ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಮದೇವತೆ ಜಾತ್ರೆಗೆ ಸಜ್ಜಾದ ಹೂವಿನಹಡಗಲಿ

ದೇವಸ್ಥಾನ, ಪ್ರಮುಖ ಬೀದಿಗಳಲ್ಲಿ ವಿದ್ಯುದ್ದೀಪಾಲಂಕಾರ
ಕೆ. ಸೋಮಶೇಖರ್
Published 21 ಮೇ 2024, 4:49 IST
Last Updated 21 ಮೇ 2024, 4:49 IST
ಅಕ್ಷರ ಗಾತ್ರ

ಹೂವಿನಹಡಗಲಿ: ಆರಾಧ್ಯದೈವ ಊರಮ್ಮ ದೇವಿ ಜಾತ್ರೆಗೆ ಪಟ್ಟಣ ಸಜ್ಜುಗೊಂಡಿದೆ. ಎಲ್ಲೆಡೆ ವಿದ್ಯುತ್ ದೀಪಾಲಂಕಾರ, ತಳಿರು ತೋರಣಗಳಿಂದ ಸಿಂಗರಿಸಲಾಗಿದೆ.

ಮೇ 14ರಂದು ಉಕ್ಕಡ ಕಾಯುವ ಆಚರಣೆಯೊಂದಿಗೆ ಜಾತ್ರೆ ಆರಂಭವಾಗಿದ್ದು, ಮೇ 21ರಂದು ಮಧ್ಯಾಹ್ನ ದೇವಿಗೆ ದೃಷ್ಟಿ ಇಡುವ ಸಾಂಪ್ರದಾಯಿಕ ಕಾರ್ಯಕ್ರಮದೊಂದಿಗೆ ಜಾತ್ರೆಯ ಪ್ರಮುಖ ಧಾರ್ಮಿಕ ಆಚರಣೆಗಳಿಗೆ ವಿಧ್ಯುಕ್ತ ಚಾಲನೆ ದೊರೆಯಲಿದೆ. 28ರವರೆಗೂ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ಊರಮ್ಮ ದೇವಸ್ಥಾನವನ್ನು 1912ರಲ್ಲಿ ಎಡ್ವರ್ಡ್ ಏಳನೇ ಮಹಾಚಕ್ರವರ್ತಿ ಜ್ಞಾಪಕಾರ್ಥ ನಿರ್ಮಿಸಲಾಗಿದೆ. ಮಳೆ, ಬೆಳೆ ಸಮೃದ್ಧಿ, ಆರೋಗ್ಯ, ನೆಮ್ಮದಿಗಾಗಿ ಪ್ರಾರ್ಥಿಸಿ ನೂರಾರು ವರ್ಷಗಳಿಂದ ದೇವಿಜಾತ್ರೆ ಆಚರಿಸಲಾಗುತ್ತಿದೆ.

ಸಂಪ್ರದಾಯದಂತೆ ಮುಸ್ಲಿಂ ಸಮುದಾಯದ ಬಾಣದ ಕುಟುಂಬದವರು ದೇವಸ್ಥಾನ ಮುಂಭಾಗ ಹಂದರ ಹಾಕಿ ಪೂಜಿಸುತ್ತಾರೆ. ಗೌಡ್ರು, ಶ್ಯಾನಭೋಗರು, ಹರಿಜನರು ಸೇರಿದಂತೆ ಐದು ಸಮುದಾಯದವರು ದೇವಿ ಸನ್ನಿಧಾನದಲ್ಲಿ ಪಂಚ ಕಳಸ ಪ್ರತಿಷ್ಠಾಪಿಸುತ್ತಾರೆ. ಈಡಿಗ ಕುಟುಂಬದವರು ದೇವಿಗೆ ಮೊದಲ ಸೀರೆ ಅರ್ಪಿಸುತ್ತಾರೆ. ಮೇದಾರರು, ಕುಂಬಾರರು ಜಾತ್ರೆಗೆ ಅಗತ್ಯವಿರುವ ಪರಿಕರಗಳ ಸೇವೆ ಸಲ್ಲಿಸುತ್ತಾರೆ. ಹೀಗೆ ಎಲ್ಲ ವರ್ಗದವರು ಸೇರಿ ಸೌಹಾರ್ದದಿಂದ ಜಾತ್ರೆ ಆಚರಿಸುತ್ತಾರೆ.

ದೇವಿಗೆ ತಪ್ಪು ಕಾಣಿಕೆ ಸಲ್ಲಿಸಿದ್ದ ಬ್ರಿಟಿಷ್ ಅಧಿಕಾರಿ: ‘ಈ ಹಿಂದೆ ದೇವಸ್ಥಾನದಲ್ಲಿ ದೈವಸ್ಥರು, ಪುರ ಜನರು ಜಾತ್ರಾ ಸಭೆ ನಡೆಸಿದ್ದ ವೇಳೆ ಬ್ರಿಟಿಷ್ ಅಧಿಕಾರಿ ಶೂ ಧರಿಸಿಯೇ ದೇವಸ್ಥಾನ ಪ್ರವೇಶಿಸಿದ್ದರಂತೆ. ಜನರು ಶೂ ಕಳಚುವಂತೆ ತಿಳಿಸಿದರೂ ಕಿವಿಗೊಡದೇ ಸಭೆಯಲ್ಲಿದ್ದವರ ಮೇಲೆ ದರ್ಪ ಪ್ರದರ್ಶಿಸಿ, ದೇವಿಯನ್ನೂ ನಿಂದಿಸಿದ್ದರಂತೆ. ಕೆಲ ಹೊತ್ತಿನಲ್ಲಿ ಆ ಅಧಿಕಾರಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ದೇವಸ್ಥಾನದಲ್ಲೇ ಕುಸಿದು ಬಿದ್ದು, ದೃಷ್ಟಿ ಕಳೆದುಕೊಂಡಿದ್ದರಂತೆ. ದೈವಸ್ಥರ ಸಲಹೆಯಂತೆ ಅಧಿಕಾರಿಯ ಪತ್ನಿ ದೇವಸ್ಥಾನಕ್ಕೆ ಬಂದು ಪತಿಯ ತಪ್ಪು ಮನ್ನಿಸುವಂತೆ ದೇವಿಯಲ್ಲಿ ಪ್ರಾರ್ಥಿಸಿ, ತಪ್ಪು ಕಾಣಿಕೆ ಸಲ್ಲಿಸಿದ ಬಳಿಕ ಅಧಿಕಾರಿಗೆ ದೃಷ್ಟಿ ಮರಳಿದ ಪವಾಡ ನಡೆದಿದೆ’ ಎಂದು ಹೇಳುತ್ತಾರೆ ಇಲ್ಲಿನ ಜನರು.

‘ಜಾತ್ರೆಯಲ್ಲಿ ಊರ ದೇವಿಗೆ ಪೊಲೀಸರು ಸಕಲ ಗೌರವಗಳೊಂದಿಗೆ ಪೂಜೆ ಸಲ್ಲಿಸಬೇಕು ಎಂದು ಬ್ರಿಟಿಷ್ ಅಧಿಕಾರಿ ಆದೇಶ ಹೊರಡಿಸಿದರು. ಅಂದಿನಿಂದ ಇಂದಿಗೂ ಜಾತ್ರೆಯ ಒಂದು ದಿನ ಪೊಲೀಸ್ ಠಾಣೆಯಲ್ಲೇ ದೇವಿಗೆ ಪೂಜೆ ನೆರವೇರುತ್ತದೆ’ ಎಂದು ಶಿಲ್ಪಿ ಜಿ.ಬಿ. ಹಂಸಾನಂದಾಚಾರ್ಯ ತಿಳಿಸಿದರು.

ಈ ಬಾರಿ ಒಂಭತ್ತು ವರ್ಷಕ್ಕೆ ಜಾತ್ರೆ ಆಚರಿಸುವುದರಿಂದ ಸಂಭ್ರಮ ಹೆಚ್ಚಾಗಿದೆ. ಧಾರ್ಮಿಕ ಕಾರ್ಯಗಳ ಜತೆಗೆ ಸಾಂಸ್ಕೃತಿಕ ಕ್ರೀಡಾ ಕಾರ್ಯಕ್ರಮಗಳನ್ನೂ ಆಯೋಜಿಸಿದ್ದೇವೆ

-ಕೋಡಿಹಳ್ಳಿ ಮುದುಕಪ್ಪ ಜಾತ್ರಾ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT