ಹೊಸಪೇಟೆ (ವಿಜಯನಗರ): ಇಲ್ಲಿನ ಎಂ.ಪಿ. ಪ್ರಕಾಶ್ ನಗರ ಸಮೀಪದ ರುದ್ರಭೂಮಿಯಲ್ಲಿ ಶನಿವಾರ ರಾತ್ರಿ ಮಹಾಶಿವರಾತ್ರಿ ಅಂಗವಾಗಿ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ನಡೆಯಿತು.
ಇಷ್ಟಲಿಂಗ ಅಧ್ಯಯನ ಕೇಂದ್ರದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಮನೋವೈದ್ಯ ಡಾ. ಅಜಯ್ ಕುಮಾರ್ ತಾಂಡೂರ್ ಅವರು ಪೂಜೆ ಸಲ್ಲಿಸಿದರು. ಅನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡವರೆಲ್ಲರೂ ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡಿದರು. ಬಳಿಕ ಎಲ್ಲಾ ಸಮಾಧಿಗಳ ಬಳಿ ದೀಪ ಬೆಳಗಿಸಿದರು.
ಡಾ. ಅಜಯ್ ಕುಮಾರ್ ತಾಂಡೂರ್ ಮಾತನಾಡಿ, ರುದ್ರಭೂಮಿಯೇ ಅಂತಿಮ ಸತ್ಯ. ಸತ್ಯ ಇರುವಲ್ಲಿ ಶಿವ ನೆಲೆಸಿರುತ್ತಾನೆ. ಆದರೆ, ಸಮಾಜದಲ್ಲಿ ಸಾವು, ಅಂತ್ಯಕ್ರಿಯೆ, ಸ್ಮಶಾನದ ಬಗ್ಗೆ ಭಯ ಮತ್ತು ಮೌಢ್ಯ ಬಿತ್ತಲಾಗಿದೆ. ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ ಎನ್ನುವ ಬಸವ ವಾಣಿಯಂತೆ ಎಲ್ಲರೂ ಅರಿವನ್ನು ಜಾಗೃತವಾಗಿಟ್ಟುಕೊಂಡರೆ ನಿತ್ಯವೂ ಶಿವರಾತ್ರಿಯೇ ಸರಿ ಎಂದು ಹೇಳಿದರು.
ಕೇಂದ್ರದ ಟಿ.ಎಚ್.ಬಸವರಾಜ ಮಾತನಾಡಿ, ಯಾವುದೇ ಸ್ಥಳದಲ್ಲಿ ಭಕ್ತಿ ಭಾವದಿಂದ ದೇವರನ್ನು ನೆನೆದರೆ ಭಗವಂತ ಒಲಿಯುತ್ತಾನೆ. ಭಗವಂತನ ನೆನೆಯಲು ಇಂತಹುದೇ ಸ್ಥಳ ಇರಬೇಕೆಂದು ಇಲ್ಲ. ರುದ್ರಭೂಮಿ ಬಗ್ಗೆ ಸಮಾಜದಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಆ ಭಾವನೆ ಹೋಗಲಾಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ರುದ್ರಭೂಮಿಯಲ್ಲಿ ನಮ್ಮ ಹಿರಿಯರ ಸಮಾಧಿಗಳಿವೆ. ಶಿವರಾತ್ರಿಯಂದು ಶಿವನ ಜಪ ಮಾಡಿ, ಹಿರಿಯರ ಸಮಾಧಿ ಬಳಿ ದೀಪ ಬೆಳಗಿಸಿ ಗೌರವ ಸಲ್ಲಿಸುವುದು ದೊಡ್ಡ ಕೆಲಸ. ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುತ್ತಿರುವುದು ಖುಷಿ ತಂದಿದೆ ಎಂದು ಹೇಳಿದರು. ಮಾವಿನಹಳ್ಳಿ ಬಸವರಾಜ ಸೇರಿದಂತೆ ಇತರರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.