ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ: ಮಾದಿಗ ಸಮುದಾಯದ ಸಂಸದರಿಗೆ ಸಚಿವ ಸ್ಥಾನಕ್ಕೆ ಆಗ್ರಹ

Published 10 ಜೂನ್ 2024, 7:31 IST
Last Updated 10 ಜೂನ್ 2024, 7:31 IST
ಅಕ್ಷರ ಗಾತ್ರ

ಹೊಸಪೇಟೆ: ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ಮಾದಿಗ ಸಮುದಾಯದ ಇಬ್ಬರು ಸಂಸದರ ಪೈಕಿ ಒಬ್ಬರಿಗಾದರೂ ಸಚಿವ ಸ್ಥಾನ ನೀಡಬೇಕಿತ್ತು. ಮುಂದೆ ಸಂಪುಟ ವಿಸ್ತರಣೆಯಾಗುವಾಗ ಅದನ್ನು ನೀಡಲೇಬೇಕು ಎಂದು ವಿಜಯನಗರ ಜಿಲ್ಲಾ ಮಾದಿಗ ಮಹಾಸಭಾ ಒತ್ತಾಯಿಸಿದೆ.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಮಹಾಸಭಾದ ಅಧ್ಯಕ್ಷ ಸ್ಲಂ ರಾಮಚಂದ್ರ, ಸತತ ಏಳು ಬಾರಿ ಸಂಸದರಾಗಿ ಆಯ್ಕೆಯಾಗಿರುವ ರಮೇಶ್‌ ಜಿಗಜಿಣಗಿ ಅಥವಾ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಸಚಿವ ಸ್ಥಾನ ನೀಡಲೇಬೇಕಿತ್ತು. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರ 1.08 ಕೋಟಿ ಜನಸಂಖ್ಯೆ ಇದೆ, ಇದರಲ್ಲಿ ಮಾದಿಗರೇ ಬಹುಸಂಖ್ಯೆಯಲ್ಲಿದ್ದಾರೆ ಎಂದರು.

‘ಬೇರೆ ಸಮುದಾಯದವರಿಗೆ ಸಚಿವ ಸ್ಥಾನ ನೀಡಿದ್ದರ ಬಗ್ಗ ನಾವೇನೂ ಹೇಳುವುದಿಲ್ಲ. ಆದರೆ ನಮ್ಮನ್ನು ವೋಟ್‌ ಬ್ಯಾಂಕ್‌ ಆಗಿ ಮಾತ್ರ ಪರಿಗಣಿಸುವ ರಾಜಕೀಯ ಪಕ್ಷಗಳ ವರ್ತನೆ ಬಗ್ಗೆ ನಮಗೆ ಬೇಸರ ಇದೆ. ಕಾಂಗ್ರೆಸ್ ಸಹ ಇದೇ ರೀತಿ ನಡೆದುಕೊಳ್ಳುತ್ತಿದೆ. ಆಂಜನೇಯ ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡಿ ಎಂದು ಕೇಳಿಕೊಂಡರೂ ಅದನ್ನು ಕಿವಿಗೆ ಹಾಕಿಕೊಂಡಿಲ್ಲ. ಹೀಗಾಗಿ ನಮಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಅನ್ಯಾಯ ಆಗುತ್ತಿರುವ ಭಾವ ಮೂಡಿದೆ’ ಎಂದು ಅವರು ಹೇಳಿದರು.

ಸಮುದಾಯದ ಮುಖಂಡ ಎಂ.ಸಿ.ವೀರಸ್ವಾಮಿ ಮಾತನಾಡಿ, ಗೋವಿಂದ ಕಾರಜೋಳ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ವರದಿ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದಾಗ ನಮಗೆ ಒಂದಿಷ್ಟು ಸಮಾಧಾನವಾಗಿತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಮುಂದಿನ ಸಂಪುಟ ವಿಸ್ತರಣೆಯಲ್ಲಿ ಈ ಇಬ್ಬರಲ್ಲಿ ಒಬ್ಬರಿಗೆ ಸ್ಥಾನ ನೀಡಲೇಬೇಕು ಎಂದರು.

ಭರತ್‌ ಕುಮಾರ್ ಸಿ.ಆರ್. ಮಾತನಾಡಿ, ರಾಜ್ಯದಲ್ಲಿ ಇಬ್ಬರು ಬ್ರಾಹ್ಮಣರಿಗೆ, ಇಬ್ಬರು ಒಕ್ಕಲಿಗರು, ಒಬ್ಬ ಲಿಂಗಾಯತ ಸಂಸದರಿಗೆ ಸಚಿವ ಸ್ಥಾನ ಸಿಕ್ಕಿದೆ, ಬಹುಸಂಖ್ಯೆಯ ಮತದಾರರು ಇರುವ ಪರಿಶಿಷ್ಟ ಜಾತಿ ಅದರಲ್ಲೂ ಮಾದಿಗ ಸಮುದಾಯವನ್ನು ಕಡೆಗಣಿಸಿದ್ದು ಸರಿಯಲ್ಲ ಎಂದರು.

ಸಮುದಾಯದ ಮುಖಂಡರಾದ ಹನುಮಂತಪ್ಪ, ಸೆಲ್ವಂ, ರಾಜು, ಪಂಪಾಪತಿ, ರಘು ಜಿ.ವಿ., ಶ್ರೀನಿವಾಸ್, ಶೇಷು, ಕರಿಯಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT