ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ |ನಾ‍ಳೆ ಮೋದಿ ಭೇಟಿ: ಭರ್ಜರಿ ತಯಾರಿ

ವಾಹನ ಸಂಚಾರ ಮಾರ್ಗದಲ್ಲಿ ಮಾರ್ಪಾಡು: 50 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ಅಂದಾಜು
Published 27 ಏಪ್ರಿಲ್ 2024, 5:27 IST
Last Updated 27 ಏಪ್ರಿಲ್ 2024, 5:27 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆ ಪ್ರಚಾರ ನಿಮಿತ್ತ ಭಾನುವಾರ ಸಂಜೆ ನಗರಕ್ಕೆ ಆಗಮಿಸಲಿದ್ದು, ಭರದ ಸಿದ್ಧತೆಗಳು ನಡೆದಿವೆ. ವಾಯಪಡೆ ಹೆಲಿಕಾಪ್ಟರ್‌ಗಳ ತಾಲೀಮು ಒಂದೆಡೆ ನಡೆದರೆ, ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ಪೆಂಡಾಲ್ ಹಾಕುವ ಕೆಲಸ ಚುರುಕಾಗಿ ಸಾಗಿದೆ.

‘ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ಪ್ರಚಾರ ಕೈಗೊಳ್ಳಲಿದ್ದಾರೆ. ಅಭ್ಯರ್ಥಿಗಳು, ಮುಖಂಡರಾದ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಮಾತ್ರ ವೇದಿಕೆಯಲ್ಲಿ ಇರಲಿದ್ದಾರೆ. 25 ಸಾವಿರ ಆಸನದ ವ್ಯವಸ್ಥೆ ಇರಲಿದ್ದು, 50 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಗಿ ಭದ್ರತೆ: ಎಸ್‌ಪಿಜಿ ಭದ್ರತಾ ವ್ಯವಸ್ಥೆ ಇರಲಿದ್ದು, ಈಗಾಗಲೇ ಅದರ ಸಿದ್ಧತೆ ನಡೆದಿದೆ. ವಾಯುಪಡೆ ಹೆಲಿಕಾಪ್ಟರ್‌ಗಳು ಶುಕ್ರವಾರ ಹಲವು ಬಾರಿ ನಗರದಲ್ಲಿ ಸುತ್ತು ಹೊಡೆದು, ಭಟ್ರಹಳ್ಳಿ ಆಂಜನೇಯ ದೇವಸ್ಥಾನದ ಬಳಿಯ ಹೆಲಿಪ್ಯಾಡ್‌ನಲ್ಲಿ ಇಳಿಯುವ, ಟೇಕಾಫ್‌ ಮಾಡುವ ತಾಲೀಮು ನಡೆಸಿದವು.

ಮೋದಿ ಅವರು ಇದೇ ಮೊದಲ ಬಾರಿಗೆ ನಗರದಲ್ಲಿ ತಂಗಲಿದ್ದು, ಸೋಮವಾರ ಬೆಳಿಗ್ಗೆ ಬಾಗಲಕೋಟೆಯತ್ತ ತೆರಳಲಿದ್ದಾರೆ.

ಬಿಜೆಪಿ ಸಭೆ: ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಸರಣಿ ಸಭೆಗಳು ಗುರುವಾರದಿಂದಲೇ ಆರಂಭವಾಗಿದ್ದು, ಶುಕ್ರವಾರವೂ ಅದು ಮುಂದುವರಿಯಿತು. ಹೊಸಪೇಟೆ ಸುತ್ತಮುತ್ತಲಿನ ಕಾರ್ಯಕರ್ತರು ಸಂಜೆ 4 ಗಂಟೆಯೊಳಗೆಯೇ ಸ್ಥಳದಲ್ಲಿ  ಹಾಜರಿರಬೇಕು, ಪ್ರಧಾನಿ ತೆರಳುವವರೆಗೆ ಯಾರೂ ಎದ್ದು ಹೋಗಬಾರದು ಎಂಬ ಸೂಚನೆ ನೀಡಲಾಯಿತು.

ವಾಹನ ನಿಲುಗಡೆ: ಸೂಚನೆ ಮರಿಯಮ್ಮನಹಳ್ಳಿ ಕಡೆಯಿಂದ ಸಮಾವೇಶಕ್ಕೆ ಜನರನ್ನು ಕರೆತರುವ ವಾಹನಗಳು ಬಸವೇಶ್ವರ ವೃತ್ತದಲ್ಲಿ ಜನರನ್ನು ಇಳಿಸಿ ನ್ಯಾಷನಲ್‌ ಕಾಲೇಜು ಮೈದಾನ ಗುರು ಕಾಲೇಜು ಎದುರುಗಡೆಯ ಖಾಲಿ ಜಾಗ ಪಿಡಿಐಟಿ ಕಾಲೇಜು ಮೈದಾನ ಭವರ್‌ಲಾಲ್ ಲೇಔಟ್‌ ಸಿದ್ಧಾರ್ಥೆ ಎನ್‌ಕ್ಲೇವ್‌ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಬೇಕು. ಕೊಪ್ಪಳ ಕಡೆಯ ವಾಹನಗಳು ಸಾಯಿಬಾಬಾ ವೃತ್ತದಲ್ಲಿ ಜನರನ್ನು ಇಳಿಸಿ ಟಿ.ಬಿ.ಡ್ಯಾಂ ಪಾರ್ಕಿಂಗ್ ಜೂನಿಯರ್ ಕಾಲೇಜಜು ಮೈದಾನ ಮತ್ತು ಡಿಎಆರ್ ಮೈದಾನದಲ್ಲಿ ನಿಲುಗಡೆ ಮಾಡಬೇಕು. ಸಂಡೂರು ಕಡೆಯ ವಾಹನಗಳು ಮಾರ್ಕಂಡೇಶ್ವರ ವೃತ್ತದಲ್ಲಿ ಜನರನ್ನು ಇಳಿಸಿ ಎಲ್‌ಎಫ್‌ಎಸ್‌ ಶಾಲೆ ವಾಲ್ಮೀಕಿ ಶಾಲೆ ದೀಪಾಯನ ಶಾಲೆ ಮೈದಾನಗಳಲ್ಲಿ ನಿಲುಗಡೆ ಮಾಡಬೇಕು. ಬಳ್ಳಾರಿ ಕಡೆಯ ವಾಹನಗಳು  ಗಾಂಧಿ ಚೌಕ ಬಳಿ ಜನರನ್ನು ಇಳಿಸಿ ತ್ರಿಶಾಪ್‌ ಎಸ್‌.ಎಲ್‌.ಚೌಕಿ ಬಳ್ಳಾರಿ ರೋಡ್‌ ಸರ್ಕಲ್‌ ಮೂಲಕ ಪಟೇಲ್ ಹೈಸ್ಕೂಲ್‌ ಮೈದಾನದಲ್ಲಿ ನಿಲುಗಡೆ  ಮಾಡಬೇಕು. ಗಂಗಾವತಿ–ಕಂಪ್ಲಿ ಕಡೆಯ ವಾಹನಗಳು ಪುಣ್ಯಮೂರ್ತಿ ಮತ್ತು ತ್ರಿಶಾಪ್‌ ಸರ್ಕಲ್‌ಗಳಲ್ಲಿ ಜನರನ್ನು ಇಳಿಸಿ ಲಕ್ಷ್ಮಿ ಸರ್ಕಲ್‌ ಮಲ್ಲಿಗೆ ಕ್ರಾಸ್‌ ಮೂಲಕ ಪಿಬಿಎಸ್‌ ಖಾಲಿ ಜಾಗ ಮತ್ತು ವಾಸವಿ ಶಾಲೆ ಮೈದಾನದಲ್ಲಿ ನಿಲುಗಡೆ ಮಾಡಬೇಕು.

ಬಸ್‌ ಸಂಚಾರ ಮಾರ್ಗ ಬದಲು ಹೊಸಪೇಟೆ ಬಸ್‌ ನಿಲ್ದಾಣಕ್ಕೆ ಬರುವ ಬಸ್‌ಗಳು ಭಾನುವಾರ ಕಾಲೇಜು ರಸ್ತೆಯಲ್ಲಿ ಸಂಚರಿಸುವುದನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.  ಮರಿಯಮ್ಮನಹಳ್ಳಿ ಕಡೆಯಿಂದ ಬರುವ ಮತ್ತು ಅತ್ತ ತೆರಳುವ ಬಸ್‌ಗಳು ವಿರೂಪಾಕ್ಷ ನಾಯಕ ವೃತ್ತ ಎಪಿಎಂಸಿ ಸರ್ಕಲ್‌ ವಾಲ್ಮೀಕಿ ಸರ್ಕಲ್‌ ರಾಮಾ ಸರ್ಕಲ್‌ ಸ್ವಾಗಿ ಮಾರ್ಕೆಟ್‌ ಮಾರ್ಗದಲ್ಲಿ ಸಂಚರಿಸಬೇಕು.  ಸಂಡೂರು ಕಡೆಯಿಂದ ಬಸ್‌ಗಳು ವಾಲ್ಮೀಕಿ ಸರ್ಕಲ್‌ ಸ್ವಾಗಿ ಮಾರ್ಕೆಟ್‌ ಮಾರ್ಗದಲ್ಲಿ ಕೊಪ್ಪಳದಿಂದ ಬರುವ ಬಸ್‌ಗಳು ಸಾಯಿಬಾಬಾ ವೃತ್ತ ಎಪಿಎಂಸಿ ವಾಲ್ಮೀಕಿ ಸರ್ಕಲ್‌ ಮೂಲಕ ಗಂಗಾವತಿ–ಕಂಪ್ಲಿ ಬಳ್ಳಾರಿ ಕಡೆಯಿಂದ ಬರುವ ಬಸ್‌ಗಳು ಹಾಲಿ ಕ್ರಮದಲ್ಲೇ ಮೂರಂಗಡಿ ಸರ್ಕಲ್‌ ಮೂಲಕ ಬಸ್‌ನಿಲ್ದಾಣಕ್ಕೆ ಬರಬೇಕು. ಬಳ್ಳಾರಿಯತ್ತ ಹೋಗುವ ಬಸ್‌ಗಳು ಪುಣ್ಯಮೂರ್ತಿ ಸರ್ಕಲ್‌ ಲಕ್ಷ್ಮೀ ಸರ್ಕಲ್‌ ಹಂಪಿ ರಸ್ತೆ ಕೆ.ಡಿ.ಸರ್ಕಲ್‌ ಎಂ.ಪಿ.ಪ್ರಕಾಶ ನಗರ ಬಳ್ಳಾರಿ ರಸ್ತೆ ಆಲದ ಮರ ಸರ್ಕಲ್ ಮೂಲಕ ಸಂಚರಿಸಬೇಕು ಎಂದು ಎಸ್‌ಪಿ ಶ್ರೀಹರಿಬಾಬು ಬಿ.ಎಲ್‌. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT