ದರು. ಆದರೆ, ಅನುದಾನದ ಕೊರತೆಯಿಂದ ಶಾಲೆ ಮೂಲಸೌಕರ್ಯದಿಂದ ವಂಚಿತವಾಗಿತ್ತು. ಅದರ ಪ್ರಗತಿ ಕುಂಠಿತಗೊಂಡಿತ್ತು. ಕೆಲ ತಿಂಗಳ ಹಿಂದೆ ‘ವೇದ’ ಸಿನಿಮಾದ ಪ್ರಚಾರಕ್ಕಾಗಿ ನಗರಕ್ಕೆ ಬಂದಿದ್ದ ನಟ ಶಿವರಾಜಕುಮಾರ್‌ ಹಾಗೂ ಅವರ ಪತ್ನಿ ಗೀತಾ ಅವರ ಗಮನಕ್ಕೆ ಶಾಲೆಯ ವಿಚಾರ ತರಲಾಗಿತ್ತು. ಬಳಿಕ ಇಬ್ಬರೂ ಅಲ್ಲಿಗೆ ಭೇಟಿ ನೀಡಿ, ಶಾಲೆ ದತ್ತು ಪಡೆಯುವ ಭರವಸೆ ಕೊಟ್ಟಿದ್ದರು.

ಕೊಟ್ಟ ಮಾತಿನಂತೆ ಗೀತಾ ಅವರು ಗುರುವಾರ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಶಾಲೆ ದತ್ತು ತೆಗೆದುಕೊಳ್ಳುವುದಾಗಿ ಘೋಷಿಸಿದರು. ಶೀಘ್ರದಲ್ಲೇ ಟ್ರಸ್ಟ್‌ ರಚಿಸಿ, ಪದಾಧಿಕಾರಿಗಳನ್ನು ನೇಮಕ ಮಾಡಿ, ಶಾಲೆಯ ಅಭಿವೃದ್ಧಿಗೆ ಕ್ರಮ ಜರುಗಿಸಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ ಎಂದು ಸಿನಿಮಾ ಪತ್ರಕರ್ತ ಸತೀಶ್‌ ಬಿಲ್ಲಾಡಿ ತಿಳಿಸಿದರು. ಗೀತಾ ಅವರು ಮಾಧ್ಯಮದವರೊಂದಿಗೆ ಮಾತಾಡಲು ನಿರಾಕರಿಸಿದರು.

8 ರಿಂದ 10ನೇ ತರಗತಿಯ ಕನ್ನಡ ಶಾಲೆಯಲ್ಲಿ ಪ್ರಯೋಗಾಲಯ, ಗ್ರಂಥಾಲಯ, ಸುಸಜ್ಜಿತವಾದ ಆಟದ ಮೈದಾನ ನಿರ್ಮಿಸಿ, ಉತ್ತಮ ವಿದ್ಯಾಭ್ಯಾಸಕ್ಕಾಗಿ ಅಗತ್ಯ ಸೌಕರ್ಯ ಕಲ್ಪಿಸುವ ಭರವಸೆ ಕೊಟ್ಟಿದ್ದಾರೆ. ಹೊಸ ಸಿಬ್ಬಂದಿಯನ್ನು ನೇಮಕ ಮಾಡಿದ್ದಾರೆ. ಶಾಲೆಯ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಎಂದು ಸತೀಶ್‌ ಮಾಹಿತಿ ನೀಡಿದ್ದಾರೆ. ಶಿವರಾಜಕುಮಾರ್‌ ಕೂಡ ಶಾಲೆಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಕೊನೆ ಕ್ಷಣದಲ್ಲಿ ರದ್ದಾಗಿದೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT