ಹೂವಿನಹಡಗಲಿ(ವಿಜಯನಗರ ಜಿಲ್ಲೆ): ‘ಮೇಡ್ಲೇರಿ, ಹುಲಿಕಟ್ಟಿ ಮತ್ತು ರಾಣೇಬೆನ್ನೂರಿನ ಬೀರಲಿಂಗೇಶ್ವರ ದೇವಸ್ಥಾನಗಳನ್ನು ಕಾಗಿನೆಲೆ ಪೀಠಕ್ಕೆ ಹಸ್ತಾಂತರಿಸಿದರೆ, ಅದರಿಂದ ಬರುವ ಆದಾಯದಿಂದ ಮೆಡಿಕಲ್ ಕಾಲೇಜು ಪ್ರಾರಂಭಿಸಲಾಗುವುದು’ ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹ್ಯಾರಡ ಗ್ರಾಮದಲ್ಲಿ ಭಾನುವಾರ ಬೀರಲಿಂಗೇಶ್ವರ ದೇವಸ್ಥಾನ ನಿರ್ಮಾಣ ಭೂಮಿಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ದೈವದ ನಂಬಿಕೆಯಿಂದ ಭಕ್ತರು ಮೂರೂ ಬೀರಲಿಂಗೇಶ್ವರ ದೇವಸ್ಥಾನಗಳಿಗೆ ಕಾಣಿಕೆ ರೂಪದಲ್ಲಿ ಕೋಟ್ಯಂತರ ರೂಪಾಯಿ ಅರ್ಪಿಸುತ್ತಾರೆ. ಆದರೆ, ಕೆಲವರ ಸ್ವಾರ್ಥದಿಂದ ಹಣ ದುರುಪಯೋಗವಾಗುತ್ತಿದೆ. ಮೂರು ದೇವಸ್ಥಾನಗಳನ್ನು ಕಾಗಿನೆಲೆ ಪೀಠಕ್ಕೆ ಬಿಟ್ಟುಕೊಟ್ಟಲ್ಲಿ ಮೆಡಿಕಲ್ ಕಾಲೇಜು ತೆಗೆಯುತ್ತೇವೆ. ಎಲ್ಲರಿಗೂ ಪ್ರಯೋಜನವಾಗುತ್ತದೆ’ ಎಂದು ತಿಳಿಸಿದರು.
‘ಹಳ್ಳಿಗಳಲ್ಲಿ ದೇವಸ್ಥಾನಗಳಿಗಿಂತ ಉತ್ತಮ ಶಾಲೆಗಳು ನಿರ್ಮಾಣವಾಗಬೇಕಿದೆ. ದೇವಸ್ಥಾನ ಗಂಟೆಗಿಂತ ಶಾಲೆ ಗಂಟೆ ಬಾರಿಸಿದರೆ ಜ್ಞಾನ ಬೆಳೆಯುತ್ತದೆ. ನಮ್ಮ ಧಾರ್ಮಿಕ ಆಚರಣೆಗಳು ಮೌಢ್ಯಕ್ಕೆ ಒಳಗಾಗಬಾರದು. ಮಾಂಸಾಹಾರವನ್ನು ಆಹಾರ ಪದ್ಧತಿಯಾಗಿ ಮಾಡಿಕೊಂಡಿರುವ ಕೆಳಸ್ತರದ ಕುಟುಂಬಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿವೆ. ಪ್ರಾಣಿಬಲಿ, ಕಂದಾಚಾರಗಳನ್ನು ಸಂಪ್ರದಾಯಗಳಾಗಿ ಮುಂದುವರಿಸಬಾರದು’ ಎಂದು ಸಲಹೆ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.